ಮಡಿಕೇರಿ, ಏ. 30: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆಯ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಗೋಣಿಕೊಪ್ಪಲುವಿನ ವಿದ್ಯಾನಿಕೇತನ ಕಾಲೇಜು ವಿಜ್ಞಾನ ವಿಭಾಗದಲ್ಲಿ ಮೇಲುಗೈ ಸಾಧಿಸಿದೆ. ಈ ಕಾಲೇಜಿನ ವಿದ್ಯಾರ್ಥಿಗಳು ಅದ್ವಿತೀಯ ಸಾಧನೆ ತೋರಿದ್ದು, ‘ಶಕ್ತಿ’ಗೆ ತಿಳಿದುಬಂದ ತಾ. 30ರ ಮಾಹಿತಿಯಂತೆ ಪ್ರಥಮ ನಾಲ್ಕು ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಗೋಣಿಕೊಪ್ಪಲುವಿನ ಮತ್ತೊಂದು ಪ್ರತಿಷ್ಠಿತ ಕಾಲೇಜಾದ ಕಾಪ್ಸ್ ಶಾಲೆ ವಿಜ್ಞಾನ ವಿಭಾಗದಲ್ಲಿ ಎರಡನೇ ಸ್ಥಾನವನ್ನು ಹಂಚಿಕೊಂಡಿದೆ.ವಿದ್ಯಾನಿಕೇತನ ಕಾಲೇಜಿನ ವಿದ್ಯಾರ್ಥಿ ಸ್ವರೂಪ್ ಆರ್. 590 ಅಂಕ ಗಳಿಸಿ ಜಿಲ್ಲೆಗೆ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದರೆ ಈತ ರಾಜ್ಯ

(ಮೊದಲ ಪುಟದಿಂದ) ಮಟ್ಟದಲ್ಲಿಯೂ 7ನೇ ಸ್ಥಾನ ಪಡೆದುಕೊಂಡಿರುವದಾಗಿ ತಿಳಿದುಬಂದಿದೆ. ಸ್ವರೂಪ್, ರಘುನಾಥ್ ಎಸ್. ಹಾಗೂ ಭಾಗ್ಯಲಕ್ಷ್ಮಿ ದಂಪತಿಯ ಪುತ್ರ. ಸ್ವರೂಪ್ ಗಳಿಸಿರುವ ಅಂಕ ಇಂತಿದೆ : (ಕನ್ನಡ-99, ಇಂಗ್ಲೀಷ್ - 93, ಭೌತಶಾಸ್ತ್ರ-100, ರಸಾಯನಶಾಸ್ತ್ರ-99, ಜೀವಶಾಸ್ತ್ರ-99 ಹಾಗೂ ಗಣಿತ -100)

ರಿಷಿರಾ ದ್ವಿತೀಯ

ವಿದ್ಯಾನಿಕೇತನ ಶಾಲೆಯ ಮತ್ತೋರ್ವ ವಿದ್ಯಾರ್ಥಿನಿ ಸಣ್ಣುವಂಡ ರಿಷಿರಾ ದೇಚಮ್ಮ 583 ಅಂಕದೊಂದಿಗೆ ದ್ವಿತೀಯ ಸ್ಥಾನ ಗಳಿಸಿಕೊಂಡಿದ್ದಾಳೆ. ಗೋಣಿಕೊಪ್ಪಲು ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸಣ್ಣುವಂಡ ರತನ್ ಮಾದಯ್ಯ ಹಾಗೂ ಅಲ್ಲಿನ ಪ್ರೌಢಶಾಲೆಯ ಶಿಕ್ಷಕಿ ವಿದ್ಯಾ ಮಾದಯ್ಯ ಅವರ ಪುತ್ರಿಯಾಗಿರುವ ರಿಷಿರಾ ಗಳಿಸಿರುವ ಅಂಕ ಇಂತಿದೆ: (ಹಿಂದಿ-96, ಇಂಗ್ಲೀಷ್-93, ಭೌತಶಾಸ್ತ್ರ-98, ರಸಾಯನಶಾಸ್ತ್ರ-99, ಗಣಿತ-99 ಹಾಗೂ ಕಂಪ್ಯೂಟರ್ ಸೈನ್ಸ್-99)

ಕಾಪ್ಸ್ ಸಾಧನೆ

ವಿಜ್ಞಾನ ವಿಭಾಗದಲ್ಲಿ ಕಾಪ್ಸ್ ಕಾಲೇಜಿನ ವಿದ್ಯಾರ್ಥಿನಿ ವಿಜೇತ ಕೂಡ 583 ಅಂಕದೊಂದಿಗೆ ದ್ವಿತೀಯ ಸ್ಥಾನವನ್ನು ಹಂಚಿಕೊಂಡಿದ್ದಾರೆ.

ಹಿತಾಗೆ ಮೂರನೇ ಸ್ಥಾನ

ವಿದ್ಯಾನಿಕೇತನ ಶಾಲೆಯ ಮತ್ತೋರ್ವ ವಿದ್ಯಾರ್ಥಿನಿ ಅಳಮೇಂಗಡ ಆರ್. ಹಿತಾ 580 ಅಂಕದೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾಳೆ. ಅಳಮೇಂಗಡ ರವಿ ಹಾಗೂ ಮುತ್ತಮ್ಮ ದಂಪತಿಯ ಪುತ್ರಿ ಹಿತಾ ಗಳಿಸಿರುವ ಅಂಕ (ಇಂಗ್ಲೀಷ್-99, ಭೌತಶಾಸ್ತ್ರ-99, ರಸಾಯನಶಾಸ್ತ್ರ-97, ಗಣಿತ -99, ಜೀವಶಾಸ್ತ್ರ-99 ಹಾಗೂ ಕನ್ನಡ- 88).