ಮಡಿಕೇರಿ, ಏ. 29: ಮತದಾರರ ವ್ಯವಸ್ಥಿತ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ವತಿಯಿಂದ ಶನಿವಾರ ಮತದಾರರ ಮಹತ್ವ ಕುರಿತು ಜಾಗೃತಿ ಜಾಥಾ ನಡೆಯಿತು. ನಗರದ ರಾಜಾಸೀಟು ಉದ್ಯಾನವನದಲ್ಲಿ ಚುನಾವಣಾ ಸಾಮಾನ್ಯ ವೀಕ್ಷಕ ಟಿ. ಶ್ರೀಕಾಂತ್, ಚುನಾವಣಾ ಪೊಲೀಸ್ ವೀಕ್ಷಕ ಸತ್ಯಜಿತ್ ನಾಯ್ಕ್, ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಜಿ.ಪಂ. ಸಿಇಒ ಪ್ರಶಾಂತ್ ಕುಮಾರ್ ಮಿಶ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಉಪ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ಪ್ರೋಬೆಷನರಿ ಎಸ್‍ಪಿ. ಯತೀಶ್, ಜಿ.ಪಂ. ಸಹಾಯಕ ಕಾರ್ಯದರ್ಶಿ ಶ್ರೀಕಂಠಮೂರ್ತಿ, ಸಾರ್ವಜನಿಕ ಶಿಕ್ಷಣ ಉಪ ನಿರ್ದೇಶಕಿ ಮಂಜುಳಾ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಯ ದೇವಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಮಲ್ಲೇಸ್ವಾಮಿ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರಮೋದ್, ಮಮ್ತಾಜ್ ಇತರರು ಇದ್ದರು.

ಮತದಾರರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ವೀಪ್ ವತಿಯಿಂದ ವಿವಿಧ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿತ್ತು. ಆ ದಿಸೆಯಲ್ಲಿ ಓಟ ಸ್ಪರ್ಧೆ, ವ್ಯಂಗ್ಯ ಚಿತ್ರಸ್ಪರ್ಧೆ, ಪ್ರಬಂಧ ಸ್ಪರ್ಧೆ ಹೀಗೆ ನಾನಾ ಸ್ಪರ್ಧೆಯಲ್ಲಿ ವಿಜೇತರಾದ ವರಿಗೆ ಚುನಾವಣಾ ವೀಕ್ಷಕ ಟಿ. ಶ್ರೀಕಾಂತ್ ಬಹುಮಾನ ವಿತರಿಸಿದರು.

ಮತದಾರರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲೆಗೆ ಐಕಾನ್ (ರಾಯಭಾರಿ) ಆಗಿರುವ ಭಾಗಿರಥಿ ಅವರು ಮಾತನಾಡಿ ಸುಭದ್ರ ಪ್ರಜಾಪ್ರಭುತ್ವ ನಿರ್ಮಾಣ ಮಾಡುವ ನಿಟ್ಟಿನಲ್ಲಿ 18 ವರ್ಷ ಪೂರ್ಣ ಗೊಂಡವರೆಲ್ಲರೂ ಮತದಾನ ಮಾಡಬೇಕು. ಹಣ, ಮದ್ಯ ಮತ್ತಿತರ ಆಮಿಷಗಳಿಗೆ ಒಳಗಾಗಬಾರದು ಎಂದರು.

ಬಳಿಕ ಮತದಾನದ ಜಾಗೃತಿಗೆ ಸಂಬಂಧಿಸಿದಂತೆ ಎಲ್.ಇ.ಡಿ ವಾಹನದ ಮೂಲಕ ಮತದಾನದ ಮಹತ್ವ ಕುರಿತ ಮಾಹಿತಿಯನ್ನು ವೀಕ್ಷಣೆ ಮಾಡಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಚುನಾವಣಾ ಪ್ರಚಾರ ವಾಹನ ವನ್ನು ವೀಕ್ಷಣೆ ಮಾಡಿದರು.

ಜಾಥಾದಲ್ಲಿ ಹುಲಿ, ಕರಡಿ, ಸಿಂಹ ವೇಷದಾರಿಗಳು ಗಮನ ಸೆಳೆದರು, ಬೀದಿನಾಟಕ ತಂಡದವರು, ತ್ರಿಚಕ್ರ ವಾಹನದ ಮೂಲಕ ವಿಕಲಚೇತನರು, ನಾನಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಜಾಥಾದಲ್ಲಿ ಭಾಗವಹಿಸಿದ್ದರು.