ಮಡಿಕೇರಿ, ಏ. 29: ಗೋಣಿಕೊಪ್ಪಲು ಪೊಲೀಸ್ ಠಾಣಾ ವ್ಯಾಪ್ತಿಯ ನಿವೃತ್ತ ಶಿಕ್ಷಕಿ ಹಾಗೂ ಒಂಟಿ ಮಹಿಳೆ ಗೌಡಂಡ ಕಮಲ ಎಂಬವರ ಮನೆಯಿಂದ, ಅಂದಾಜು ರೂ. 10 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿರುವ ಪ್ರಕರಣ ಸಂಬಂಧ, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವದು ಎಂದು ಗೋಣಿಕೊಪ್ಪಲು ಪೊಲೀಸ್ ವೃತ್ತ ನಿರೀಕ್ಷಕ ಹರಿಶ್ಚಂದ್ರ ಸ್ಪಷ್ಟಪಡಿಸಿದ್ದಾರೆ.
ಈ ಪ್ರಕರಣ ಸಂಬಂಧ ‘ಶಕ್ತಿ’ ವೃತ್ತ ನಿರೀಕ್ಷಕರನ್ನು ಸಂಪರ್ಕಿಸಿದಾಗ, ತಾನು ಮಾಧ್ಯಮ ವರದಿಯಿಂದ ಪ್ರಕರಣದ ಬಗ್ಗೆ ತಿಳಿದುಕೊಂಡಿದ್ದು, ನೊಂದ ಮಹಿಳೆಯಿಂದ ಸೂಕ್ತ ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳುವದಾಗಿ ಪ್ರತಿಕ್ರಿಯಿಸಿದರು.
ಹಿಂದೆ ಯಾವ ಕಾರಣಕ್ಕಾಗಿ ತನಿಖೆ ವಿಳಂಬವಾಗಿದೆ ಅಥವಾ ಮಹಿಳೆ ನೀಡಿರುವ ಸುಳಿವಿನ ಬಗ್ಗೆ ಯಾವ ರೀತಿ ವಿಚಾರಣೆ ನಡೆಸಲಾಗಿದೆ ಎಂದು ದಾಖಲೆಗಳನ್ನು ಪರಿಶೀಲಿಸಿ, ನೈಜ ಅಪರಾಧಿಗಳ ಪತ್ತೆಗೆ ಅಗತ್ಯ ಗಮನ ಹರಿಸುವದಾಗಿ ಹರಿಶ್ಚಂದ್ರ ಪತ್ರಿಕೆಯೊಂದಿಗೆ ವಿವರಿಸಿದರು.
ನೊಂದು ಎಸ್ಪಿಗೆ ದೂರು: ನಿವೃತ್ತ ಶಿಕ್ಷಕಿ ಗೌಡಂಡ ಕಮಲ ‘ಶಕ್ತಿ’ಯೊಂದಿಗೆ ನೋವು ತೋಡಿಕೊಂಡರಲ್ಲದೆ, ತನಗೆ ಇಷ್ಟು ಸಮಯ ಯಾವದೇ ರೀತಿ ಪೊಲೀಸರು ಸ್ಪಂದಿಸದೆ, ಶಂಕಿತ ಆರೋಪಿ ಇಲಾಖೆಯ ಕಣ್ಣೆದುರೇ ಮೋಜಿನ ಜೀವನ ನಡೆಸುತ್ತಿರುವದು ಮೇಲ್ನೋಟಕ್ಕೆ ಕಂಡುಬಂದಿದ್ದರೂ ಕ್ರಮ ಜರುಗಿಸಿಲ್ಲವೆಂದು ಬೇಸರಿಸಿದರು.
ಈ ಎಲ್ಲಾ ಬೆಳವಣಿಗೆಯನ್ನು ಗಮನಿಸಿ ಇಗ್ಗುತ್ತಪ್ಪ ಮಹಿಳಾ ಸಂಘದ ಮುಖಾಂತರ ಎಸ್ಪಿ ಹಾಗೂ ಡಿಸಿಗೆ ದೂರು ಸಲ್ಲಿಸಿ ನ್ಯಾಯಕ್ಕಾಗಿ ಕೇಳಿಕೊಂಡಿರುವದಾಗಿ ವಿವರಿಸಿದರು. ಈಗಿನ ಪೊಲೀಸ್ ವೃತ್ತ ನಿರೀಕ್ಷಕರು ಹಾಗೂ ಇಲಾಖೆಯ ಮೇಲಧಿಕಾರಿ ಗಳಿಂದ ತಾನು ನ್ಯಾಯ ನಿರೀಕ್ಷಿಸುತ್ತಿರುವದಾಗಿ ಅಳಲು ತೋಡಿಕೊಂಡರು.