ಮಡಿಕೇರಿ, ಏ. 29: ಕರ್ನಾಟಕ ವಿಧಾನಸಭೆಗೆ ನಡೆಯಲಿರುವ ಸಾರ್ವತ್ರಿಕ ಚುನಾವಣೆ ಸಂಬಂಧ, ರಾಜ್ಯದಲ್ಲೇ ಅತ್ಯಂತ ಪುಟ್ಟ ಜಿಲ್ಲೆ ಕೊಡಗಿನ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು ಹದಿನೇಳು ಮಂದಿ ಕಣದಲ್ಲಿದ್ದು, ಈ ಪೈಕಿ ಮಡಿಕೇರಿ ವಿಧಾನ ಸಭಾ ಕ್ಷೇತ್ರಗಳಲ್ಲಿ ಇಬ್ಬರು ಮಹಿಳಾ ಅಭ್ಯರ್ಥಿಗಳ ಸಹಿತ ಹನ್ನೊಂದು ಮಂದಿ ಸ್ಪರ್ಧೆಯಲ್ಲಿ ದ್ದಾರೆ. ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಆರು ಮಂದಿ ಅಖಾಡಕ್ಕಿಳಿದಿದ್ದಾರೆ.ಪ್ರಮುಖವಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷ ಬಿಜೆಪಿ ಅಭ್ಯರ್ಥಿ ಎಂ.ಪಿ. ಅಪ್ಪಚ್ಚುರಂಜನ್ ಹಾಗೂ ರಾಷ್ಟ್ರೀಯ ಕಾಂಗ್ರೆಸ್‍ನಿಂದ ಕೆ.ಪಿ. ಚಂದ್ರಕಲಾ ಕಣದಲ್ಲಿದ್ದರೆ, ಪ್ರಾದೇಶಿಕ ಪಕ್ಷ ಜೆಡಿಎಸ್ ಅಭ್ಯರ್ಥಿ ಬಿ.ಎ. ಜೀವಿಜಯ ಅಖಾಡದಲ್ಲಿದ್ದು, ಈ ಮೂವರ ನಡುವೆ ತೀವ್ರ ಪೈಪೋಟಿಗೆ ಕಾರಣವಾಗಿದೆ. ಅಲ್ಲದೆ ಈ ಮೂವರು ತಮ್ಮ ತಮ್ಮ ಪಕ್ಷಗಳು ಕ್ರಮವಾಗಿ ಕಮಲ, ಕೈ ಹಾಗೂ ತೆನೆಹೊತ್ತ ಮಹಿಳೆಯ ಚಿಹ್ನೆಯಡಿ ಚುನಾವಣೆ ಎದುರಿಸುತ್ತಿದ್ದಾರೆ.
ಇನ್ನು ಪ್ರಥಮವಾಗಿ ಚುನಾವಣೆ ಎದುರಿಸುತ್ತಿರುವ ಅಖಿಲ ಭಾರತ ಮಹಿಳಾ ಎಂ ಪವರ್ ಪಾರ್ಟಿ ಅಭ್ಯರ್ಥಿ ರಷಿದಾ ಬೇಗಂ ತಮ್ಮ ಉಮೇದುವಾರಿಕೆಯೊಂದಿಗೆ ವಜ್ರದ ಚಿಹ್ನೆಯಡಿ ಸ್ಪರ್ಧೆ ಎದುರಿಸುತ್ತಿದ್ದು, ಕೆ.ಪಿ. ಚಂದ್ರಕಲಾ ಕಾಂಗ್ರೆಸ್‍ನ ಕೈ ಚಿಹ್ನೆಯಡಿ ಸ್ಪರ್ಧಿಸುತ್ತಿದ್ದು, ಇವರು ಹಾಗೂ ರಷಿದಾ ಈ ಕ್ಷೇತ್ರದಲ್ಲಿ ಮಹಿಳಾ ಅಭ್ಯರ್ಥಿಗಳಾಗಿ ಗಮನ ಸೆಳೆದಿದ್ದಾರೆ.
ಉಳಿದಂತೆ ಅಖಿಲ ಭಾರತ ಹಿಂದೂ ಮಹಸಭಾ ಹೆಸರಿನಲ್ಲಿ ಕಣದಲ್ಲಿರುವ ಭಾರ್ಗವ ಚೆರಿಯಮನೆ ದ್ರಾಕ್ಷಿ ಗೊಂಚಲು ಚಿಹ್ನೆಯಡಿ ಸ್ಪರ್ಧೆಯಲ್ಲಿದ್ದರೆ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಅಭ್ಯರ್ಥಿ ಕೆ.ಪಿ. ರಾಜು ಆಟೋ ರಿಕ್ಷಾ ಚಿಹ್ನೆಯಡಿ ಕಣದಲ್ಲಿದ್ದಾರೆ. ಸಮಾಜವಾದಿ ಪಕ್ಷದ ಮೂಲಕ ಪಕ್ಷೇತರರಾಗಿರುವ ಸಿ.ಯು. ಕಿಶನ್ ಬ್ಯಾಟ್ ಚಿಹ್ನೆ ಹೊಂದಿದ್ದರೆ, ಪಕ್ಷೇತರ ಅಭ್ಯರ್ಥಿಗಳಾದ ಎಂ. ಖಲೀಲ್ ಹೊಲಿಗೆ ಯಂತ್ರ, ಬಿ.ಎಂ. ತಿಮ್ಮಯ್ಯ ಕತ್ತರಿ, ಎಂ. ಮೊಹಮ್ಮದ್ ಹನೀಫ್ ಗಾಜಿನ ಲೋಟ ಹಾಗೂ ಪಿ.ಎಸ್. ಯಡೂರಪ್ಪ ಹೂಕೋಸು ಚಿಹ್ನೆಯಡಿ ಸ್ಪರ್ಧೆ ಎದುರಿಸುತ್ತಿದ್ದಾರೆ.
ವೀರಾಜಪೇಟೆ ಕ್ಷೇತ್ರ: ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್. ಅರುಣ್ ಮಾಚಯ್ಯ, ‘ಕೈ’ ಚಿಹ್ನೆಯಡಿ ಅಖಾಡದಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿ ಕೆ.ಜಿ. ಬೋಪಯ್ಯ ‘ಕಮಲ’ದ ಚಿಹ್ನೆಯೊಂದಿಗೆ ಸ್ಪರ್ಧೆ ಎದುರಿಸುತ್ತಿದ್ದು, ಜೆಡಿಎಸ್ ಅಭ್ಯರ್ಥಿ ಸಂಕೇತ್ ಪೂವಯ್ಯ ‘ತೆನೆಹೊತ್ತ ಮಹಿಳೆಯ’ ಚಿಹ್ನೆಯೊಂದಿಗೆ ಸೆಣಸಾಟ ನಡೆಸುತ್ತಿದ್ದಾರೆ.
ಈ ಕ್ಷೇತ್ರದಲ್ಲಿ ಮಾಜಿ ಶಾಸಕ ಹೆಚ್.ಡಿ. ಬಸವರಾಜ್, ಅಖಿಲ ಭಾರತ ಮಹಿಳಾ ಎಂಪವರ್ ಪಾರ್ಟಿಯಿಂದ ‘ವಜ್ರ’ದ ಚಿಹ್ನೆಯಡಿ ಕಣದಲ್ಲಿದ್ದರೆ, ಪಕ್ಷೇತರ ಅಭ್ಯರ್ಥಿಗಳಾದ ದೊಡ್ಡಯ್ಯ ಟ್ರ್ಯಾಕ್ಟರ್ ಸಹಿತ ರೈತ ಹಾಗೂ ನಂಜಪ್ಪ ಎಂ.ಕೆ. ಹಾಕಿ ಚೆಂಡು ಗುರುತಿನೊಂದಿಗೆ ಚುನಾವಣಾ ಅಖಾಡದಲ್ಲಿದ್ದಾರೆ.
ಅಂತಿಮ 12 ದಿನಗಳು: ಪ್ರಸಕ್ತ ಕೊಡಗು ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆ ಸಂಬಂಧ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಹಿತ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಮುಖಂಡರು ಪ್ರಚಾರ ನಡೆಸಿದ್ದಾರೆ. ಜೆಡಿಎಸ್ ಪರವಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತು ಪಕ್ಷದ ಮುಖಂಡರು ಬಹಿರಂಗ ಪ್ರಚಾರ ಮುಗಿಸಿದ್ದು, ಬಿಜೆಪಿ ತಂತ್ರಗಾರಿಕೆ ಬಹಿರಂಗಗೊಂಡಿಲ್ಲ. ಒಟ್ಟಿನಲ್ಲಿ ಇನ್ನು 12 ದಿನಗಳಲ್ಲಿ ಮತದಾರ ತನ್ನ ಹಕ್ಕು ಚಲಾಯಿಸಲಿದ್ದಾನೆ. ಈ 12 ದಿನಗಳು ರಾಜಕೀಯ ಪಕ್ಷಗಳ ಉಮೇದುವಾರರಿಗೆ ಅತ್ಯಂತ ಮೌಲ್ಯದ ದಿನಗಳಾಗಿವೆ.
ಕಾಣದ ಆರ್ಭಟ: ಈ ಬಾರಿಯ ಚುನಾವಣೆಯಲ್ಲಿ ಇನ್ನೂ ಬಹಿರಂಗ ಪ್ರಚಾರಕ್ಕೆ ಕೇವಲ 10 ದಿನಗಳು ಬಾಕಿಯಿದ್ದರೂ, ಎಲ್ಲೂ ಬಹಿರಂಗ ಪ್ರಚಾರದ ಭರಾಟೆಯಾಗಲಿ, ಅಬ್ಬರವಾಗಲಿ ಗೋಚರಿಸಿಲ್ಲ. ಈ ಹಿಂದಿನ ಚುನಾವಣೆಗಳಂತೆ ಜಿಲ್ಲೆಯ ಮಟ್ಟಿಗೆ ಯಾವದೇ ರಾಜಕೀಯ ಮೇಲಾಟ ಕಂಡು ಬಾರದೆ, ಪ್ರಮುಖ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳು ಮನೆ ಮನೆ ಬೇಟಿಯೊಂದಿಗೆ ಕೊಡಗಿನ ಮಟ್ಟಿಗೆ ಮಾದರಿಯೆಂಬಂತೆ ಮತ ಯಾಚನೆಯಲ್ಲಿ ತೊಡಗಿರುವದು ಗೋಚರಿಸಿದೆ. ಮತದಾನದ ದಿನ ಹತ್ತಿರವಾಗುತ್ತಿದ್ದರೂ, ರಾಜಕೀಯ ಜಿದ್ದಾಜಿದ್ದಿಯಲ್ಲಿ ವಿಜಯ ಮಾಲೆ ಯಾರ ಪಾಲಾಗಲಿದೆ ಎನ್ನುವದು ಇನ್ನಷ್ಟು ನಿಗೂಢವೆನಿಸತೊಡಗಿದೆ.