ಮೋದಿ ಭೇಟಿಗೂ ಮುನ್ನ ಸ್ಫೋಟ
ಕಠ್ಮಂಡು, ಏ. 29: ನೇಪಾಳದಲ್ಲಿ ಭಾರತದ ಸಹಕಾರದಿಂದ ಅಭಿವೃದ್ಧಿಪಡಿಸಿರುವ ಜಲವಿದ್ಯುತ್ ಯೋಜನೆಯ ಘಟಕದ ಕಚೇರಿ ಬಳಿ ಬಾಂಬ್ ಸ್ಫೋಟಗೊಂಡಿದ್ದು, ಮೋದಿ ಭೇಟಿಗೂ ಮುನ್ನ ಈ ಘಟನೆ ನಡೆದಿದೆ. ಕೆಲವೇ ವಾರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇಪಾಳಕ್ಕೆ ಭೇಟಿ ನೀಡಲಿದ್ದು, ಇದಕ್ಕೂ ಮುನ್ನ ಈ ಘಟನೆ ನಡೆದಿದೆ. ಕಠ್ಮಂಡುವಿನಿಂದ ಸುಮಾರು 500 ಕಿ.ಮೀ. ದೂರದಲ್ಲಿರುವ ತುಮಲಿಂಗಾರ್ ಪ್ರದೇಶದಲ್ಲಿ ಭಾರತದ ಸಹಯೋಗದಲ್ಲಿ 900 ಮೆಗಾವ್ಯಾಟ್ ಅರುಣ್-III ಜಲವಿದ್ಯುತ್ ಯೋಜನೆಯ ಘಟಕದ ಕಚೇರಿಯ ಕಾಂಪೌಂಡ್ ಗೋಡೆಗೆ ಹಾನಿಗೊಳಗಾಗಿದೆ ಎಂದು ಅಲ್ಲಿನ ಅಧಿಕಾರಿ ಶಿವರಾಜ್ ಜೋಷಿ ತಿಳಿಸಿದ್ದಾರೆ.
ಎಟಿಎಂನಲ್ಲೇ ಸಿಗುತ್ತಿದೆ ನಕಲಿ ನೋಟು
ಕಾನ್ಪುರ್, ಏ. 29: ಉತ್ತರ ಪ್ರದೇಶದ ಕಾನ್ಪುರ್ದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ)ದ ಎಟಿಎಂನಲ್ಲೇ 2000 ರೂ. ಮುಖ ಬೆಲೆಯ ನಕಲಿ ಮತ್ತು ಹರಿದ ನೋಟುಗಳು ಬರುತ್ತಿವೆ. ಶನಿವಾರ ಎಸ್ಬಿಐ ಎಟಿಎಂನಲ್ಲಿ ಹಣ ಡ್ರಾ ಮಾಡಿದ ಪ್ರಶಾಂತ್ ಮೌರ್ಯ ಅವರ ಕೈಗೆ 2000 ರೂಪಾಯಿ ಮುಖ ಬೆಲೆಯ ನಕಲಿ ನೋಟು ಹಾಗೂ ಆರು ಹರಿದ ನೋಟುಗಳು ಬಂದಿವೆ. ನಾನು ತುರ್ತಾಗಿ ವೇತನ ನೀಡಬೇಕಾಗಿತ್ತು. ಆದರೆ ಹಣ ಡ್ರಾ ಮಾಡಿದಾಗ ನಕಲಿ ಮತ್ತು ಹರಿದ ನೋಟುಗಳು ನನ್ನ ಕೈಗೆ ಬಂದಿವೆ ಎಂದು ಮೌರ್ಯ ತಮ್ಮ ಅಳಲು ತೋಡಿಕೊಂಡಿದ್ದಾರೆ. ಈ ಸಂಬಂಧ ಉತ್ತರ ಪ್ರದೇಶ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಎಟಿಎಂ ಬೀಗ ಹಾಕಿ, ಈ ನೋಟುಗಳ ಮೂಲ ಹುಡುಕಲು ತನಿಖೆ ನಡೆಸುತ್ತಿದ್ದಾರೆ.
ಕಾಂಗ್ರೆಸ್ ಪರ ಪ್ರಚಾರಕ್ಕಿಳಿದ ಯೋಗಿ
ಬೆಂಗಳೂರು, ಏ. 29: ಲೂಸ್ ಮಾದ ಅಂತಲೇ ಖ್ಯಾತಿಗಳಿಸಿರುವ ನಟ ಯೊಗೀಶ್ ಇಂದು ಕಾಂಗ್ರೆಸ್ ಪರ ಪ್ರಚಾರಕ್ಕಿಳಿದಿದ್ದಾರೆ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಕೆ. ರಮೇಶ್ ಪರವಾಗಿ ಪರಪ್ಪನ ಅಗ್ರಹಾರದಲ್ಲಿ ರೋಡ್ ಶೋನಲ್ಲಿ ಲೂಸ್ ಮಾದ ಭಾಗವಹಿಸಿ ಪ್ರಚಾರ ನಡೆಸಿದರು. ಇದೇ ವೇಳೆ ಮಾತನಾಡಿದ ಯೋಗಿ, ಜೈಲಿಗೆ ಹೋಗಿ ಬಂದವರಿಗೆ ಮತ ಹಾಕಬೇಡಿ ಎಂದು ಹೇಳುವ ಮೂಲಕ ಯಡಿಯೂರಪ್ಪ ಅವರಿಗೆ ಟಾಂಗ್ ನೀಡಿದ್ದಾರೆ.