ಚೆಟ್ಟಳ್ಳಿ, ಏ. 30: ಸೋಮವಾರಪೇಟೆ ತಾಲೂಕಿನ ಚೇರಳ-ಶ್ರೀಮಂಗಲ ಗ್ರಾಮದ ನೆಲ್ಲಿಹಡ್ಲುವಿನಲ್ಲಿ ಚೇರಳ ಗೌಡ ಸಂಘದ ವತಿಯಿಂದ ಸಾರ್ವಜನಿಕ ಸಮುದಾಯ ಭವನ ನಿರ್ಮಾಣವಾಗುತ್ತಿದೆ.
ಚೇರಳ ಗ್ರಾಮದ ಗೌಡ ಕುಟುಂಬಗಳಾದ ಹತ್ತು ಕುಟುಂಬ ಹದಿನೆಂಟು ಗೋತ್ರಕ್ಕೆ ಸೇರಿದ ಇಪ್ಪತೆರಡು ಮನೆಗಳಾದ ಮರದಾಳು, ನೂಜಿಬೈಲು, ಪೇರಿಯನ, ಕೊಳಂಬೆ ಅಯ್ಯಂಡ್ರ, ಆಜೀರ, ಸಿದ್ದಿಕಲ್ಲು, ಹೊಸಮನೆ, ಮೇಚನ, ಕೊಂಬನ, ಮುಕ್ಕಾಟಿ, ಕಲ್ಪಡ, ಚೆಟ್ಟೋಳಿರ, ಕಡ್ಯದ, ಗುಡ್ಡನ, ಪಡನೋಳನ, ಬಾಡನ, ಚೆಟ್ಟಿಮಾಡ, ಅಮ್ಮವನ, ಬಾರಿಕೆ, ಹೊಸೋಕ್ಲು ಹಾಗೂ ಪದೊಳಿ ಮನೆಯ ಸುಮಾರು 250 ಸದಸ್ಯರು ಸೇರಿ 2008ನೇ ಸೆಪ್ಟಂಬರ್ 7 ರಂದು ಕೊಳಂಬೆ ಯಾದವನ ಅವರ ಅಧ್ಯಕ್ಷತೆಯಲ್ಲಿ ಚೇರಳ ಗೌಡ ಸಂಘವನ್ನು ಸ್ಥಾಪಿಸಿ ಸಮಿತಿಯನ್ನು ಮಾಡಲಾಯಿತು.
ಗೌಡ ಜನಾಂಗದ ಆಚಾರ-ವಿಚಾರ, ಒಗ್ಗಟ್ಟು, ಸಂಸ್ಕøತಿಯ ಅರಿವು ಮೂಡಿಸುವದು ಹಾಗೂ ಪರಸ್ಪರ ಸಹಕರಿಸುವದೇಯೋದ್ದೇಶದಿಂದ ಈ ಸಂಘವನ್ನು ಮಾಡಲಾಗಿದೆ ಎಂದು ಸಮಿತಿಯವರು ಹೇಳಿದ್ದಾರೆ.
ಚೆಟ್ಟಳ್ಳಿಯ ಸುತ್ತಲಿನ ಹಳ್ಳಿಗಳಾದ ಚೇರಳ, ಶ್ರೀಮಂಗಲ, ಈರಳೆವಳಮುಡಿ, ವಾಲ್ನೂರು, ಕೆ. ಚೆಟ್ಟಳ್ಳಿ, ಪೊನ್ನತಮೊಟ್ಟೆಯ ಜನತೆಗೆ ಹಬ್ಬ-ಹರಿದಿನ, ಸಭೆ-ಸಮಾರಂಭಗಳನ್ನು ನಡೆಸಲು ಸಮುದಾಯ ಭವನದ ಅವಶ್ಯಕತೆ ಇರುವದರಿಂದ ಸ್ಥಳೀಯ ಹಾಗೂ ದಾನಿಗಳ ಸಹಕಾರದೊಂದಿಗೆ ಚೇರಳ ಗೌಡ ಸಂಘದ ವತಿಯಿಂದ ತೀರ್ಮಾನಿಸಲಾಯಿತು. ನೆಲ್ಲಿಹಡ್ಲುವಿನ ರಸ್ತೆ ಬದಿಯಲ್ಲಿ ಉತ್ತಮ ಪರಿಸರ ಹೊಂದಿರುವ 13 ಸೆಂಟು ಜಾಗವನ್ನು ಖರೀದಿಸಿ ಸುಮಾರು ರೂ. 45 ಲಕ್ಷ ವೆಚ್ಚದಲ್ಲಿ ಸಾರ್ವಜನಿಕ ಸಮುದಾಯ ಭವನ ನಿರ್ಮಿಸಲು ಕಟ್ಟಡ ರೂಪುರೇಖೆಯನ್ನು ತಯಾರಿಸಲಾಯಿತು. ಸಂಘದ ಸದಸ್ಯರೆಲ್ಲರ ಆರ್ಥಿಕ ಸಹಾಯದಿಂದ ಕಟ್ಟಡ ನಿರ್ಮಿಸಲು ಪ್ರಾರಂಭಿಸಲಾಗಿದೆ. ಸಂಘದ ಸದಸ್ಯರಿಂದ ಈಗಾಗಲೇ ರೂ. 15 ಲಕ್ಷ ಸಂಗ್ರಹವಾಗಿದ್ದು, ಹಿಂದುಳಿದ ವರ್ಗದ ಕಲ್ಯಾಣ ಇಲಾಖೆಯಿಂದ ರೂ. 15 ಲಕ್ಷ ಸಹಾಯಧನ ಬರಲಿದ್ದು, ಬೆಂಗಳೂರಿನ ಎಂ ಅಯಿಂಡ್ ಎಂ ಕಂಪೆನಿಯ ಮಾಲೀಕರು ಕೊಡಗಿನವರಾದ ನಾಪಂಡ ಮುತ್ತಪ್ಪ ಹಾಗೂ ಮುದ್ದಪ್ಪನವರು ಸಮುದಾಯ ಭವನಕ್ಕೆ ಬೇಕಾದಷ್ಟು ಗ್ರ್ಯಾನೈಟನ್ನು ಉದಾರವಾಗಿ ನೀಡಿದ್ದಾರೆ ಜೊತೆಗೆ ಸಾರ್ವಜನಿಕರಿಂದ ದೇಣಿಗೆಯನ್ನೂ ಸಂಗ್ರಹಿಸಲಾಗುತ್ತಿದೆ.
ಪ್ರಸ್ತುತ ಅಧ್ಯಕ್ಷರಾಗಿ ಅಯ್ಯಂಡ್ರ ಸಿ. ರಾಘವಯ್ಯ, ಉಪಾಧ್ಯಕ್ಷರಾಗಿ ಹೊಸಮನೆ ಟಿ. ಪೂವಯ್ಯ, ಕಾರ್ಯದರ್ಶಿಯಾಗಿ ಆಜೀರ ಬಿ. ಧನಂಜಯ, ಖಜಾಂಚಿಯಾಗಿ ಮುಕ್ಕಾಟಿರ ಎ. ಪಳಂಗಪ್ಪ, ವಿಶೇಷ ಸಲಹೆಗಾರರಾಗಿ ಮೇಚನ ಪಿ. ವಾಸು, ಉಪ ಕಾರ್ಯದರ್ಶಿಗಳಾಗಿ ನೂಜಿಬೈಲು ಡಿ. ನಾಣಯ್ಯ, ಮರದಾಳು ಬಿ. ಜನಾರ್ಧನ, ಸಂಘಟನಾ ಕಾರ್ಯದರ್ಶಿಯಾಗಿ ಪೇರಿಯನ ಎಸ್. ಪೂಣಚ್ಚ ಹಾಗೂ 18 ನಿರ್ದೇಶಕರಿದ್ದಾರೆ.
“2008 ರಲ್ಲಿ ಚೇರಳ ಗೌಡ ಸಂಘವನ್ನು ಪ್ರಾರಂಭಿಸಿ ಉತ್ತಮ ಕಾರ್ಯವನ್ನು ಮಾಡುತ್ತಿರುವದರ ಜೊತೆಗೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಮುದಾಯ ಭವನವನ್ನು ನಿರ್ಮಿಸಲು ಶ್ರಮಿಸುತ್ತಿರುವ ಬಗ್ಗೆ ಅಧ್ಯಕ್ಷ ಅಯ್ಯಂಡ್ರ ಸಿ. ರಾಘವಯ್ಯ ಹೇಳುತ್ತಾರೆ.
- ಕರುಣ್ ಕಾಳಯ್ಯ