ಗೋಣಿಕೊಪ್ಪಲು, ಏ.28: ಪೊನ್ನಂಪೇಟೆ ಸಮೀಪ ಬೇಗೂರಿನ ಚೀಣಿವಾಡ ಗ್ರಾಮದ ಬೊಳ್ಳೆಂಗಡ ದಾದು ಪೂವಯ್ಯನವರ ಮನೆಯ ಮೇಲೆ ಗುಂಡಿನ ದಾಳಿಯಾಗಿದ್ದು ಯಾವದೇ ಪ್ರಾಣ ಹಾನಿ ಸಂಭವಿಸಿರುವದಿಲ್ಲ. ಶುಕ್ರವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಮನೆಯ ಮುಂಭಾಗದ ಬಲ ಕಿಟಕಿಯ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಅದೃಷ್ಟವಶಾತ್ ಮಲಗುವ ಕೋಣೆಯಲ್ಲಿ ಯಾರೂ ಕೂಡ ಘಟನೆಯ ದಿನದಂದು ಮಲಗಿರಲಿಲ್ಲ.
ಮಧ್ಯರಾತ್ರಿ ಸದ್ದನ್ನು ಗಮನಿಸಿದ ಮನೆ ಮಾಲೀಕ ತನ್ನ ಅಡುಗೆ ಕೋಣೆಗೆ ತೆರಳಿ ಯಾವದಾದರೂ ವಸ್ತು ಬಿದ್ದಿಬಹುದೆಂದು ಬಾವಿಸಿದ್ದರು. ಮನೆಯ ಹೊರಗೆ ಬರುವ ಪ್ರಯತ್ನ ಮಾಡಿರಲಿಲ್ಲ. ಮುಂಜಾನೆ 6 ಗಂಟೆಗೆ ಮನೆಯ ಹೊರಗಡೆ ಬಂದು ವೀಕ್ಷಿಸಿದಾಗ ಹೊರ ಭಾಗದಲ್ಲಿರುವ ಕಿಟಕಿಗೆ ಫೈರಿಂಗ್ ನಡೆದಿತ್ತು. ಕಿಟಕಿಯ ಗಾಜುಗಳು ಪುಡಿಪುಡಿ ಯಾಗಿದ್ದು ಮನೆಯ ಹೊರ ಭಾಗದಿಂದ ಫೈರಿಂಗ್ ನಡೆದಿರಬಹು ದೆಂದು ಅಂದಾಜಿಸಲಾಗಿದೆ. ಕಿಟಕಿಯ ಸುತ್ತ ಮುತ್ತ ಗುಂಡಿನ ಚಿಲ್ಲುಗಳು ಒಳ ಹೊಕ್ಕಿರುವದು ಕಂಡು ಬಂದಿದೆ. ನಾಡ ಬಂದೂಕು ಬಳಸಿ ಕೃತ್ಯ ನಡೆಸಲಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
(ಮೊದಲ ಪುಟದಿಂದ) ಸುದ್ದಿ ತಿಳಿದ ಪೊನ್ನಂಪೇಟೆ ಪೊಲೀಸರು ಹಾಗೂ ಗೋಣಿಕೊಪ್ಪ ಸರ್ಕಲ್ ಇನ್ಸ್ಪೆಕ್ಟರ್ ಸ್ಥಳಕ್ಕೆ ತೆರಳಿ ಮಹಜರು ನಡೆಸಿದ್ದು ದೂರು ದಾಖಲಿಸಿಕೊಂಡಿದ್ದಾರೆ. ಸುತ್ತ ಮುತ್ತಲಿನ ಸಿಸಿ ಕ್ಯಾಮೆರಾದ ಮಾಹಿತಿಗಳನ್ನು ಕಲೆ ಹಾಕಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸುತ್ತ ಮುತ್ತಲಿನ ಗ್ರಾಮಸ್ಥರು ದಾದು ಪೂವಯ್ಯ ಮನೆಗೆ ತೆರಳಿ, ಮನೆಯವರಿಗೆ ಧೈರ್ಯ ತುಂಬುತ್ತಿದ್ದಾರೆ. ಹಲವು ಸಂಘ ಸಂಸ್ಥೆಯಲ್ಲಿ ತೊಡಗಿಸಿಕೊಂಡಿರುವ ದಾದು ಪೂವಯ್ಯ ಬಿಜೆಪಿ ಕೃಷಿ ಮೋರ್ಚದ ಜಂಟಿ ಕಾರ್ಯದರ್ಶಿಯಾಗಿ ಸ್ಥಳೀಯ ದೇವಸ್ಥಾನ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸುತ್ತ ಮುತ್ತಲಿನ ಗ್ರಾಮಸ್ಥರೊಂದಿಗೆ ಅನ್ಯೋನ್ಯವಾಗಿರುವ ದಾದು ಪೂವಯ್ಯ ಯಾರೊಂದಿಗೂ ನಿಷ್ಠುರವಾಗಿ ನಡೆದುಕೊಂಡವರಲ್ಲ. ಚುನಾವಣಾ ಸಮಯದಲ್ಲಿ ಈ ರೀತಿಯ ಘಟನೆ ನಡೆದಿರುವದು ಗ್ರಾಮಸ್ಥರಲ್ಲಿ ಭಯದ ವಾತಾವರಣ ಕಂಡು ಬಂದಿದೆ. ಭಯದ ವಾತಾವರಣದಲ್ಲಿರುವ ಮನೆಯವರು ಪೊಲೀಸ್ ಬಂದೋಬಸ್ತ್ ನೀಡುವಂತೆ ಕೋರಿದ್ದಾರೆ.