ಮಡಿಕೇರಿ, ಏ. 30: ಇಲ್ಲಿನ ವಾಂಡರರ್ಸ್ ಕ್ಲಬ್ ಹಾಗೂ ಮ್ಯಾನ್ಸ್ ಹಾಕಿ ಅಕಾಡೆಮಿ ವತಿಯಿಂದ ನಡೆಯುತ್ತಿರುವ ಮಕ್ಕಳ ಬೇಸಿಗೆ ಹಾಕಿ ತರಬೇತಿ ಶಿಬಿರದ ಅಂಗವಾಗಿ ಇಂದು ಟರ್ಫ್ ಮೈದಾನದಲ್ಲಿ ಶಿಬಿರದ ಮಕ್ಕಳಿಗೆ ಇವರ ತಂಡಗಳೊಂದಿಗೆ ಹಾಕಿ ಪಂದ್ಯಾವಳಿ ಏರ್ಪಡಿಸಲಾಗಿತ್ತು.
ಶಿಬಿರದಲ್ಲಿ ಪುಟಾಣಿ ಮಕ್ಕಳನ್ನು ವಿಂಗಡಿಸಿ, ತಂಡಗಳನ್ನು ರಚಿಸಿ ಪಂದ್ಯಾಟ ನಡೆಸಲಾಯಿತು. ಬಿ.ಕೆ. ಸುಬ್ಬಯ್ಯ ಕಪ್ ಬಾಲಕರ ವಿಭಾಗದಲ್ಲಿ ಕುಶಾಲನಗರ ತಂಡ ಹಾಗೂ ವಾಂಡರರ್ಸ್ ತಂಡಗಳ ನಡುವೆ ನಡೆದು ಕುಶಾಲನಗರ ಬಾಲಕರ ತಂಡ ಜಯಗಳಿಸಿತು. ಶಂಕರಸ್ವಾಮಿ ಕಪ್ ಬಾಲಕಿಯರ ವಿಭಾಗದಲ್ಲಿ ವಾಂಡರರ್ಸ್ ಹಾಗೂ ಕುಶಾಲನಗರ ತಂಡಗಳ ನಡುವೆ ನಡೆದು ವಾಂಡರರ್ಸ್ ತಂಡ 6-0 ಗೋಲುಗಳ ಅಂತರದಿಂದ ಜಯಗಳಿಸಿತು. ಸಾಯಿ ವಸತಿ ನಿಲಯದ ಆಟಗಾರ್ತಿಯರು ಕೂಡ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ವಾಂಡರರ್ಸ್‍ನ ಬಾಬು ಸೋಮಯ್ಯ, ಶ್ಯಾಂ, ಗಣೇಶ್, ಅಯ್ಯಪ್ಪ, ಲಕ್ಷ್ಮಣ್ ಸಿಂಗ್, ಯೋಗ ಶಿಕ್ಷಕ ವೆಂಕಟೇಶ್ ಇನ್ನಿತರರು ಪಾಲ್ಗೊಂಡಿದ್ದರು.