ಭಗವಾನ್ ಬುದ್ಧ, ಕ್ರಿ.ಪೂ. 544ರಲ್ಲಿ ಅಂದರೆ 2550 ವರ್ಷಗಳ ಹಿಂದೆ ಜನಿಸಿದ. ತಂದೆಯ ಹೆಸರು ಶುದ್ಧೋಧನ, ತಾಯಿ ಮಾಯಾದೇವಿ. ಬುದ್ಧನ ಬಾಲ್ಯದ ಹೆಸರು ಸಿದ್ಧಾರ್ಥ. ಬಾಲ್ಯದಿಂದಲೂ ಸಿದ್ದಾರ್ಥ ರಾಜಕುಮಾರನಾದರೂ ತೀರಾ ವಿಭಿನ್ನ ವ್ಯಕ್ತಿತ್ವವನ್ನು ಹೊಂದಿದ್ದ. ಬೇರೆ ಮಕ್ಕಳಿಂದ ಭಿನ್ನವಾಗಿದ್ದ. ಮಕ್ಕಳೊಂದಿಗೆ ಆಟವಾಡಲು ಹೋಗುತ್ತಿರಲಿಲ್ಲ. ಒಬ್ಬನೇ ಕುಳಿತು ಗಹನವಾದ ಚಿಂತನೆಗಳಲ್ಲಿ ಮುಳುಗಿ ಬಿಡುತ್ತಿದ್ದ.
ಈತ ಮಗುವಾಗಿದ್ದಾಗಲೇ ಜ್ಯೋತಿಷಿಗಳು “ಸಿದ್ಧಾರ್ಥನು ಅತ್ಯಂತ ಪ್ರಸಿದ್ಧ ಚಕ್ರವರ್ತಿಯಾಗುತ್ತಾನೆ ಇಲ್ಲವಾದರೆ ಧರ್ಮ ಸಾಮ್ರಾಜ್ಯದ ಅಧಿಪತಿಯಾಗುತ್ತಾನೆ ಎಂದು ಭವಿಷ್ಯವಾಣಿ ನುಡಿದಿದ್ದರು. ಪ್ರಾಪ್ತ ವಯಸ್ಕನಾದಾಗ ಅವನ ತಂದೆ ಗೌತಮನಿಗೆ (ಸಿದ್ಧಾರ್ಥ) ಯಶೋಧರ ಎಂಬ ರೂಪವತಿ ಕನ್ಯೆಯೊಡನೆ ಮದುವೆ ಮಾಡುತ್ತಾರೆ. ಆದರೆ ಪ್ರಾಪಂಚಿಕ ವಿಷಯಗಳಲ್ಲಿ ಸಿದ್ಧಾರ್ಥನಿಗೆ ಆಸಕ್ತಿ ಇರಲಿಲ್ಲ.
ಒಂದು ದಿನ ವೃದ್ಧನನ್ನು, ರೋಗಿಯನ್ನು, ಹೆಣವನ್ನು ನೋಡಿ ತೀರಾ ದುಃಖಿತನಾದ ಸಿದ್ಧಾರ್ಥ. ಪ್ರಾಪಂಚಿಕ ಕಷ್ಟಗಳಿಂದ ಉಂಟಾಗುವ ದುಃಖ, ನೋವು, ಕಷ್ಟಗಳ ಬಗ್ಗೆ ತೀವ್ರ ಚಿಂತಿತನಾಗುತ್ತಾನೆ. ಪ್ರತೀ ಜೀವಿಗೂ ಕಷ್ಟ ಅನಿವಾರ್ಯ ಎಂಬುದನ್ನು ಅರಿತು ಮನುಷ್ಯರಿಗೂ ಇದು ತಪ್ಪಿದ್ದಲ್ಲ ಎಂದು ತಿಳಿದು ಈ ಕಷ್ಟಗಳಿಂದ ಜನರನ್ನು ದೂರಮಾಡಿ ಶಾಶ್ವತವಾದ ಸುಖ-ನೆಮ್ಮದಿ, ಶಾಂತಿಯನ್ನು ಆತನಿಗೆ ಒದಗಿಸಬೇಕೆಂದು ಕಲ್ಪಿಸಿದ. ಈ ಆಳವಾದ ಚಿಂತನೆಯಲ್ಲೇ ಎಲ್ಲಾ ಸುಖ ಸಂಪತ್ತುಗಳನ್ನು ತೊರೆದು ಅರಮನೆ, ಹೆಂಡತಿ, ಮಗನಿಂದ ದೂರವಾಗಿ ಅರಣ್ಯದ ಕಡೆ ನಡೆದ.
ಐದಾರು ವರ್ಷಗಳ ಕಾಲ ಅರಣ್ಯದಲ್ಲಿ ದೀರ್ಘ ಚಿಂತನಾಶೀಲನಾಗಿ, ಸತ್ಯಶೋಧಕನಾಗಿ ದಿವ್ಯಜ್ಞಾನಕ್ಕಾಗಿ ಅಲೆದ. ‘ಜ್ಞಾನದ ಬೆಳಕನ್ನು ಕಾಣದ ಹೊರತು, ಮೇಲೇಳುವದಿಲ್ಲವೆಂದು ‘ಶಪಥ ತೊಟ್ಟು ಭೋದಿವೃಕ್ಷದ ಕೆಳಗೆ ಕುಳಿತು ಮಹಾ ತಪಸ್ಸನ್ನು ಆಚರಿಸಿ, ದಿವ್ಯಜ್ಞಾನಕ್ಕಾಗಿ ಹಾತೊರೆದ. ಅದೊಂದು ದಿನ ಮುಂಜಾನೆ ವೈಶಾಖ ಮಾಸದ ಹುಣ್ಣಿಮೆಯಂದು ಸಿದ್ಧಾರ್ಥ ಗೌತಮ ಬುದ್ಧನಾದ. ಜ್ಞಾನದ ಸುಧೆಯನ್ನು ಕಂಡ. ತಾನು ಕಂಡುಕೊಂಡ ದಿವ್ಯ ಅನುಭವವನ್ನು ತನ್ನ ಶಿಷ್ಯರಿಗೂ, ಶಿಷ್ಯ ಮುಖಾಂತರ ಇತರರಿಗೂ ಹರಡಿದ. ಅದು ಪ್ರಖರ ಜ್ಞಾನ ಸಂಪತ್ತಾಗಿತ್ತು. ಜೀವನ ಮಾರ್ಗಕ್ಕೆ ಚೇತೋ ಹಾರಿಯಾಗಿತ್ತು.
ಬುದ್ಧನ ಜ್ಞಾನ ಬೋಧನೆಗಳು ಅಂದು ಮಾನವನ ಕಣ್ಣು ತೆರೆಸಿದವು. ಆಸೆಯೇ ದುಃಖಕ್ಕೆ ಮೂಲ; ಸತ್ಕರ್ಮಗಳಿಂದ ಮಾತ್ರ ಮೋಕ್ಷ ಪಡೆಯುವದು ಸಾಧ್ಯ. ಪರಸ್ಪರ ಪ್ರೀತಿ, ಧರ್ಮದಿಂದ ನಡೆಯುವದು ನಮ್ಮಲ್ಲಿರುವ ಕೆಟ್ಟ ಗುಣಗಳನ್ನು ತ್ಯಜಿಸುವದು ಸಹಕಾರ, ಸಹಬಾಳ್ವೆ, ಪ್ರಾಣಿದಯೆ, ಸತ್ಯವನ್ನೇ ನುಡಿಯುವದು, ಶಾಂತಿ, ನೆಮ್ಮದಿಯನ್ನು ತೃಪ್ತಿಯಲ್ಲಿ ಅರಸುವದು ಇವೆಲ್ಲಾ ದಿವ್ಯಜ್ಞಾನದ ಭವ್ಯ ಬೋಧನೆಗಳಾಗಿವೆ. ಜನ ಬುದ್ಧನ ಉಪದೇಶದಿಂದ ಕ್ರಾಂತಿ ಎಂಬಂತೆ ಸನ್ಮಾರ್ಗದಲ್ಲಿ ನಡೆಯುವಲ್ಲಿ ಪ್ರಯತ್ನಿಸಿದರು.
‘ಬುದ್ಧನು ಸ್ಥಾಪಿಸಿದ ಪಂಥಕ್ಕೆ ‘ಸಂಘ’ ಎಂದು ಹೆಸರು. ಹೋದ, ಹೋದ ಕಡೆಗಳಲ್ಲೆಲ್ಲಾ ಬುದ್ಧನಿಗೆ ದೊಡ್ಡ ಸಂಖ್ಯೆಯಲ್ಲೇ ಶಿಷ್ಯರು ದೊರೆತರು. ಬುದ್ಧ ಬೋಧಿಸಿದ ಶ್ರೇಷ್ಠ ಭೋಧನೆಗಳಿಂದ ಬುದ್ಧಮಾರ್ಗವೇ ಬೌದ್ಧಧರ್ಮವಾಗಿ ಸ್ಥಾಪಿತವಾಗಿ ಪ್ರಚಾರ ಕಂಡಿತು. ಬುದ್ಧನ ಪಂಥಕ್ಕೆ ಸೇರಿದವರೆಲ್ಲಾ ಬೌದ್ಧರಾದರು. ಈ ಮತವೇ ಬೌದ್ಧ ಮತವಾಯಿತು.
ದೇವರು ಧರ್ಮ, ಸ್ವರ್ಗ-ನರಕಗಳ ಬಗ್ಗೆ ಬುದ್ಧ ಏನನ್ನೂ ಹೇಳದೇ ಹೋದರೂ ಅವರ ಪ್ರಪಂಚವು ದುಃಖದಿಂದ ತುಂಬಿದೆ, ಆಸೆ ಮನುಷ್ಯನ ದುಃಖಗಳಿಗೆಲ್ಲಾ ಮೂಲ ಕಾರಣ. ಇದನ್ನು ತೊರೆದು ಪರಿಶುದ್ಧ, ಪ್ರಾಮಾಣಿಕ ಜೀವನ ನಡೆಸಬೇಕು. ಪ್ರಾಣಿಗಳಲ್ಲಿ ದಯೆ ಇಡಬೇಕು. ಪ್ರಾಣಿ ಹಿಂಸೆ ಸಲ್ಲದು ಎಂಬಂತಹ ಉಪದೇಶಗಳು ಬಹು ಮಹತ್ವವನ್ನು ಪಡೆದವು.
ಬುದ್ಧನ ಉಪದೇಶಗಳು ಸರಳವಾಗಿದ್ದು, ತ್ರಿಪಂಕಗಳು ಹಾಗೂ ಅಷ್ಟಾಂಗ ಮಾರ್ಗಗಳಲ್ಲಿ ಕಂಡು ಬರುತ್ತವೆ. ಭಾತರದಲ್ಲಿ ಜನಿಸಿದ ಬೌದ್ಧ ಧರ್ಮವು ಟಿಬೇಟ್, ಚೀನಾ, ಜಪಾನ್, ಶ್ರೀಲಂಕಾ, ಬರ್ಮಾ, ಮುಂತಾದ ದೇಶಗಳಿಗೆ ದೊಡ್ಡದಾಗೇ ಹರಡಿತು. ಬೌದ್ಧ ಧರ್ಮದಲ್ಲಿ ಕ್ರಮೇಣ ಎರಡು ಪಂಥÀಗಳು ಉದಯಿಸಿದವು. ಅವು ಮಹಾಯಾನ ಮತ್ತು ಹೀನಾಯಾನ ಎಂದು. ಆ ಮೇಲಿನ ವರ್ಷಗಳಲ್ಲಿ ಜನರು ಬುದ್ಧನನ್ನು ವಿಷ್ಣುವಿನ ಒಂದು ಅವತಾರವೆಂದು ಪೂಜಿಸ ತೊಡಗಿದರು. ಗೌತಮ ಬುದ್ಧನ ಸರಳವಾದ ಉಪದೇಶಗಳು ಎಲ್ಲಾ ಕಾಲದಲ್ಲೂ ಎಲ್ಲ ದೇಶದ ಜನರಿಗೂ ಪ್ರಸ್ತುತವಾಗಿದೆ. ಬುದ್ಧನ ಜೀವನವು ದಾನ-ಧರ್ಮ ಹಾಗೂ ತ್ಯಾಗ ಇವುಗಳಿಂದ ತುಂಬಿದೆ. ಅಂತೆಯೇ ಆತನ ಉಪದೇಶಗಳು ಮಾನವೀಯತೆಗೆ ಪೂರಕವಾಗಿದೆ.
ಬೌದ್ಧರಿಗೆ ಬುದ್ಧ ಪೂರ್ಣಿಮಾ ಒಂದು ಪವಿತ್ರ ದಿನ. ಬುದ್ಧ ಪೂರ್ಣಿಮೆಯನ್ನು ಭಾರತ, ಶ್ರೀಲಂಕಾ, ಜಪಾನ್, ಚೀನಾ, ಟಿಬೇಟ್ ಮುಂತಾದ ದೇಶಗಳಲ್ಲಿ ಅತ್ಯಂತ ಶ್ರದ್ಧೆಯಿಂದ ಆಚರಿಸುತ್ತಾರೆ. ಬುದ್ಧ ಬೋಧಿಸಿದ ಮಹಾ ಉಪದೇಶಗಳು ಸನ್ಮಾರ್ಗಕ್ಕೆ, ಸದುದ್ದೇಶದ ಜೀವನಕ್ಕೆ, ಸಾರ್ಥಕತೆಗೆ, ಮಾನವೀಯತೆಗೆ ದಾರಿದೀಪಗಳಾಗಿ ಬೆಳಕನ್ನು ಬೀರಿದೆ. ಅವುಗಳನ್ನು ಪಾಲಿಸಿ, ಮಾನವ ಜನ್ಮವನ್ನು ಸಾರ್ಥಕಗೊಳಿಸೋಣ. - ಹರೀಶ್ ಸರಳಾಯ, ಮಡಿಕೇರಿ