ಮಡಿಕೇರಿ, ಏ. 29: ದಕ್ಷಿಣ ಕೊಡಗಿನ ಕಿರುಗೂರು ಸುತ್ತಮುತ್ತಲಿನ ಬೆಳೆಗಾರರಿಂದ ಕಾಫಿ ಖರೀದಿಸಿ ಹಣ ಕೊಡದೆ ವಂಚಿಸಿರುವ ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಕಿರುಗೂರು ಗ್ರಾ.ಪಂ. ವ್ಯಾಪ್ತಿಯ ಬೆಸಗೂರು ಬಳಿಯ ಲಕ್ಷ್ಮಿ ವೆಂಕಟೇಶ್ವರ ಕಾಫಿ ಕ್ಯೂರಿಂಗ್ ವಕ್ರ್ಸ್ ಮುಖಾಂತರ ಬೆಳೆಗಾರರಿಂದ ಕಾಫಿ ಖರೀದಿಸಿ, 30ಕ್ಕೂ ಅಧಿಕ ಮಂದಿ ಬೆಳೆಗಾರರಿಗೆ ಹಣ ಪಾವತಿಸದೆ ರೂ. 250 ಕೋಟಿಗೂ ಅಧಿಕ ಮೊತ್ತ ವಂಚಿಸಿರುವ ಪ್ರಕರಣ ಸಂಬಂಧ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಲ್ಲದೆ ಕೇರಳದ ವಯನಾಡು ಜಿಲ್ಲೆಯ ಪುದುಪಳ್ಳಿ ಪೊಲೀಸ್ ಠಾಣೆಯಲ್ಲಿಯೂ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಈ ವಂಚನೆ ಪ್ರಕರಣದ ಆರೋಪ ಎದುರಿಸುತ್ತಿರುವ ವ್ಯಾಪಾರಿಗಳಾದ ಬಿಜಯ್ ಹಾಗೂ ಬಿಜು ಎಂಬಿಬ್ಬರು ಕಳೆದ ಎರಡು ತಿಂಗಳಿನಿಂದ ತಲೆಮರೆಸಿಕೊಂಡಿದ್ದಾರೆ.

ಕಳೆದ ಒಂಭತ್ತು ವರ್ಷಗಳಿಂದ ನಂಬಿಕೆಯ ಮೇಲೆ ಕಾಫಿ ನೀಡುತ್ತಿದ್ದ ಹಿನ್ನೆಲೆಯಲ್ಲಿ, ದಕ್ಷಿಣ ಕೊಡಗಿನ ಬೆಳೆಗಾರರು ಈ ಬಾರಿಯೂ ಕಾಫಿ ನೀಡಿದ್ದು, ಬಳಿಕ ಆರೋಪಿಗಳು ಹಣ ನೀಡದೆ ಬೆಳೆಗಾರರಿಗೆ ವಂಚಿಸಿ ಕಳೆದ ಫೆಬ್ರವರಿ 26ರಿಂದ ತಲೆಮರೆಸಿಕೊಂಡು ಕೊಡಗಿನಿಂದ ಪರಾರಿಯಾಗಿದ್ದಾರೆ.

ಆ ಬೆನ್ನಲ್ಲೇ ಎಚ್ಚೆತ್ತುಕೊಂಡ ಬೆಳೆಗಾರರು ಪೊನ್ನಂಪೇಟೆ ಠಾಣೆ ಹಾಗೂ ಕೇರಳದಲ್ಲಿ ಆರೋಪಿಗಳ ಹುಟ್ಟೂರು ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಿದ್ದಾರೆ. ಆ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಹಾಗೂ ಡಿವೈಎಸ್ಪಿ ನಾಗಪ್ಪ ಮಾರ್ಗದರ್ಶನ ದಲ್ಲಿ ಇನ್ಸ್‍ಪೆಕ್ಟರ್ ಹರಿಶ್ಚಂದ್ರ ಮತ್ತು ಪೊನ್ನಂಪೇಟೆ ಠಾಣಾಧಿಕಾರಿ ಮಂಕೇಶ್ ತನಿಖೆ ಕೈಗೊಂಡಿದ್ದಾರೆ.

ಈಗಾಗಲೇ ದುಷ್ಕøತ್ಯದ ಬಳಿಕ ಎರಡು- ಮೂರು ಬಾರಿ ಪೊನ್ನಂಪೇಟೆ ಪೊಲೀಸರು ನೊಂದ ಬೆಳೆಗಾರ ಪ್ರತಿನಿಧಿಗಳ ಸಹಿತ ವಯನಾಡಿನ ಆರೋಪಿಗಳ ಹುಟ್ಟೂರಿಗೆ ಖುದ್ದು ತೆರಳಿ ಮಾಹಿತಿ ಕಲೆಹಾಕಿದ್ದಾರೆ. ಇದುವರೆಗೆ ಆರೋಪಿಗಳ ಸುಳಿವು ಲಭಿಸದಿದ್ದರೂ, ಆರೋಪಿಗಳ ಪೋಷಕರು ಪೊಲೀಸರಿಂದ ಕಾಲಾವಕಾಶ ಕೋರುವದರೊಂದಿಗೆ, ಬೆಳೆಗಾರರಿಗೆ ವಂಚಿಸಿರುವ ಹಣ ಹಿಂತಿರುಗಿಸಲು ಗಮನ ಹರಿಸುವದಾಗಿ ಭರವಸೆ ನೀಡಿದ್ದಾರೆಂದು ತಿಳಿದುಬಂದಿದೆ.

ಆ ಮೇರೆಗೆ ಪೊಲೀಸರು ಆರೋಪಿಗಳ ದೂರವಾಣಿ ಹಾಗೂ ಇತರ ಸಂಪರ್ಕ ಕುರಿತು ನಿಗಾವಿರಿಸಿದ್ದು, ನೊಂದ ಬೆಳೆಗಾರರಿಗೆ ನ್ಯಾಯ ಕೊಡಿಸುವ ದಿಸೆಯಲ್ಲಿ ರಹಸ್ಯ ತನಿಖೆ ಮುಂದುವರಿಸಿರುವದಾಗಿ ವಿಶ್ವಸನೀಯ ಮೂಲಗಳಿಂದ ಗೊತ್ತಾಗಿದೆ.