ಗೋಣಿಕೊಪ್ಪಲು, ಏ. 30: ಕಳೆದ ಬಾರಿಯ ಫೈನಲ್ ಪಂದ್ಯಾಟದಲ್ಲಿ ರನ್ನರ್ಸ್ ಅಪ್‍ಗೆ ತೃಪ್ತಿ ಪಟ್ಟಿದ್ದ ಅಮ್ಮತ್ತೀರ ಕುಟುಂಬ ತಂಡ ಈ ಬಾರಿ ಪುತ್ತಾಮನೆ ಕಪ್‍ಗೆ ಮುತ್ತಿಕ್ಕುವಲ್ಲಿ ಸಫಲವಾಯಿತು.ಎರಡು ಬಾರಿಯ ಚಾಂಪಿಯನ್ ತಂಡ ಆತೀಥೇಯ ಪುತ್ತಾಮನೆ ತಂಡವನ್ನು ಕ್ವಾರ್ಟರ್ ಫೈನಲ್ಸ್‍ನಲ್ಲಿ ಬಲ್ಯಂಡ ತಂಡ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದರೆ, ಹೆಮ್ಮಚ್ಚಿಮನೆ ತಂಡ ಸೆಮಿಫೈನಲ್‍ನಲ್ಲಿ ಬಲ್ಯಂಡ ತಂಡವನ್ನು ಸೋಲಿಸಿ ಪ್ರಥಮ ಬಾರಿಗೆ ಅಮ್ಮಕೊಡವ ಕ್ರಿಕೆಟ್ ಫೈನಲ್ ಪ್ರವೇಶಿಸಿತು.ಕಳೆದ ಬಾರಿಯ ಫೈನಲ್‍ನಲ್ಲಿ ನಿರಾಸೆ ಅನುಭವಿಸಿದ್ದ ಅಮ್ಮತ್ತೀರ ತಂಡ ಈ ಬಾರಿ ಗೆಲ್ಲುವ ಛಲದೊಂದಿಗೆ ಆಟವಾಡಿ ಸೆಮಿಫೈನಲ್‍ನಲ್ಲಿ ಆಂಡಮಾಡ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತು.

ಫೈನಲ್ ಪಂದ್ಯದ ನಿಗಧಿತ 8 ಓವರ್‍ಗಳಲ್ಲಿ ಮೊದಲು ಬ್ಯಾಟ್ ಮಾಡಿದ ಹೆಮ್ಮಚ್ಚಿಮನೆ ತಂಡ 4 ವಿಕೆಟ್ ಕಳೆದುಕೊಂಡು 78 ರನ್ ಕಲೆಹಾಕಿತು. ಬಲಿಷ್ಠ ತಂಡವಾದ ಅಮ್ಮತ್ತೀರ ತಂಡವು ಇನ್ನೂ ಮೂರು ಓವರ್ ಬಾಕಿ ಇರುವಂತೆ ಕೇವಲ 1 ವಿಕೆಟ್ ಕಳೆದುಕೊಂಡು 80 ರನ್ ಗಳಿಸುವ ಮೂಲಕ ಮೊದಲ ಪ್ರಶಸ್ತಿ ಗೆದ್ದುಕೊಂಡಿತು.

ಹೆಮ್ಮಚ್ಚಿಮನೆ ತಂಡದ ಪರ 5 ಸಿಕ್ಸರ್ ಬಾರಿಸಿದ ದರ್ಶನ್ 42 ರನ್ ಗಳಿಸಿದರೆ, ಅಮ್ಮತ್ತೀರ ತಂಡದ ಪರ ಗಣೇಶ್ 4 ಸಿಕ್ಸ್‍ನೊಂದಿಗೆ 59 ರನ್ ಬಾರಿಸಿ ತಂಡ ಚಾಂಪಿಯನ್ ಪಟ್ಟ ಅಲಂಕರಿಸಲು ನೆರವಾದರು.

ಅಮ್ಮತ್ತೀರ ಗಣೇಶ್ ಹೆಮ್ಮಚ್ಚಿಮನೆ ತಂಡದ ಎರಡು ವಿಕೆಟ್ ಕೂಡಾ ಗಳಿಸಿ ಆಲ್‍ರೌಂಡ್ ಆಟವಾಡಿದರು.

ವಿಜಯದ ಬೌಂಡರಿಯನ್ನು ಗಣೇಶ್ ಬಾರಿಸುತ್ತಿದ್ದಂತೆಯೇ ಅಮ್ಮತ್ತೀರ ಕುಟುಂಬಸ್ಥರು ಮೈದಾನಕ್ಕೆ ನುಗ್ಗಿ, ಕುಣಿದು ಕುಪ್ಪಳಿಸುತ್ತಾ ವಿಜಯೋತ್ಸವ ಆಚರಿಸಿದರು.

ಅಮ್ಮತ್ತೀರ ವಿಜೇತ ತಂಡ ಪುತ್ತಾಮನೆ ಕಪ್,

(ಮೊದಲ ಪುಟದಿಂದ) ಪರ್ಯಾಯ ಪಾರಿತೋಷಕ ಹಾಗೂ ರೂ.25 ಸಾವಿರ ನಗದನ್ನು ಗೆದ್ದುಕೊಂಡಿತು. ರನ್ನರ್ಸ್ ತಂಡ ಹೆಮ್ಮಚ್ಚಿಮನೆಗೆ ಟ್ರೋಫಿಯೊಂದಿಗೆ ರೂ.15 ಸಾವಿರ ನಗದು ಬಹುಮಾನ ನೀಡಲಾಯಿತು.

ಸರಣಿ ಪುರುಷೋತ್ತಮ ಪ್ರಶಸ್ತಿಗೆ ಬಲ್ಯಂಡ ಶರತ್ ಭಾಜನರಾದರು. ಪಂದ್ಯದ ವ್ಯಕ್ತಿ ಪ್ರಶಸ್ತಿ ಹಾಗೂ ಅತ್ಯುತ್ತಮ ಬೌಲರ್ ಪ್ರಶಸ್ತಿ ಅಮ್ಮತ್ತೀರ ಸುನಿಲ್ ಪಾಲಾಯಿತು.

ಅತ್ಯುತ್ತಮ ಬ್ಯಾಟ್ಸ್‍ಮೆನ್ ಪ್ರಶಸ್ತಿ ಅಮ್ಮತೀರ ಗಣೇಶ್ ಹಾಗೂ ಪಂದ್ಯವೊಂದರಲ್ಲಿ ಅತ್ಯಧಿಕ ರನ್ ಗಳಿಸಿದ ಕೆ. ಕೀರ್ತನ್ ಮತ್ತು ಬಾನಂಡ ವಿವೇಕ್‍ಗೆ ನೀಡಲಾಯಿತು.

ಅಖಿಲ ಅಮ್ಮಕೊಡವ ಸಮಾಜದ ಅಧ್ಯಕ್ಷ ಬಾನಂಡ ಪ್ರಥ್ಯು ಹಾಗೂ ಪುತ್ತಾಮನೆ ಕುಟುಂಬದ ಅಧ್ಯಕ್ಷರಾದ ಪಿ.ಎಂ.ಗಣೇಶ್ ಅವರು ಮಾತನಾಡಿ, ವರ್ಷದಿಂದ ವರ್ಷಕ್ಕೆ ಅಮ್ಮಕೊಡವ ಕುಟುಂಬಗಳನ್ನು ಕ್ರಿಕೆಟ್ ಹಬ್ಬ ಅಧಿಕವಾಗಿ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದೀಗ ಪುತ್ತಾಮನೆ ಕುಟುಂಬದ ಆತಿಥ್ಯ ಯಶಸ್ವಿಯಾಗಿದ್ದು ಮುಂದಿನ ವರ್ಷ ಹೆಮ್ಮಚ್ಚಿಮನೆ ಕುಟುಂಬ ಆತಿಥ್ಯವಹಿಸಿಕೊಳ್ಳುತ್ತಿದ್ದು, ಇನ್ನು ಹಲವಾರು ಕುಟುಂಬಗಳು ಕ್ರೀಡಾ ಹಬ್ಬ ನಡೆಸಲು ಮುಂದೆ ಬಂದಿರುವದು ಉತ್ತಮ ಬೆಳವಣಿಗೆ ಎಂದರು.

ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ನಾಳಿಮಂಡ ಉಮೇಶ್‍ಕೇಚಮಯ್ಯ, ನಾಪೆÇೀಕ್ಲುವಿನ ನಿವೃತ್ತ ಪೆÇೀಸ್ಟ್ ಮಾಸ್ಟರ್ ಪಾಡಿಯಮ್ಮಂಡ ಮುತ್ತಮಯ್ಯ ಮುಂತಾದವರು ಮಾತನಾಡಿದರು.

ಇಂದು ಫೈನಲ್ ಪಂದ್ಯಾಟದ ನಂತರ ಗೋಣಿಕೊಪ್ಪಲಿನ ಸೈಕ್ಲೋನ್ ತಂಡದ ನೃತ್ಯಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಅಖಿಲ ಅಮ್ಮ ಕೊಡವ ಸಮಾಜದ ಅಧ್ಯಕ್ಷರು ಹಾಗೂ ಪುತ್ತಾಮನೆ ಕುಟುಂಬಸ್ಥರು ಮುಂದಿನ ವರ್ಷ ಆತಿಥ್ಯ ವಹಿಸುತ್ತಿರುವ ಹೆಮ್ಮಚ್ಚಿಮನೆಯ ಕುಟುಂಬ ಅಧ್ಯಕ್ಷ ನಾಣಮಯ್ಯ, ಹೆಚ್.ಜಿ.ವಿಠಲ, ಡಾ. ಸರಸ್ವತಿ ಸೋಮೇಶ್ ಅವರಿಗೆ ಧ್ವಜವನ್ನು ಹಸ್ತಾಂತರಿಸಿದರು. ಇಂದು ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಮಾಜದ ಪ್ರಧಾನ ಕಾರ್ಯದರ್ಶಿ ಮನ್ನಕ್ಕ ಮನೆ ಬಾಲಕೃಷ್ಣ, ವಿವಿಧಕ್ಷೇತ್ರದ ಗಣ್ಯರಾದ ಸ್ವಾತಿ ರವಿ, ಬಲ್ಯಂಡ ದಿನು, ಪುತ್ತಾಮನೆ ಶ್ರೀನಿವಾಸ್, ಪುತ್ತಾಮನೆ ಅರುಣ, ಡಾ. ಪುತ್ತಾಮನೆ ಅಶೋಕ್, ಮಾಜಿ ರಾಷ್ಟ್ರೀಯ ಜೂನಿಯರ್ ಇಂಡಿಯಾ ಹಾಕಿ ಕ್ಯಾಪ್ಟನ್ ಪುತ್ತಾಮನೆ ರೋಶನ್, ಟ್ರೋಫಿ ದಾನಿಗಳು ಪುತ್ತಾಮನೆ ಸುಕುಮಾರ್, ರಾಧಾ ಗಣೇಶ್ ಮುಂತಾದವರು ಉಪಸ್ಥಿತರಿದ್ದರು.

ವಿದ್ಯಾ ಜಗದೀಶ್ ಪ್ರಾರ್ಥನೆ, ಶಾಂಭವಿ ಪ್ರಸಾದ್ ಸ್ವಾಗತ ಹಾಗೂ ಪುತ್ತಾಮನೆ ಅನಿತಾ ವಂದಿಸಿದರು.

ವರದಿ: ಟಿ.ಎಲ್. ಶ್ರೀನಿವಾಸ್