ಕನ್ನಡ ಭಾಷೆಯು ಕೇವಲ ಪುರಾತನ ಭಾಷೆ ಮಾತ್ರವಲ್ಲ, ಅದೊಂದು ತುಂಬ ಶ್ರೀಮಂತ ಭಾಷೆಯೂ ಹೌದು. ಸಹಸ್ರ ವರ್ಷಗಳ ಹಿಂದೆಯೇ “ಕುರಿತೋದೆಯುಮ್ ಕಾವ್ಯ ಪ್ರಯೋಗ ಪರಿಣತಮತಿಗಳ್” ಇದ್ದ ಈ ಚೆಲುವ ಕನ್ನಡ ನಾಡಿನಲ್ಲಿ ಪಂಪ, ರನ್ನ, ಪೊನ್ನರಂತಹ ಶ್ರೇಷ್ಠ ರತ್ನತ್ರಯರು ತಮ್ಮ ಕಾಣಿಕೆಯನ್ನು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ್ದಾರೆ. ಅನಂತರದ ದಿನಗಳಲ್ಲೂ ಹಲವಾರು ಕವಿಗಳೂ ಲೇಖಕರೂ ತಮ್ಮ ಲೇಖನಿಗಳನ್ನು ಹರಿಯಬಿಟ್ಟು ಕನ್ನಡ ಭಾಷೆಯ ಶ್ರೀಮಂತಿಕೆಗೆ ತಮ್ಮ ಕಾಣಿಕೆಗಳನ್ನು ಸಲ್ಲಿಸಿದ್ದಾರೆ. ಆದರೆ, ಯಾವುದೇ ಸಾಹಿತ್ಯವನ್ನು ಬರೆಯದೆ ಪೀಳಿಗೆಯಿಂದ ಪೀಳಿಗೆಗೆ ಕೇವಲ ಬಾಯಿಯಿಂದ ಬಾಯಿಯ ಮೂಲಕ ಸಾಹಿತ್ಯವನ್ನು ಇಂದಿನವರೆಗೂ ತನ್ನ ಮೂಲಸೊಗಡನ್ನು ಕೆಡಿಸಿಕೊಳ್ಳದಂತೆ ಬೆಳೆಸಿಕೊಂಡು ಬಂದಿರುವ ಸಾಹಿತ್ಯವೇ ಜಾನಪದ ಸಾಹಿತ್ಯವಾಗಿದೆ. ಇಂತಹ ಜಾನಪದ ಸಾಹಿತ್ಯದ ಶ್ರೀಮಂತಿಗೆಯು ಕನ್ನಡ ಭಾಷೆಗೆ ತನ್ನ ಕಾಣಿಕೆಯನ್ನು ಹಲವು ರೂಪಗಳಲ್ಲಿ ಕೊಟ್ಟಿರುತ್ತದೆ.
ಕೇವಲ ಹಾಡು, ಕವನಗಳಲ್ಲದೆ ಗಾದೆಗಳು, ಯಕ್ಷಗಾನದಂತಹ ನಾಟಕಗಳು, ಶ್ರೀಕೃಷ್ಣ ಪಾರಿಜಾತ, ಗೀಗಿ ಪದಗಳು, ಡೊಳ್ಳಿನ ಕುಣಿತ, ಕಂಸಾಳೆ, ಕರಡಿ ಮಜಲು, ವೀರಗಾಸೆ, ನಂದಿಕೋಲು ಕುಣಿತ ಮುಂತಾದ ಹಲವಾರು ಕಲೆಯ ಪ್ರಕಾರಗಳನ್ನು ಜಾನಪದ ಸಾಹಿತ್ಯದಲ್ಲಿ ಗುರುತಿಸಬಹುದಾಗಿದೆ. ಈ ಎಲ್ಲ ಕಲೆಗಳು ಕನ್ನಡನಾಡಿನ ಹಲವಾರು ಪ್ರದೇಶಗಳ ಪ್ರಾದೇಶಿಕ ಸೊಗಡನ್ನು ಮುಂದಿನ ಪೀಳಿಗೆಗೆ ಜೋಪಾನವಾಗಿ ಕೊಡುತ್ತಾ ಬಂದಿದೆ. ಇಂತಹ ಜಾನಪದ ಸಾಹಿತ್ಯವು ಎಲ್ಲ ಕ್ಷೇತ್ರಗಳಲ್ಲೂ ತನ್ನನ್ನು ಇಳಿಬಿಟ್ಟು ಅದರಲ್ಲಿರುವ ಸೊಬಗನ್ನು ತನ್ನಲ್ಲಿಗೆ ಸೆಳೆದುಕೊಂಡಿದೆ. ಜಾನಪದ ಸಾಹಿತ್ಯದ ಸೃಷ್ಟಿಕರ್ತನು ಯಾರೆಂದು ತಿಳಿದು ಬಂದಿಲ್ಲವಾದರೂ ಇದು ಬಾಯಿಯಿಂದ ಬಾಯಿಗೆ ಹರಿದುಬಂದ ಸಾಹಿತ್ಯವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಇವುಗಳಲ್ಲಿರುವ ಸೊಬಗು, ಭಾಷೆಯಲ್ಲಿನ ಸರಳತೆ ಕೇಳುಗನನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತವೆ. ಭಾಷೆಯು ಸರಳವಾಗಿದ್ದರೂ ಅದರ ವಿಷಯದಲ್ಲಿರುವ ವೈವಿಧ್ಯತೆಗಳು ಬೆರಗುಗೊಳಿಸುವಂತಿವೆ. ಹಳ್ಳಿಯ ಹೆಣ್ಣುಮಕ್ಕಳಿಗಿರುವ ಮನೋಭಾವ, ಅವರು ತೌರಿಗೆ ತೋರುವ ಪ್ರೇಮ, ಮಕ್ಕಳ ಅಳು ನಗುವಿನಲ್ಲೂ ಕಾಣುವ ಚಿತ್ರಣಗಳು ವಿಶಾಲವೂ ಆಳವೂ ಆಗಿದೆ.
ಹೆಣ್ಣು ಮಗುವನ್ನು ಹೆತ್ತೊಡನೆಯೇ ಮನೆಗೆ ಶ್ರೀಲಕ್ಷ್ಮಿಯೇ ಬಂದಳು ಎಂದು ಹಲವರು ಬೀಗುವುದುಂಟು. ಆದರೆ ಜಾನಪದದ ಕವಿಗೆ ಆ ಹೆಣ್ಣುಮಗುವು “ನೆರೆಮನೆಯ ಸಿರಿದೇವಿ” ಆಗಿರುವುದರಿಂದ “ಹೆಣ್ಣು ಹೆತ್ತಳೆಂದು ಹೆಚ್ಚಳವು ಬೇಡ” ಎಂದು ಹೇಳಿಬಿಡುತ್ತಾನೆ. ಹೆಣ್ಣನ್ನು ಮದುವೆ ಮಾಡಿಕೊಟ್ಟರಷ್ಟೆ ಸಾಕೇ? ಅಲ್ಲಿ, ತನ್ನ ಗಂಡನ ಮನೆಯಲ್ಲಿ ಹೇಗಿರಬೇಕು ಎನ್ನು ನೀತಿಸಂಹಿತೆಯನ್ನೂ ಜಾನಪದ ಸಾಹಿತ್ಯದಲ್ಲಿ ಗುರುತಿಸಬಹುದಾಗಿದೆ. “ಅತ್ತೇಮಾವಗಂಜಿ ಸುತ್ತೇಳು ನೆರೆಗಂಜಿ ಮತ್ತೆ ಆಳುವ ದೊರೆಗಂಜಿ ಮಗಳೆ ಅತ್ತೆ ಮನೆಯಲ್ಲಿ ಬಾಳವ್ವ” ಎಂದು ಹೆಣ್ಣಿಗೆ ಗಂಡನ ಮನೆಯಲ್ಲಿ ಬದುಕಬೇಕಾದ ನಿಯಮವನ್ನು ಜಾನಪದ ಸಾಹಿತ್ಯದಲ್ಲಿ ತಿಳಿಸಲಾಗಿದೆ. “ನೆರೆಮನೆಯ ಸಿರಿದೇವಿ ನೀನಾಗು ಮಗಳೆ ಮನೆಯೊಳಗೆ ಭೇದ ಬಗೆಬೇಡ, ತುಂಬಿದಾ ಮನೆಯ ಒಡೀಬೇಡ” ಎನ್ನುವ ತತ್ತ್ವಶಾಸ್ತ್ವವನ್ನೂ ಬೋಧಿಸಲಾಗುತ್ತದೆ. ಅಷ್ಟೇ ಅಲ್ಲ, ಆ ಹೆಣ್ಣು ಮಗುವು ಮದುವೆಯಾಗಿ ಗಂಡನ ಮನೆಗೆ ಹೋಗುವಾಗಲೂ ಅವಳಿಗೆ ಇಂತಹ ತಿಳಿವಳಿಕೆಯನ್ನು ನೀಡಿದ ತನ್ನ ತೌರುಮನೆಯು ಅದೆಷ್ಟು ಸುಂದರ, ಎಷ್ಟು ಅಪ್ಯಾಯಮಾನ ಎಂಬುದನ್ನು ಸುಂದರವಾದ ಕಲ್ಪನೆಯಲ್ಲಿ ತಿಳಿಸುತ್ತಾನೆ. ಹೆಣ್ಣಿಗೆ ತೌರುಮನೆಗೆ ಹೋಗುವ ದಾರಿಯಲ್ಲಿ “ಕಲ್ಲು ಮುಳ್ಳುಗಳಿರುವುದಿಲ್ಲ, ಸಾಸಿವೆಯಷ್ಟೂ ಮರಳಿರುವುದಿಲ್ಲ”ವಂತೆ! ಇಂತಹ ತವರಿನ ಹಂಬಲವು ಹೆಣ್ಣು ಮಕ್ಕಳಿಗೆ ಇರುವುದನ್ನು ಜಾನಪದದಲ್ಲಿ ಬಹಳ ಸ್ವಾರಸ್ಯವಾಗಿ ವಿವರಿಸಲಾಗಿದೆ. ಬಳೆಗಾರನು ತನ್ನ ಮನೆಗೆ ಬಂದಾಗ ಹೆಣ್ಣುಮಗಳು ಆ ವ್ಯಾಪಾರಿಗೆ ಹೀಗೆ ಹೇಳುತ್ತಾಳೆ, “ಭಾಗ್ಯದಾ ಬಳೆಗಾರ,ಹೋಗಿ ಬಾ ನನ್ನ ತವರೀಗೆ” ತವರಿನ ದಾರಿಯಾದರೂ ಆ ಬಳೆಗಾರನಿಗೆ ಹೇಗೆ ಗೊತ್ತಾಗಬೇಕು? ಆತ ಆ ಬಾಲೆಯನ್ನು ಕೇಳುತ್ತಾನೆ “ನಿನ್ನ ತವರೂರ ನಾನೇನು ಬಲ್ಲೇನು?” ಅದಕ್ಕೆ ಆ ಹೆಣ್ಣು ಕೊಡುವ ಉತ್ತರದಲ್ಲಿ ತವರಿನ ವ್ಯಾಮೋಹ, ಹೆಮ್ಮೆಯನ್ನು ಹೀಗೆ ಕಾಣಬಹುದಾಗಿದೆ “ ಬಾಳೆ ಬಲಕ್ಕೆ ಬಿಡೋ, ಸೀಬೆ ಎಡಕ್ಕೆ ಬಿಡೋ ದಾರಿಯ ನಡುವೆ ಹೋಗೋ ಬಳೆಗಾರ.ಅಲ್ಲಿ ನನ್ನ ತವರೂರಿದೆ” ಅಷ್ಟೇ ಅಲ್ಲ, ಅವಳ ತವರು ಮನೆಯಲ್ಲಿ “ಹಂಚಿನ ಮನೆಯಿದೆ, ಕಂಚಿನ ಕದವಿದೆ, ಮಿಂಚಾಡೋವೆರೆಡು ಗಿಳಿಗಳಿವೆ. ಅಲ್ಲಿ ಆಲೆ ಆಡುತಾವೆ, ಗಾಣ ತಿರುಗುತಾವೆ,ನವಿಲು ಸಾರಂಗ ನಲಿಯುತ್ತವೆ”
ಮದುವೆಯಾಗಿ ಹೆಣ್ಣುಮಗಳು ಗಂಡನ ಮನೆಗೆ ಬಂದಿದ್ದಾಳೆ. ಆದರೆ ಅವಳ ನೆನಪು ಮಾತ್ರ ತವರಿನಲ್ಲೇ ಮುಳುಗಿಹೋಗಿರುತ್ತದೆ. ಸಮಯ ಸಾಗುತ್ತಾ ಹೋಗುತ್ತಿರುತ್ತದೆ. ಆಷಾಢಮಾಸವೂ ಬಂದುಬಿಡುತ್ತದೆ.ಆದರೆ ಅವಳ ಅಣ್ಣನು ಅವಳನ್ನು ಕರೆದುಕೊಂಡು ಹೋಗಲು ಬರುವುದೇ ಇಲ್ಲ. ಹಾಗಾಗಿ ಆ ಹೆಣ್ಣುಮಗಳು ಮನೆ ಬಾಗಿಲಿನಲ್ಲಿ ಅಣ್ಣನನ್ನು ಕಾಯುತ್ತಾ ಹೀಗೆ ಪರಿತಪಿಸುತ್ತಾಳೆ. “ ಆಷಾಢಮಾಸ ಬಂದೀತವ್ವ, ಕಾಸಾ ಅಣ್ಣ ಬರಲಿಲ್ಲ” ಇದರಲ್ಲಿ ನಾವು ಗುರುತಿಸುವ ಅಂಶವೆಂದರೆ ಹೆಣ್ಣು ಮಕ್ಕಳಿಗೆ ತಮ್ಮ ತವರಿನ ಮೇಲಿರುವ ಅಭಿಮಾನವು ಅದೆಷ್ಟು ಆಳವಾದುದು ಎಂದು. ಹಾಗೆಯೇ ತನ್ನಣ್ಣನನ್ನು ಕಾತರದಿಂದ ಕಾಯುತ್ತಿರುವಾಗ ಅಣ್ಣ ಬಂದೇ ಬಿಡುತ್ತಾನೆ. ಅವನು ತನ್ನ ಪ್ರೀತಿಯ ತಂಗಿಯನ್ನು ಕರೆದೊಯ್ಯಲು “ಕುದುರೇನ ತಂದಿವ್ನಿ, ಜೀನಾನ ಬಿಗಿದಿವ್ನಿ,ಬರಬೇಕು ತಂಗಿ ಮದುವೇಗೆ” ಆಗ ಆ ಪ್ರೀತಿ ತಂಗಿ ತನ್ನ ತಾಪತ್ರಯಗಳನ್ನು ಅಣ್ಣನೊಂದಿಗೆ ಹೇಳಿಕೊಳ್ಳುತ್ತಾಳೆ, “ಅಂಗ್ಳ ಗುಡಿಸೋರಿಲ್ಲ, ಗಂಗ್ಳ ತೊಳೆಯೋರಿಲ್ಲ ಹೇಂಗೆ ಬರಲಣ್ಣ ಮದುವೇಗೆ?” ಅದಕ್ಕೆ ಆ ಅಣ್ಣನ ಉತ್ತರ ಹೀಗಿರುತ್ತದೆ “ಅಂಗ್ಳಾಗೆ ಆಳಿಡುವೆ, ಗಂಗ್ಳಾಗೆ ತೊತ್ತಿಡುವೆ ಬರಬೇಕು ತಂಗಿ ಮದುವೇಗೆ”
ಅಣ್ಣನ ಮದುವೆಗೆ ಹೋಗುವಾಗ ಆ ತಂಗಿಗೆ “ಮಳೆಯಾರ ಬಂದೀತು, ಹೊಳೆಯಾರ ತುಂಬೀತು ಹೆಂಗೆ ಬರಲಣ್ಣ ಮದುವೆಗೆ?” ಅದಕ್ಕೆ ಆ ಅಣ್ಣ ಉತ್ತರಿಸುತ್ತಾನೆ “ ಚಿನ್ನಾದ ಹರಿಗೋಲ್ಗೆ ರನ್ನಾದ ಹುಟ್ಟಾಕಿ ಜೋಕೇಲಿ ನಿನ್ನ ಕರೆದೊಯ್ವೆ” ಇಂತಹ ಹೆಣ್ಣು ಮಗಳು ಗಂಡನೊಡನೆ ಸಂಸಾರಮಾಡಿ ಮತ್ತೆ ಮಕ್ಕಳನ್ನು ಹೆತ್ತಾಗ, ಆ ಮಗುವು ಅಳುವ ದೃಶ್ಯವನ್ನಂತೂ ಇನ್ನಿಲ್ಲದಂತೆ ಜಾನಪದದಲ್ಲಿ ವರ್ಣಿಸಲಾಗಿದೆ. “ಅಳುವ ಕಂದನ ತುಟಿಯು ಹವಳದಾ ಕುಡಿಹಂಗೆ, ಕುಡಿಹುಬ್ಬು ಬೇವಿನೆಸಳಂಗೆ, ಕಣ್ಣಿನ ನೋಟ ಶಿವನ ಕೈ ಅಲಗು ಹೊಳೆದಂತೆ” ಕಾಣುತ್ತದೆ. ಇನ್ನು ಆ ಮಗುವು ರಚ್ಚೆ ಹಿಡಿದು ಅಳುವಾಗ ಹಡೆದಬ್ಬೆಗೆ ಮಗುವಿಗೆ ಏನೋ ಬೇಕು, ಹಾಗಾಗಿ ಕಂದಮ್ಮನು ಅಳುತ್ತಿದ್ದಾನೆ ಎನ್ನಿಸಿ ಮಗುವನ್ನೇ ಅವಳು ಏನು ಬೇಕೆಂದು ಕೇಳುತ್ತಾಳೆ.
“ಯಾಕಳುವೆ ಎಲೆರಂಗ ಬೇಕಾದ್ದು ನಿನಗಿದೆ ನಾಕೆಮ್ಮೆ ಕರೆದ ನೊರೆಹಾಲು” ಎನ್ನುತ್ತಾ ಈ ನಾಲ್ಕು ಎಮ್ಮೆಗಳ ಹಾಲನ್ನು “ನೀ ಕೇಳಿದಾಗ ಕೊಡುವೇನು” ಎನ್ನುವ ಭರವಸೆಯನ್ನೂ ಹಠಹಿಡಿದ ಮಗುವಿಗೆ ಕೊಡುತ್ತಾಳೆ. ಆದರೂ ಹಿಡಿದ ರಚ್ಚೆಯನ್ನು ಆ ಮಗುವು ಬಿಡುವುದಿಲ್ಲ. ಆಗ ಆ ಮಗುವಿನ ಅಮ್ಮ “ಯಾತಕಳುತಾನೆಂದು ಎಲ್ಲಾರು ಕೇಳ್ಯಾರು” ಎನ್ನುವ ಗಾಭರಿಯನ್ನು ವ್ಯಕ್ತಪಡಿಸುತ್ತಾಳೆ. ಕೊನೆಗೆ ಅಲ್ಲಿರುವವರಿಗೆ ಮಗುವಿನ ಅಳುವಿನ ಕಾರಣವನ್ನು ತಿಳಿಸಿಬಿಡುತ್ತಾಳೆ “ಕಾಯದಾ ಹಾಲ ಕೆನೆ ಬೇಡಿ,ಕಂದಯ್ಯ ಕಾಡಿ ಕೈಬಿಟ್ಟು ಇಳಿಯಾನು!” ಹೀಗೆ ಮಗುವು ಅತ್ತರೂ ಪರವಾಗಿಲ್ಲ. “ಅತ್ತರೇ ಅಳಲವ್ವ ಈ ಕೂಸು ನಮಗಿರಲಿ ಕೆಟ್ಟರೇ ಕೆಡಲಿ ಮನೆಗೆಲಸ, ಇಂತಹ ಮಕ್ಕಳಿರಲವ್ವ ಮನೆತುಂಬ” ಎನ್ನುವ ಹೃದಯವೈಶಾಲ್ಯವನ್ನೂ, ಮಾತೃ ಹೃದಯವನ್ನೂ ಅನಾವರಣ ಗೊಳಿಸಿ ಬಿಡುತ್ತಾಳೆ. ಮಗುವಿನ ಬೆಳವಣಿಗೆಗೆ ಬಯಲಿನ ಆಟವು ಬಹಳ ಮುಖ್ಯವಾದು ದಾಗಿದೆ. ಆದರೆ, ಹೀಗೆ ಬಯಲಿಗೆ ಹೋಗಿ ಆಟವಾಡಿದರೆ ಆ ಮಗುವಿನ ಕಾಲಿಗೆ ಮಣ್ಣು ಅಂಟಿಕೊಳ್ಳ ದಿದ್ದೀತೇ ? ಆದರೂ ಆ ತಾಯಿಗೆ ಬಯಲಿನಲ್ಲಿ ಆಡುವ ಮಗುವಿನ ಕಾಲು ಕೊಳೆಯಾಗುವ ಭಯವಿಲ್ಲ. “ಆಡಿ ಬಾ ನನ್ನ ಕಂದ ಅಂಗಾಲ ತೊಳೆದೇನು,ತೆಂಗಿನ ಕಾಯಿ ತಿಳಿನೀರು ತಕ್ಕೊಂಡು ಬಂಗಾರದ ಮೋರೆ ತೊಳೆದೇನು ”ಎಂದು ಹೇಳುತ್ತಾ ಮಗುವನ್ನು ಆಡಲು ಬಯಲಿಗೆ ಕಳುಹಿಸಿಬಿಡುತ್ತಾಳೆ. ಇಲ್ಲಿ ತಾಯಿಯೊಬ್ಬಳು ತನ್ನ ಮಗುವಿಗೆ ತೋರುವ ವಾತ್ಸಲ್ಯವನ್ನು ಗುರುತಿಸಬಹುದಾಗಿದೆ.
ಜಾನಪದ ಸಾಹಿತ್ಯವು ಪರಾಕಾಷ್ಠೆಗೇರಿದ ಸಂದರ್ಭದಲ್ಲಿ ಈಗಿನಂತೆ ರಸ್ತೆಗಳಲ್ಲಿ ಹೊಗೆಯುಗುಳುವ ವಾಹನಗಳ ಸಂಚಾರವಿರಲಿಲ್ಲ. ಏನಿದ್ದರೂ ಎತ್ತಿನ ಗಾಡಿಯೇ ಸಾಮಾನು ಸಾಗಣೆಗೆ ಪ್ರಮುಖ ಹಾಗೂ ಏಕೈಕ ವಾಹನವಾಗಿತ್ತು. ಅದರಲ್ಲಿ ಊರಿಂದ ಊರಿಗೆ ಪಯಣಬೆಳೆಸುವಾಗ ಬಹಳ ಸಮಯವೂ ತಗುಲುತ್ತಿತ್ತು. ಹಾಗಾಗಿ ಆ ಎತ್ತಿನಗಾಡಿಯ ಚಾಲಕನು ಎತ್ತಿನ ಕೊಂಬಿಗೆ ಗೆಜ್ಜೆಯನ್ನು ಕಟ್ಟಿ, ಆ ಜೋಡಿ ಎತ್ತುಗಳು ಹೆಜ್ಜೆ ಹಾಕುವಾಗ ಹೊರಡಿಸುವ ಗೆಜ್ಜೆಯ ನಾದಕ್ಕೆ ತನಗಾಗುವ ಪ್ರಯಾಣದ ಸೋಲನ್ನು ಕಡಿಮೆಗೊಳಿಸುತ್ತಿದ್ದನು. ಆ ಎತ್ತುಗಳ ಕೊಂಬಿನ ಗೆಜ್ಜೆಯ ನಾದವು ಘಲ್ ಘಲ್ ಎನ್ನುವಾಗ ಅದರ ಚಾಲಕನಿಗೆ ಸ್ಫೂರ್ತಿಬಂದು ಅಲ್ಲೇ ಆಶುಕವಿತೆಯೊಂದನ್ನು ಕಟ್ಟಿಬಿಡುತ್ತಿದ್ದನಂತೆ! “ಘಲ್ಲು ಘಲ್ಲೆನುತಾ ಗೆಜ್ಜೆ ಘಲ್ಲೂ ತಾನೆನುತಾ ಬಲ್ಲಿದ ರಂಗನ ವಲ್ಲಿಯ ಮೇಲೆ ಚೆಲ್ಲಿದರೋಕುಳಿಯ” ಎನ್ನುತ್ತಾ ತಾನೇ ರಂಗನಾಗಿ, ತನ್ನ ಮೇಲುದಿಯ ಮೇಲೆ ಆ ಹಸುಗಳು ಮಾಡಿರಬಹುದಾದ ಕೊಳಕನ್ನು ಓಕುಳಿಯ ರೂಪದಲ್ಲಿ ಕಾಣುತ್ತಾನೆ.
ಜಾನಪದ ಸಾಹಿತ್ಯವು ಕವಿತೆಗಳಂತೆ ಸಹಸ್ರಾರು ಗಾದೆಗಳನ್ನೂ ಸೃಷ್ಠಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿವೆ. ಜಗತ್ತಿನ ಆಗು-ಹೋಗುಗಳನ್ನು ತಮ್ಮ ಅನುಭವದ ಕುಲುಮೆಯಲ್ಲಿ ಪಕ್ವಗೊಳಸಿಕೊಂಡಾಗ ಉತ್ತಮ ಗಾದೆಗಳು ಸೃಷ್ಠಿಯಾಗುತ್ತವೆ.
“ಅಕ್ಕ ಬಾರದಿದ್ದರೆ ಅಮವಾಸ್ಯೆ ನಿಲ್ಲುತ್ತದೆಯೇ?”ಎನ್ನುವ ಗಾದೆಯಲ್ಲಿ ಸಮಯವು ಯಾರನ್ನೂ ಕಾಯದು ಎಂಬುದನ್ನು ಸುಲಭದಲ್ಲಿ ಹೇಳಲಾಗಿದೆ. ಹಾಗೆಯೇ ಸೋಮಾರಿಗಳ ಬಗ್ಗೆ ಗಾದೆಯನ್ನು ಸೃಷ್ಠಿಸಿ “ಬಾಳೆ ಎತ್ತೋ ಗುಂಡಾ” ಎಂದರೆ “ಉಂಡವರೆಷ್ಟು” ಎಂದಾತ ಕೇಳುತ್ತಾನೆ. ಜನರು ಲಂಚಪ್ರಪಂಚದ ಲಾಲಸೆಯಲ್ಲಿ ಮುಳುಗಿಹೋದಾಗ “ಆರು ಕೊಟ್ಟರೆ ಅತ್ತೆಯ ಕಡೆ, ಮೂರು ಕೊಟ್ಟರೆ ಸೊಸೆಯ ಕಡೆ”ಎನ್ನುವ ಗಾದೆಯು ಹುಟ್ಟಿಕೊಳ್ಳುತ್ತದೆ. “ಹಾಲು ಕೊಳ್ಳುವವನಿಗೆ ಎಮ್ಮೆಯ ಬೆಲೆಯಾದರೂ ಏಕೆ”ಎನ್ನುವ ಗಾದೆಯಲ್ಲಿ ಅನಗತ್ಯ ವಿಚಾರಗಳ ಬಗ್ಗೆ ಕೈಹಾಕುವವರನ್ನು ಟೀಕಿಸಲಾಗಿದೆ. ಹೀಗೆ, ಜಾನಪದ ಸಾಹಿತ್ಯದಲ್ಲಿ ಶ್ರೀಸಾಮಾನ್ಯನು ಪ್ರಕೃತಿಯಲ್ಲಿ ಕಾಣುವ ಎಲ್ಲ ಸೊಬಗನ್ನೂ, ತನ್ನ ದೈನಂದಿನ ಬದುಕಿನಲ್ಲಿ ನಡೆಯುವ ಘಟನೆಗಳಿಗೆ ಒಂದು ರೂಪವನ್ನು, ವಿಶೇಷವಾಗಿ ಹೆಣ್ಣುಮಕ್ಕಳ ಮನೋಸ್ಥಿತಿಗೊಂದು ಆಕಾರವನ್ನೂ, ಮಕ್ಕಳ ಆಟಪಾಟಗಳಿಗೆ ನಗು ಅಳುಗಳಿಗೆ ಒಂದು ಚಿತ್ತಾರವನ್ನೂ ಕವನದ ರೂಪದಲ್ಲಿ ನೀಡಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾನೆ. ತನ್ನ ಅನುಭವದ ಮೂಸೆಯಲ್ಲಿ ಬದುಕನ್ನು ಭಟ್ಟಿ ಇಳಿಸಿ ಗಾದೆಗಳನ್ನು ರೂಪಿಸಿದ್ದಾನೆ. ಈ ಸಾಹಿತ್ಯದ ಚೆಲುವು ಈಗಿನ ಆಧುನಿಕ, ನಾಗರಿಕ ಮಕ್ಕಳು ಅರಿತು, ಅನುಭವಿಸಿ ಮುಂದಿನ ಪೀಳಿಗೆಗೂ ಯಥಾವತ್ತಾಗಿ ಅಥವಾ ಇನ್ನೂ ಶ್ರೀಮಂತಗೊಳಿಸಿ ವರ್ಗಾವಣೆ ಮಾಡಿದರೆ ಜಾನಪದ ಸಾಹಿತ್ಯವು ಅಮರವಾಗಿ ಉಳಿಯಬಹುದು.
?ಕಿಗ್ಗಾಲು ಎಸ್. ಗಿರೀಶ್, ಮೂರ್ನಾಡು.