ಮಡಿಕೇರಿ, ಏ. 29: ಕಾಫಿ ಮಂಡಳಿಯ ಮೂಲಕ ಕಾಫಿ ಬೆಳೆಗಾರರು ತಮ್ಮ ತೋಟ ಹಾಗೂ ಜಾಗದ ಮಣ್ಣು ಪರೀಕ್ಷೆಯನ್ನು ಮಾಡಿಸಿಕೊಂಡು ಅದಕ್ಕೆ ತಕ್ಕಂತೆ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ದಕ್ಷಿಣ ಭಾರತದಲ್ಲಿ ನೂತನವಾಗಿ ಐದು ಘಟಕಗಳನ್ನು ತೆರೆಯಲು ಉದ್ದೇಶಿಸಲಾಗಿದೆ.

ಕೇಂದ್ರೀಯ ಕಾಫಿ ಸಂಶೋಧನಾ ಮಂಡಳಿ (ಸಿಸಿಆರ್‍ಐ) ವತಿಯಿಂದ ಚಿಕ್ಕಮಂಗಳೂರು, ಹಾಸನ, ಕೊಡಗಿನ ಗೋಣಿಕೊಪ್ಪಲು, ಕೇರಳದ ಇಡುಕಿ ಹಾಗೂ ಎಕ್ರ್ವಾಡ್‍ನಲ್ಲಿ ನೂತನವಾಗಿ ಮಣ್ಣು ಪರೀಕ್ಷಾ ಘಟಕ ಪ್ರಾರಂಭವಾಗಲಿದೆ. ಈ ಹಿಂದೆ ರಾಜ್ಯದಲ್ಲಿ ಸಿಸಿಆರ್‍ಐ ವತಿಯಿಂದ ಬಾಳೆಹೊನ್ನೂರು ಹಾಗೂ ಜಿಲ್ಲೆಯ ಚೆಟ್ಟಳ್ಳಿ ಸಂಶೋಧನಾ ಕೇಂದ್ರದಲ್ಲಿ ಈ ಎರಡು ಕೇಂದ್ರಗಳೊಂದಿಗೆ ಹೊಸ ಘಟಕಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಮಣ್ಣು ಪರೀಕ್ಷೆಯನ್ನು ಒಂದು ಅಭಿಯಾನದ ರೀತಿಯಲ್ಲಿ ಕೈಗೆತ್ತಿಕೊಳ್ಳಲು ಮಂಡಳಿ ಉದ್ದೇಶಿಸಿದೆ. ವೀರಾಜಪೇಟೆ ತಾಲೂಕಿನಾದ್ಯಂತ ಈಗಾಗಲೇ ಈ ಕಾರ್ಯವನ್ನು ಅಭಿಯಾನದ ರೀತಿಯಲ್ಲಿ ಮುಂದುವರಿಸಲಾಗಿದ್ದು, ಇದು ಮುಂದುವರಿಯಲಿದೆ. ಇದೀಗ ನೂತನ ಘಟಕಗಳು ಪ್ರಾರಂಭಿಸುವದರಿಂದ ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದು ಕಾಫಿ ಮಂಡಳಿ ಉಪಾಧ್ಯಕ್ಷೆ ರೀನಾ ಪ್ರಕಾಶ್ ತಿಳಿಸಿದ್ದಾರೆ.