ಒಡೆಯನಪುರ, ಏ. 29: ನಿಡ್ತ ಗ್ರಾ.ಪಂ. ವ್ಯಾಪ್ತಿಯ ಹಾರೆಹೊಸೂರು ಗ್ರಾಮದ ಬೂತ್ ಬಿಜೆಪಿ ಕಾರ್ಯಕರ್ತರ ಸಭೆ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸಮ್ಮುಖದಲ್ಲಿ ಹಾರೆಹೊಸೂರು ಗ್ರಾಮದಲ್ಲಿ ನಡೆಸಲಾಯಿತು.

ಈ ಸಂದರ್ಭ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಶಾಸಕ ಮತ್ತು ಮಡಿಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಸರಕಾರವನ್ನು ಕಿತ್ತೊಗೆಯುವ ಮೂಲಕ ಈ ಹಿಂದೆ ರಾಜ್ಯದಲ್ಲಿ ಹತ್ತು ಹಲವು ಜನಪ್ರಿಯ ಕಾರ್ಯಕ್ರಮಗಳ ಮೂಲಕವಾಗಿ ಅತ್ಯುತ್ತಮ ಆಡಳಿತ ನೀಡಿದ ಬಿಜೆಪಿಯನ್ನು ಮತ್ತೆ ಆಡಳಿತಕ್ಕೆ ತರಬೇಕೆಂದು ಮನವಿ ಮಾಡಿದರು.

ಕಾಂಗ್ರೆಸ್ ಸರಕಾರದ ದುರಾಡಳಿತದಿಂದ ಕೊಡಗು ಜಿಲ್ಲ್ಲೆ ಅಭಿವೃದ್ಧಿಯಾಗಿಲ್ಲ. ಬಡವರು, ಮತ್ತು ಜನ ಸಾಮಾನ್ಯರ ಬಗ್ಗೆ ಕಾಳಜಿ ಇಲ್ಲದ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸುವ ಕಾಲ ಈಗ ಬಂದೊದಗಿದೆ ಈ ನಿಟ್ಟಿನಲ್ಲಿ ಬಿಜೆಪಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಸಂಘಟಿತರಾಗಿ ಮತದಾರರ ಮನೆಮನೆಗಳಿಗೆ ತೆರಳಿ ಕಾಂಗ್ರೆಸ್ ಸರಕಾರದ ದುರಾಡಳಿತ ಮತ್ತು ಈ ಹಿಂದೆ ಉತ್ತಮ ಆಡಳಿತ ನಡೆಸಿದ ಬಿಜೆಪಿ ಸರಕಾರದ ಜನಪ್ರಿಯ ಕಾರ್ಯಕ್ರಮಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.

ತಾ.ಪಂ. ಉಪಾಧ್ಯಕ್ಷ ಎಂ.ಬಿ. ಆಭಿಮನ್ಯುಕುಮಾರ್ ಮಾತನಾಡಿ, ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಬೂತ್ ಹಂತದ ಬಿಜೆಪಿ ಕಾರ್ಯಕರ್ತರಿಂದ ಸಾಧ್ಯವಾಗುತ್ತದೆ, ಈ ನಿಟ್ಟಿನಲ್ಲಿ ಪ್ರತಿಯೊಂದು ಬಿಜೆಪಿಯ ಬೂತ್ ಸಮಿತಿ ಹೆಚ್ಚಿನ ಬಲವರ್ಧನೆ ಸಾಧಿಸಿದರೆ ಮಡಿಕೇರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲವು ಸಾಧಿಸುವದರಲ್ಲಿ ಸಂಶಯ ಇಲ್ಲ ಎಂದರು.

ಕಾರ್ಯಕರ್ತರನ್ನುದ್ದೇಶಿಸಿ ಜಿ.ಪಂ. ಸದಸ್ಯೆ ಸರೋಜಮ್ಮ, ಮಾಜಿ ತಾ.ಪಂ. ಅಧ್ಯಕ್ಷ ಲೋಕೇಶ್ ಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಶನಿವಾರಸಂತೆ ಹೋಬಳಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅಶೋಕ್, ನಿಡ್ತ ಬೂತ್ ಸಮಿತಿ ಅಧ್ಯಕ್ಷ ರಾಜೇಶ್, ಬಿಜೆಪಿ ಪ್ರಮುಖರಾದ ಜೆ.ಸಿ. ಶೇಖರ್, ಜಲಜಶೇಖರ್, ಯೋಗೇಶ್ ಮುಂತಾದವರು ಇದ್ದರು.