ಮಡಿಕೇರಿ, ಏ. 29: ಹಿರಿಯರು ಹಾಗೂ ಪೋಷಕರ ಪ್ರೋತ್ಸಾಹವಿದ್ದಲ್ಲಿ ಮಕ್ಕಳು ಹೆಚ್ಚು ಸಾಧನೆ ಮಾಡಲು ಸಾಧ್ಯವೆಂದು ಅರ್ಜುನ್ ಪ್ರಶಸ್ತಿ ವಿಜೇತ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟು, ತೀತಮಾಡ ಅರ್ಜುನ ದೇವಯ್ಯ ಹೇಳಿದರು. ನಗರದ ಎಫ್‍ಎಂಸಿ ಕಾಲೇಜು ಕ್ರೀಡಾಂಗಣ ದಲ್ಲಿ ನಡೆದ ಮಡ್ಲಂಡ ಕಪ್ 2018 ಕ್ರಿಕೆಟ್ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಅಗಾಧ ಶಕ್ತಿ ಇರುತ್ತದೆ. ಬೌಗೋಳಿಕ ಪರಿಸ್ಥಿತಿ ಕೊಡಗಿನ ಕ್ರೀಡಾಪಟುಗಳಿಗೆ ಹೆಚ್ಚಿನ ಶಕ್ತಿ ತುಂಬಿದ್ದು, ಉಳಿದ ಭಾಗದ ಕ್ರೀಡಾಪಟುಗಳು 100 ರಷ್ಟು ಪರಿಶ್ರಮ ಪಟ್ಟರೆ ಕೊಡಗಿನ ಕ್ರೀಡಾಪಟುಗಳು ಶೇಕಡ 50 ರಷ್ಟು ಪರಿಶ್ರಮ ಹಾಕಿರೆ ಸಾಕು. ಇದರಿಂದ ಉತ್ತಮ ಪಲಿತಾಂಶ ಗಳಿಸಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.ಸಾಧನೆಗೆ ವಯಸ್ಸು ಅಡಿವುಂಟು ಮಾಡುವದಿಲ್ಲ. ಯಾವ ವಯಸ್ಸಿನಲ್ಲಿ ಆದರೂ ಸಾಧನೆ ಮಾಡಬಹುದು. ಆದರೂ ಕೂಡ ಬಾಲ್ಯದಲ್ಲಿಯೇ ಉತ್ತಮವಾದದ್ದನ್ನು ಸಾಧಿಸಲು ಪ್ರಯತ್ನಿಸಬೇಕು ಎಂದರು. ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ ಮಾತನಾಡಿ, ಪ್ರತಿಭೆಗಳಿಗೆ ಅವಕಾಶ ಒದಗಿಸಿ ಕೊಡುವದು ಸಂತಸದ ಸಂಗತಿ. ಕೌಟುಂಬಿಕ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಪ್ರತಿಭೆಗಳಿಗೆ ಮುಂದೆ ರಾಷ್ಟ್ರೀಯ ಮಟ್ಟದಲ್ಲಿ ಅವಕಾಶ ದೊರೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಮಡ್ಲಂಡ ಕುಟುಂಬದ ಪಟ್ಟೆದಾರ ಬಿ ಪೊನ್ನಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಉದ್ಯಮಿ ನಾಪಂಡ ಮುದ್ದಪ್ಪ, ಅರೆಯಡ ಪವಿನ್ ಪೊನ್ನಣ್ಣ, ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ, ಮಡ್ಲಂಡ ಕ್ರಿಕೆಟ್ ಕಪ್ ಅಧ್ಯಕ್ಷ ಮಡ್ಲಂಡ ಮೋನಿಶ್ ಸುಬ್ಬಯ್ಯ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ, ಪತ್ರಕರ್ತರ ಸಂಘದ ಅಧ್ಯಕ್ಷ ರಮೇಶ್ ಕುಟ್ಟಪ್ಪ ಮತ್ತಿತರರು ಇದ್ದರು. ಮಡ್ಲಂಡ ಕ್ರಿಕೆಟ್ ಕಪ್ ಅಧ್ಯಕ್ಷ ಮಡ್ಲಂಡ ಮೋನಿಶ್ ಸುಬ್ಬಯ್ಯ ಸ್ವಾಗತಿಸಿದರು. ಬೊಳ್ಳಜಿರ ಯಮುನಾ ಅಯ್ಯಪ್ಪ ಪ್ರಾರ್ಥಿಸಿ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ವಂದಿಸಿದರು. ಬಾಳೆಯಡ ದಿವ್ಯ ಮಂದಪ್ಪ ಕಾರ್ಯಕ್ರಮ ನಿರೂಪಿಸಿದರು.