ಸೋಮವಾರಪೇಟೆ, ಏ. 29: ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಐದಾರು ಸ್ಥಳಗಳಲ್ಲಿ ಅಕ್ರಮ ‘ಅಂದರ್ ಬಾಹರ್’ ನಿರಾತಂಕವಾಗಿ ನಡೆಯುತ್ತಿದೆ. ಪೈಂಟ್ ಕೆಲಸ ಮಾಡುತ್ತಿದ್ದ ಮನೆ ಹಾಳ ಮನಸ್ಸಿನ ವ್ಯಕ್ತಿಯೋರ್ವ ಇತರ ಜೂಜುಕೋರ ರನ್ನು ಸೇರಿಸಿಕೊಂಡು ಹೈಟೆಕ್ ಆಟಕ್ಕೆ ಪಿಡಿಗಳನ್ನು (ಇಸ್ಪೀಟ್ ಹಾಳೆ) ಹಾಕಿ ಏನಿಲ್ಲವೆಂದರೂ ದಿನಕ್ಕೆ ಐದಾರು ಸಾವಿರ ಹಣ ಸಂಪಾದಿಸುತ್ತಿದ್ದಾನೆ.

ಈತನನ್ನು ಪೊಲೀಸ್ ಠಾಣೆಗೆ ಕರೆಸಿ ವಾರ್ನಿಂಗ್ ನೀಡಿದ್ದರೂ ಸಹ ‘ಪೊಲೀಸರೇನು ಮಹಾ’ ಎಂಬರ್ಥ ದಲ್ಲಿ ತನ್ನ ಹಿಂದಿನ ಚಾಳಿಯನ್ನೇ ಮುಂದುವರೆಸಿದ್ದಾನೆ. ಈ ಹಿಂದೆ ಕಳ್ಳತನ ಕೇಸ್ ಒಂದರಲ್ಲಿ ಪೊಲೀಸರಿಂದ ಬಂಧಿತನಾಗಿ ಬುದ್ದಿ ಕಲಿಯದ ಈತ ಮತ್ತೆ ದುರ್ಬುದ್ಧಿ ತೋರುತ್ತಿದ್ದು, ಜೂಜುಕೋರರ ಮಾಸ್ಟರ್ ಆಗಿದ್ದಾನೆ!

ಹಲವು ಕಾಫಿ ತೋಟಗಳಲ್ಲಿ ನಿರಾತಂಕವಾಗಿ ಇಸ್ಪೀಟ್ ಆಟ ನಡೆಯುತ್ತಿದ್ದು, ತೋಟ ಮಾಲೀಕರಿಗೆ ದಿನವೊಂದಕ್ಕೆ ರೂ. 1 ಸಾವಿರ ಜಾಗದ ಬಾಡಿಗೆ ನೀಡುತ್ತಿದ್ದಾನೆ ಎಂದು ಈತನನ್ನು ಬಲ್ಲವರು ಮಾಹಿತಿ ನೀಡಿದ್ದಾರೆ.

ಇದರೊಂದಿಗೆ ಕರ್ಕಳ್ಳಿಯಲ್ಲಿ ನಾಲ್ಕೈದು ಜಾಗಗಳನ್ನು ಇಸ್ಪೀಟ್ ಆಡಲೆಂದೇ ಬಳಸಿಕೊಳ್ಳ ಲಾಗುತ್ತಿದೆ. ಟಾರ್ಪಲ್ ಕಟ್ಟಿಕೊಂಡು ಅಂದರ್ ಬಾಹರ್ ಆಡುತ್ತಿರುವದನ್ನು ಕಂಡ ಸ್ಥಳೀಯರೇ ಹಲವಷ್ಟು ಬಾರಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರೂ ಜೂಜು ಕೋರರು ಮಾತ್ರ ಪೊಲೀಸರ ಕೈಗೆ ಸಿಗದೇ ನುಣುಚಿಕೊಳ್ಳುತ್ತಿದ್ದಾರೆ.

ಕರ್ಕಳ್ಳಿ ಗ್ರಾಮದ ನಾಲ್ಕು ಕಡೆಗಳಲ್ಲಿ ಇಸ್ಪೀಟ್ ಆಡುತ್ತಿದ್ದು, ಸಣ್ಣ ಕೊಲ್ಲಿ ಹರಿಯುವ ಜಾಗವೇ ಅಂದರ್ ಬಾಹರ್ ಅಡ್ಡೆಯಾಗಿದೆ. ಇದರೊಂದಿಗೆ ವಳಗುಂದ, ಹೊಸಬೀಡು ಬಾಣೆ, ಕಿಬ್ಬೆಟ್ಟದ ಕಾಡು, ಊರುಡುವೆ, ಅರಣ್ಯ ಪ್ರದೇಶದಲ್ಲಿ ನಿರಾತಂಕವಾಗಿ ಜೂಜು ನಡೆಯುತ್ತಿದ್ದು, ಪೊಲೀಸರು ಕೊಂಚ ಯೋಚಿಸಬೇಕಾದ ವಿಷಯವೇ ಆಗಿದೆ.

ಈತನ ಉಸ್ತುವಾರಿಯಲ್ಲಿ ನಡೆಯುವ ಇಸ್ಪೀಟ್ ಅಡ್ಡೆಯಲ್ಲಿ ನೀರು-ಬೀರು, ಕಬಾಬ್-ಮದ್ಯ, ಊಟ-ಬೀಡ, ಬೀಡಿ-ಸಿಗರೇಟು ಎಲ್ಲವೂ ಲಭಿಸುತ್ತದೆ. ಇದರೊಂದಿಗೆ ಪಟ್ಟಣದಿಂದ ತನ್ನದೇ ವಾಹನದಲ್ಲಿ ಜೂಜುಕೋರರನ್ನು ಕರೆದುಕೊಂಡು ಹೋಗುತ್ತಾನೆ. ಬಸ್ ನಿಲ್ದಾಣಕ್ಕೆ ಬೆಳಿಗ್ಗೆ ಹಾಜರಾಗುವ ಈತ ತನ್ನ ಸಹಚರರನ್ನು ಗುಂಪುಗೂಡಿಸಿ ಎಲ್ಲಿ ಅಡ್ಡೆ ಹಾಕಬೇಕು? ಎಂದು ನಿರ್ಧರಿಸಿ ನಂತರ ತೆರಳುತ್ತಾನೆ. ಈತನ ಚಲನವಲನ, ಮೊಬೈಲ್ ಕರೆಗಳನ್ನು ಪತ್ತೆಹಚ್ಚಿದರೆ ಹೈಟೆಕ್ ಜೂಜು ಅಡ್ಡೆಯ ಬಗ್ಗೆ ತಿಳಿಯುತ್ತದೆ ಎಂದು ಈತನ ಕರಾಮತ್ತು ಬಲ್ಲವರು ಮಾಹಿತಿ ನೀಡಿದ್ದಾರೆ.

ಒಟ್ಟಾರೆ ಅಕ್ರಮಕ್ಕೆ ಕಡಿವಾಣ ಹಾಕಬೇಕಾದ ಪೊಲೀಸರು ಕೈಕಟ್ಟಿ ಕೂರುವ ಬದಲು ಈತನ ಚಲನವಲನದ ಮೇಲೆ ನಿಗಾ ಇಟ್ಟು, ಖೆಡ್ಡಾ ತೋಡಬೇಕಿದೆ. - ಸತ್ಯದೇವ್