ಸೋಮವಾರಪೇಟೆ, ಏ.30: ಭಾರತೀಯ ಜನತಾ ಪಾರ್ಟಿ ಸರ್ಕಾರ ರಾಜ್ಯದಲ್ಲಿ ಅಧಿಕಾರ ಹಿಡಿಯುತ್ತಿದ್ದಂತೆ ರೈತರ 1 ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡಲಾಗುವದು. ಈ ಬಗ್ಗೆ ಯಡಿಯೂರಪ್ಪ ಅವರೇ ಸ್ಪಷ್ಟಪಡಿಸಿದ್ದಾರೆ ಎಂದು ಶಾಸಕ ಹಾಗೂ ಮಡಿಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್ ನುಡಿದರು.
ಭಾರತೀಯ ಜನತಾ ಪಾರ್ಟಿ ವತಿಯಿಂದ ಇಲ್ಲಿನ ಜೇಸಿ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರು ರೈತರ 1ಲಕ್ಷದವರೆಗಿನ ಸಾಲ ಮನ್ನಾ ಮಾಡಿದ್ದಾರೆ. ಅದೇ ರೀತಿ ಕರ್ನಾಟಕದಲ್ಲೂ ರೈತರ ಸಾಲಮನ್ನಾ ಮಾಡಲಾಗುವದು. ಜೆಡಿಎಸ್‍ನವರು ರೈತರ ಸಂಪೂರ್ಣ ಸಾಲ ಮನ್ನಾ ಮಾಡುವದಾಗಿ ಪೊಳ್ಳು ಭರವಸೆ ನೀಡುತ್ತಿದ್ದಾರೆ. ಜೆಡಿಎಸ್ ಈ ಬಾರಿ 20 ಸ್ಥಾನಗಳಿಗೆ ಸೀಮಿತವಾಗಲಿದೆ. ಅಧಿಕಾರಕ್ಕೆ ಏರುವದು ಅಸಾಧ್ಯವಾಗಿರುವ ಹಿನ್ನೆಲೆ ರೈತರಿಗೆ ಸುಳ್ಳು ಭರವಸೆ ನೀಡುತ್ತಿದ್ದಾರೆ ಎಂದು ದೂರಿದರು.
ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿಲ್ಲ ಎಂದು ಜೆಡಿಎಸ್‍ನವರು ಆರೋಪಿಸುತ್ತಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಕೊಡಗಿಗೆ 1800 ಕೋಟಿ ಅನುದಾನ ತಂದು ಅಭಿವೃದ್ಧಿ ಕಾರ್ಯ ಮಾಡಿದ್ದೆವು. ಎಲ್ಲಾ ಕಾಮಗಾರಿಗಳ ಬಗ್ಗೆ ಶ್ವೇತಪತ್ರವನ್ನೂ ಹೊರಡಿಸಿದ್ದೇವೆ. ಸೋಮವಾರಪೇಟೆಯಲ್ಲಿ ಹೈಟೆಕ್ ಮಾರುಕಟ್ಟೆ, ಕಾಂಕ್ರೀಟ್‍ರಸ್ತೆ, ಸರ್ಕಾರಿ ಬಸ್ ನಿಲ್ದಾಣ ಮೇಲ್ದರ್ಜೆಗೆ ಏರಿಸಿರುವದು, ಗ್ರಾಮೀಣ ಭಾಗದಲ್ಲಿ ಕಾಂಕ್ರೀಟ್ ರಸ್ತೆ, ಹಾರಂಗಿಯಿಂದ ಕುಡಿಯುವ ನೀರಿನ ಸೌಲಭ್ಯ ಯೋಜನೆಗಳು ಜಾರಿಗೊಂಡಿಲ್ಲವೇ? ಎಂದು ರಂಜನ್ ಪ್ರಶ್ನಿಸಿದರು.
ಬೆಟ್ಟದಳ್ಳಿಯಲ್ಲಿ ಸೈನಿಕ ಶಾಲೆ ಪ್ರಾರಂಭಿಸಲು ಅಡ್ಡಗಾಲು ಹಾಕಿದವರು ಇಂದು ತನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ.
ಜೀವಿಜಯ ಅವರು ಅರಣ್ಯ ಸಚಿವರಾಗಿದ್ದ ಸಂದರ್ಭ ಯಡವನಾಡು ಕಂದಾಯ ಗ್ರಾಮ ಏಕೆ ಮಾಡಿಲ್ಲ? ಎಂದು ಪ್ರಶ್ನಿಸಿದ ರಂಜನ್, ತಾನು ರಾಜ್ಯ ಅರ್ಜಿಗಳ ಸಮಿತಿ ಅಧ್ಯಕ್ಷನಾಗಿದ್ದ ಸಂದರ್ಭ 23 ಸಭೆಗಳನ್ನು ನಡೆಸಿ 3600 ಏಕರೆ ಜಾಗಕ್ಕೆ ಹಕ್ಕುಪತ್ರ ವಿತರಿಸಲು ಕ್ರಮ ವಹಿಸಿದ್ದೇನೆ ಎಂದರು. ಅಕ್ರಮ ಸಕ್ರಮ ಯೋಜನೆಯಡಿ 3600ಕ್ಕೂ ಅಧಿಕ ಮಂದಿಗೆ ಹಕ್ಕುಪತ್ರ ಒದಗಿಸಿಕೊಟ್ಟಿದ್ದೇನೆ. 7 ಸಾವಿರ ಮಂದಿಗೆ 94 ಸಿ. ಅಡಿಯಲ್ಲಿ ಹಕ್ಕುಪತ್ರ ವಿತರಿಸಲಾಗಿದೆ. ಇದರಲ್ಲಿ ಜೆಡಿಎಸ್‍ನವರೇ ಅಧಿಕವಿದ್ದಾರೆ. ಯಾರಿಂದಲೂ 1 ಕಪ್ ಕಾಫಿಯನ್ನೂ ಕುಡಿದಿಲ್ಲ. ಈ ಕಾರಣಕ್ಕಾಗಿ ಜೆಡಿಎಸ್‍ನವರೂ ಸಹ ಈ ಬಾರಿ ಬಿಜೆಪಿಗೆ ಮತ ಚಲಾಯಿಸಲಿ ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ಭಾರತೀಶ್ ಮಾತನಾಡಿ, ಕಳೆದ 5 ವರ್ಷಗಳಿಂದ ಅಭಿವೃದ್ಧಿ ಕಾರ್ಯದಲ್ಲಿ ಹಿನ್ನಡೆಯಾಗಲು ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಾರ್ಜ್, ಸೀತಾರಾಂ ಅವರುಗಳೇ ಕಾರಣ ಎಂದು ದೂರಿದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಲೋಕೇಶ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದ ಕೂಪವಾಗಿದೆ. ಜಾತಿಗಳನ್ನು ಒಡೆದು ಅಶಾಂತಿ ಸೃಷ್ಟಿಸಿದೆ ಎಂದು ದೂರಿದರು.
ಪಕ್ಷದ ಜಿಲ್ಲಾ ವಕ್ತಾರ ಅಭಿಮನ್ಯುಕುಮಾರ್ ಮಾತನಾಡಿ, ಅನ್ನಭಾಗ್ಯ ಯೋಜನೆಯಡಿ ಒಂದು ಕೆ.ಜಿ. ಅಕ್ಕಿಗೆ ಮೋದಿ ಸರ್ಕಾರ 29.64 ರೂ. ನೀಡಿದರೆ ಸಿದ್ದರಾಮಯ್ಯ ಸರ್ಕಾರ ಕೇವಲ 3 ರೂಪಾಯಿ ನೀಡುತ್ತಿದೆ ಎಂದರು.
ಬಸವಪಟ್ಟಣ ತೋಂಟದಾರ್ಯ ಮಠದ ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಮಾತನಾಡಿ, ಭಾರತ ಮಾತೆ, ಇಲ್ಲಿನ ಸಂಸ್ಕøತಿ, ಆಚಾರ ವಿಚಾರ, ದೇಶ ಪ್ರೇಮ, ದೇಶ ರಕ್ಷಣೆಯ ಸಂಕಲ್ಪ ಇರುವದು ಬಿಜೆಪಿಯಲ್ಲಿ ಮಾತ್ರ. ಹಾಗಾಗಿ ಎಲ್ಲಾ ಮಠಾಧಿಪತಿಗಳು ಬಿಜೆಪಿ ಪರ ಇದ್ದಾರೆ ಎಂದರು.
ಪರಿಶಿಷ್ಟ ಜಾತಿ ಘಟಕದ ಉಪಾಧ್ಯಕ್ಷ ರಾಮಕೃಷ್ಣ ಮಾತನಾಡಿದರು.
ವೇದಿಕೆಯಲ್ಲಿ ಕ್ಷೇತ್ರ ಸಮಿತಿ ಅಧ್ಯಕ್ಷ ಕೊಮಾರಪ್ಪ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯರಾದ ಮಂಜುಳಾ, ಬಿ.ಜೆ. ದೀಪಕ್, ಸರೋಜಮ್ಮ, ತಾ.ಪಂ. ಸದಸ್ಯರಾದ ಕುಶಾಲಪ್ಪ, ತಂಗಮ್ಮ, ಪಕ್ಷದ ಮುಖಂಡರಾದ ವಿ.ಎಂ. ವಿಜಯ, ಕೆ.ವಿ. ಮಂಜುನಾಥ್,ಎಸ್.ಬಿ. ಭರತ್‍ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.