ಆ ಕ್ಷಣದಲ್ಲಿ ನಾನು ನಾನಾಗಿರುವದಿಲ್ಲ. ಅದೊಂದು ಸುಂದರ ಮಧುರಾನುಭೂತಿ. ಆ ಕ್ಷಣದಲ್ಲಿ ಅನುಭವಿಸುವ ಆ ಸುಖಕ್ಕೆ ಪದಗಳ ಹಂಗಿಲ್ಲ. ಅದನ್ನು ಹಿಡಿದಿಡುವ ಶಕ್ತಿ ಆ ಪದಗಳಿಗೂ ಇಲ್ಲ ಎಂಬದೇ ಹೆಚ್ಚು ಸೂಕ್ತ. ಯಾಕಾದರೂ ಆ ಕ್ಷಣ ಜಾರಿ ಹೋಗುತ್ತದೋ ಎಂಬ ಆತಂಕ. ಇನ್ನಷ್ಟು ಹೊತ್ತು ಅದನ್ನು ಅನುಭವಿಸುವ ಅವಕಾಶ ಸಿಕ್ಕಿದ್ದರೆ ಎಂಬ ತವಕ...!
ಇದು ನನ್ನ ನಾಲ್ಕು - ಐದನೇ ವಯಸ್ಸಿನಿಂದಲೇ ತೊಡಗಿಕೊಂಡ ಅಭ್ಯಾಸವಿರಬೇಕು. ಆ ಕ್ಷಣ ಪ್ರತಿನಿತ್ಯವೂ ಚಿರನೂತನ! ನಿನ್ನೆಯಂತಿದ್ದ ಮತ್ತೊಂದು ಸುರ್ಯೋದಯವನ್ನು ನಾನು ನೋಡಿಯೇ ಇಲ್ಲ. ಎಳವೆಯಲ್ಲಿ ಗದ್ದೆ - ಬಯಲಿನ ಹಿನ್ನೆಲೆಗಿದ್ದ ಅದೊಂದು ಸುಂದರ ಬೆಟ್ಟದ ತಳದಿಂದ ಅವನು ನಿಧಾನಕ್ಕೆ ಮೇಲೇರುತ್ತಿದ್ದಂತೆ ನಾನು ನನ್ನ ಮಾಮೂಲಿ ಜಾಗಕ್ಕೆ ಹಾಜರ್. ಅದೊಂದು ಕ್ಷಣಕ್ಕಾಗಿ ಓಡೋಡಿ ಬಂದು ಆ ಮೆಟ್ಟಿಲಿನ ಮೇಲೆ ಆಸೀನನಾಗುತ್ತಿದ್ದೆ. ಅಮ್ಮನ ಬೈಗುಳದ ಮೂಲಕ ಹೇಳಬೇಕೆಂದರೆ ಕುಕ್ಕರಬಡಿಯುತ್ತಿದ್ದೆ!
ಅದೊಂದು ಕೆಂಪಿನ ಉಂಡೆಯನ್ನು ನಾನು ತದೇಕ ಚಿತ್ತದಿಂದ ನೋಡುತ್ತಿದ್ದೆ. ಅದು ನನ್ನ ಪಾಲಿನ ಅದ್ಭುತ ವಿಸ್ಮಯ...! ಆ ಕೆಂಪಿನುಂಡೆ ಆ ಬೆಟ್ಟದ ಮೇಲಿನಿಂದ ಮೇಲೇರುತ್ತಿದ್ದಂತೆ ನಿಧಾನಕ್ಕೆ ಬಣ್ಣ ಬದಲಾಗುತ್ತಿದ್ದ ಪರಿಗೆ ಏನೇನೋ ಕುತೂಹಲ. ನಿಧಾನಕ್ಕೆ ಮೇಲೇರಿ ಬಂದಂತೆ ಬಿಸಿಲು ಹೆಚ್ಚಾಗುವದು, ಮತ್ತೆ ಆ ಪ್ರಖರತೆಗೆ ಕಣ್ಣು ಕೀಲಿಸಲಾಗದಿರುವದು, ಮತ್ತೆ ಸಂಜೆಗೆ ಮನೆಯ ಹಿಂಬದಿಯ ಬೆಟ್ಟದೆಡೆಗೆ ಕೆಂಪಿನುಂಡೆ ಜಾರುವದು...! ಅಬ್ಬಾ ಎಷ್ಟೊಂದು ವೈವಿಧ್ಯತೆ. ನನ್ನ ಅಜ್ಞಾನದ ಪರಿಧಿಯೊಳಗೆ ನಾನಂದುಕೊಂಡಂತೆ ಆ ಕೆಂಪಿನುಂಡೆ ನಮ್ಮ ಮನೆಯೆದುರು ಮಾತ್ರ ದರ್ಶನ ಕೊಡುತ್ತಿತ್ತು. ಶಾಲೆಗೆ ಹೋಗತೊಡಗಿದಾಗ ಮಕ್ಕಳೊಂದಿಗೆ ಇದನ್ನು ಹಂಚಿಕೊಂಡಾಗ, ಆ ಕೆಂಪಿನುಂಡೆ ಅವರ ಮನೆಯೆದುರೂ ಬರುತ್ತಿತ್ತೆಂಬ ಸತ್ಯವನ್ನು ಅರಗಿಸಿಕೊಳ್ಳಬೇಕಾದರೆ ಆ ದಿನಗಳಲ್ಲಿ ಕಷ್ಟವಾಗಿತ್ತು. ನಿಧಾನಕ್ಕೆ ಸತ್ಯ ಗೊತ್ತಾಗತೊಡಗಿತ್ತು. ಆ ಕೆಂಪಿನ ಉಂಡೆ ನನ್ನೊಬ್ಬನ ಸ್ವತ್ತಾಗಿರಲಿಲ್ಲ. ಎಲ್ಲರ ಮನೆಗೂ ಆ ಬೆಳಕಿನುಂಡೆ ಮುಖ ತೋರಿಸುತ್ತಿತ್ತು. ಅದನ್ನು ಸೂರ್ಯ ಎಂದು ಕರೆಯುತ್ತಾರೆ...!
ಪ್ರಕೃತಿ ತನ್ನ ಒಂದೊಂದೇ ಗುಟ್ಟನ್ನು ನಿಧಾನಕ್ಕೆ ಕಲಿಸ ತೊಡಗಿತ್ತು. ಸೂರ್ಯ ನಿಲ್ಲದೆ ನಾವು ವಾಸಿಸುವ ಭೂಮಿಗೆ ಬೆಳಕಿಲ್ಲವಂತೆ. ಅವನ ಬೆಳಕು ಇಲ್ಲದಿದ್ದರೆ ನಾವು ಉಣ್ಣುವ ಆಹಾರ ಉತ್ಪತ್ತಿಯಾಗುವದಿಲ್ಲವಂತೆ. ಅವನಿಲ್ಲದಿದ್ದರೆ ಈ ಪ್ರಪಂಚದಲ್ಲಿ ಯಾವದೂ ಇಲ್ಲವಂತೆ. ದಿನದಿಂದ ದಿನಕ್ಕೆ ಸೂರ್ಯನ ಬಗ್ಗೆ ತಿಳಿಯುತ್ತಾ ಹೋಗುತ್ತಿತ್ತು. ಎಲ್ಲದಕ್ಕಿಂತಲೂ ಹೆಚ್ಚಾಗಿ ಶಾಲೆಯಲ್ಲಿ ಶೀಲ ಟೀಚರ್ ಹೇಳಿದ ಮಾತು ದಾಖಲಾಗುತ್ತಾ ಹೋಯಿತು. ಈ ಭೂಮಿ ಅವನ ಸುತ್ತು ಸುತ್ತುವಾಗ ಒಂದು ವರ್ಷವಾಗುತ್ತದೆ. ಅದೇನೂ ಸುಖಾ ಸುಮ್ಮನೆ ಸುತ್ತುವದೂ ಅಲ್ಲ. ತನ್ನ ಅಕ್ಷದಲ್ಲಿ ತಾನು ಸುತ್ತು ಬರುತ್ತಾ ಸೂರ್ಯನ ಸುತ್ತು ಸುತ್ತುತ್ತದಂತೆ...! ಅಬ್ಬಾ, ಎಷ್ಟೊಂದು ಮಾಹಿತಿಗಳು?! ಇಷ್ಟೇ ಅಲ್ಲ. ಅವನು ತನ್ನ ಸುತ್ತು ಭೂಮಿಯಲ್ಲದೆ ಮತ್ತಷ್ಟು ಗ್ರಹಗಳನ್ನೂ ಸುತ್ತಿಸಿಕೊಳ್ಳುತ್ತಾ ತವರೆಲ್ಲರಿಗೂ ತಾನೇ ಲೀಡರ್ ಆಗಿದ್ದಾನೆಂಬ ಸತ್ಯವನ್ನು ಶೀಲ ಟೀಚರ್ ನಮ್ಮನ್ನೆಲ್ಲ ಗ್ರಹಗಳನ್ನಾಗಿ ಮಾಡಿ ಮತ್ತಿಬ್ಬರನ್ನು ಸೂರ್ಯ - ಭೂಮಿಯನ್ನಾಗಿ ಮಾಡಿ ತೋರಿಸಿದ್ದರು...!
ಇಂತಿಪ್ಪ ಮಹಾನುಭಾವ ನನ್ನನ್ನು ಯಾವ ಪರಿ ಕಾಡುತ್ತಾನೆಂದರೆ, ಅದಕ್ಕೆ ವಿವರಣೆ ಕೊಡುವದೇ ಕಷ್ಟ. ಅವನೊಂದು ಬೆಳಕಿನ ಗೋಲವಂತೆ. ಆ ಬೆಳಕು ಸುಮ್ಮನೆ ಹೊರ ಸೂಸುವದಲ್ಲ. ತನ್ನೊಳಗೆ ತಾನುರಿದು ಆ ಮಹಾರಾಯ ಬೆಳಕು ಕೊಡುತ್ತಾನೆ. ಅಂದರೆ ದಿನಂಪ್ರತಿ ತನ್ನನ್ನು ತಾನು ಇಂಚಿಂಚು ಸುಟ್ಟುಕೊಳ್ಳುತ್ತಾ ನಮಗೆಲ್ಲರಿಗೂ ಬೆಳಕು ಕೊಡುತ್ತಾನೆ...!
ಸ್ವಯಂಪ್ರಭೆ ಇಲ್ಲದ ಚಂದ್ರನಿಗೆ ಅವನ ಬೆಳಕೇ ಸಾಲ. ಸಮುದ್ರದ ಉಬ್ಬರ ವಿಳಿತಕ್ಕೆ ಅವನೇ ಮೂಲ. ಇವನು ಹನ್ನೆರಡು ರಾಶಿಗಳಲ್ಲಿ ಒಂದೊಂದು ತಿಂಗಳಿರುತ್ತಾನಂತೆ. ತುಲಾ ರಾಶಿಗೆ ಸೂರ್ಯ ಪ್ರವೇಶ ಮಾಡಿದಾಗ ಕಾವೇರಿ ತೀರ್ಥೋದ್ಭವ ಆಗುತ್ತದಂತೆ. ಹೀಗೆ ಹನ್ನೆರಡು ರಾಶಿಗಳನ್ನು ಸಂಚಾರ ಮಾಡಲು ಇವನಿಗೆ 365 ದಿವಸ 6 ಗಂಟೆ 14 ನಿಮಿಷ ಬೇಕಂತೆ. ಇದನ್ನು ಸೌರವರ್ಷ ಎಂದು ಕರೆಯುತ್ತಾರಂತೆ. ಹೀಗೆ ಬುದ್ಧಿ ಬೆಳೆದಂತೆ ಮತ್ತಷ್ಟು ವಿಚಾರಗಳನ್ನು ಇವನು ಪರೋಕ್ಷವಾಗಿ ತಿಳಿಸುತ್ತಲೇ ಬಂದಿದ್ದಾನೆ.
ಭೂಮಧ್ಯ ರೇಖೆಯಿಂದ ಸಮಾನಾಂತರದಲ್ಲಿರುವ ವೃತ್ತಗಳಿಗೆ ಇವನು ತಲಪುವ ವೇಳೆಯನ್ನು ಆಯನ ಎಂದು ಕರೆಯುತ್ತಾರಂತೆ. ಉತ್ತರಾಯಣ - ದಕ್ಷಿಣಾಯನ ನಿರ್ಧಾರವಾಗುವದು ಇವನಿಂದಲೇ. ವಸಂತ, ಗ್ರೀಷ್ಮ, ವರ್ಷ, ಶರದ್, ಹೇಮಂತ, ಶಿಶಿರ ಋತುಗಳು ನಿರ್ಧಾರವಾಗುವದು, ಭೂಮಿಯು ಇವನನ್ನು ಸುತ್ತುವ ಕಾಲಾವಧಿಯ ಆಧಾರದಲ್ಲಂತೆ. ಈ ಪುಣ್ಯಾತ್ಮನ ವಿಚಾರವಾಗಿ ಬರೆದಷ್ಟು ಕಡಿಮೆಯೆ.
ಈ ಉರಿಯಪ್ಪನ್ನೊಳಗೆ ತಾನು ಸುಟ್ಟುಕೊಂಡು ಬೆಳಕು ಕೊಡುವ ಒಂದು ಕುತೂಹಲದ ವಿಚಾರ ನನ್ನನ್ನು ವಿಪರೀತ ಕಾಡಿದೆ. ನಾವು ಎಷ್ಟು ಜನರ ಬಾಳಿಗೆ ಬೆಳಕಾಗಿದ್ದೇವೆ? ಎಷ್ಟು ಜನರಿಗೆ ದಾರಿ ದೀಪವಾಗಿದ್ದೇವೆ? ನಮ್ಮೊಳಗಿನ ಆಂತರಿಕ ತುಮುಲಗಳನ್ನು ಅದುಮಿಟ್ಟುಕೊಂಡು ಎಷ್ಟು ಜನರಿಗೆ ಸಾಂತ್ವನ ಹೇಳಿದ್ದೇವೆ? ಉತ್ತರವಿಲ್ಲದ ಪ್ರಶ್ನೆಗಳು...!
ಬದಲಾಗಿ ನಮ್ಮ ಸ್ವಾರ್ಥಕ್ಕಾಗಿ ಈ ಪ್ರಕೃತಿ ಕರುಣಿಸಿದ ಕಾಡನ್ನು ನಾಶ ಮಾಡುತ್ತಿದ್ದೇವೆ. ನದಿ ಮೂಲಗಳನ್ನು ಕಲುಷಿತಗೊಳಿಸುತ್ತಿದ್ದೇವೆ. ಸುಂದರ ಬೆಟ್ಟಗಳನ್ನು ಹಾಳುಗೆಡವಿ ರೆಸಾರ್ಟ್ಗಳನ್ನು ನಿರ್ಮಿಸಿ ಪರಿಸರಕ್ಕೆ ಕೊಳ್ಳಿ ಇಡುತ್ತಿದ್ದೇವೆ. ಪ್ರಾಣವಾಯುವನ್ನು ವಿಷಮಯಗೊಳಿಸುತ್ತಿದ್ದೇವೆ. ಪ್ರಾಣಿ, ಪಕ್ಷ, ಮರ-ಗಿಡ ಇವೆಲ್ಲವುಗಳ ಪರಸ್ಪರ ಬಾಂಧವ್ಯಕ್ಕೆ ಅಂತ್ಯ ಹಾಡುತ್ತಿದ್ದೇವೆ. ಈ ದುಷ್ಕøತ್ಯಗಳಿಗೊಂದು ಅಂತ್ಯವಿದ್ದೀತೆಂಬ ಮಹದಾಸೆ ಮನದ ಮೂಲೆಯಲ್ಲಿ ಹುದುಗಿರುವದರಿಂದಲೇ ಮತ್ತೆ ನಾಳಿನ ಸೂರ್ಯೋದಯಕ್ಕೆ ಕಾಯುತ್ತಿದ್ದೇವೆ.
ನಿನ್ನೆಯಂತಿಲ್ಲದ ಆ ಸುಂದರ ಬೆಳಗು ನನ್ನೆದೆಯ ಬೆರಗು - ನೆನ್ನೆಗೂ ಇಂದಿಗೂ ನಾಳೆಗೂ ನವ ನವೀನ ವಿಸ್ಮಯ...! ಆ ಕೆಂಪಿನ ಬೆಳಕಿನುಂಡೆ ಹೊಸ ಹೊಸ ಸತ್ಯಗಳನ್ನು ತನ್ನ ಬೆಳಕಿನೊಂದಿಗೆ ಸೂಸುತ್ತಲೇ ಇದೆ. ಬೇಕಾದರೆ ಅರಿತುಕೋ ಎಂಬಂತೆ. ಆ ನಿತ್ಯ ಸತ್ಯಕ್ಕೆ ತಲೆಬಾಗುತ್ತಾ ಆ ಸುಮಧುರ ಮುಂಜಾನೆಯಲ್ಲಿ ಮತ್ತದೇ ಬಾಲ್ಯದ ಆನಂದಾನುಭೂತಿಗೆ ಶರಣಾಗುತ್ತೇನೆ. ಹೊಸ ಬೆಳಕು ಮೂಡಬಹುದೆಂಬ ಆಶಾಭಾವನೆಯೊಂದಿಗೆ ಈ ಬದುಕು ಪ್ರಕೃತಿ ನಮಗೆ ನೀಡಿದ ದಯಾಭಿಕ್ಷೆ ಎಂಬ ಸತ್ಯಕ್ಕೆ ನಮಿಸೋಣ ಒಪ್ಪಿಗೆಯೆ?