ಸೋಮವಾರಪೇಟೆ, ಏ.30: ಪ್ರಾದೇಶಿಕ ಪಕ್ಷದಿಂದ ಮಾತ್ರ ಕೊಡಗಿನ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಬೇಕಿದ್ದು, ಅವರನ್ನು ಬೆಂಬಲಿಸುವ ಸಲುವಾಗಿ ತಾನು ಮಡಿಕೇರಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆ ಎಂದು ಜೆಡಿಎಸ್ ಅಭ್ಯರ್ಥಿ ಬಿ.ಎ. ಜೀವಿಜಯ ಹೇಳಿದರು.

ಜಾತ್ಯತೀತ ಜನತಾದಳದ ವತಿಯಿಂದ ಇಲ್ಲಿನ ಜೇಸಿ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜೆಡಿಎಸ್ ಅಧಿಕಾರಕ್ಕೆ ಬಂದರೆ ರಾಜ್ಯದ ರೈತರ ಸಾಲ ಮನ್ನಾ ಮಾಡುವದಾಗಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಜೆಡಿಎಸ್‍ನ ಆದ್ಯತೆಯಾಗಿದೆ. ಕಳೆದ 20 ವರ್ಷಗಳಿಂದ ಸೋಮವಾರಪೇಟೆ ಅಭಿವೃದ್ಧಿಯಾಗಿಲ್ಲ. ಇಲ್ಲಿನ ಶಾಸಕರು ನಿಷ್ಕ್ರಿಯರಾಗಿದ್ದಾರೆ ಎಂದು ದೂರಿದರು.

ತಾನು ವೀರಾಜಪೇಟೆ-ಬೈಂದೂರು, ಹಿರಿಸಾವೆ-ಚೆಟ್ಟಳ್ಳಿ, ಜಾಲ್ಸೂರು-ಬೆಂಗಳೂರು ರಸ್ತೆಗೆ ಶ್ರಮಿಸಿದ್ದೇನೆ. ಸುಬ್ರಮಣ್ಯ ರಸ್ತೆಯ ಕನಸು ನನಸಾಗಿಸಲು ಸಾಧ್ಯವಾಗಿಲ್ಲ. ಸೋಮವಾರಪೇಟೆ,ಹೆಬ್ಬಾಲೆ, ಶಿರಂಗಾಲಕ್ಕೆ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲು ಶ್ರಮಿಸಿದ್ದೇನೆ. ಕಸ್ತೂರಿ ರಂಗನ್ ವರದಿ ಅನುಷ್ಠಾನ ಸಮಸ್ಯೆ ಬಗೆಹರಿಸಲು ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಆಗಿಲ್ಲ ಎಂದು ಆರೋಪಿಸಿದರು.

ಬಿಎಸ್‍ಪಿ ಪಕ್ಷದ ಜಿಲ್ಲಾಧ್ಯಕ್ಷ ಮೋಹನ್ ಮೌರ್ಯ ಮಾತನಾಡಿ, ಮನುವಾದಿ ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳು ಮತ ಖರೀದಿಗೆ ಮುಂದಾಗಿವೆ. ಈ ಎರಡೂ ಪಕ್ಷಗಳಿಗೆ ದೇಶ ಬೇಕಾಗಿಲ್ಲ. ದೇಶವನ್ನು ಲೂಟಿ ಮಾಡಿ ವಿದೇಶದಲ್ಲಿ ನೆಲೆಸುತ್ತಿದ್ದಾರೆ. ಎಲ್ಲಾ ಸಮುದಾಯಗಳು ಒಂದಾಗುವ ಮೂಲಕ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು.

ಜೆಡಿಎಸ್ ಮುಖಂಡ ಮಹಮ್ಮದ್ ರಫೀಕ್ ಮಾತನಾಡಿ, ಬಿಜೆಪಿ ಅಭ್ಯರ್ಥಿ ವಿರುದ್ಧವೇ ಸ್ವಪಕ್ಷೀಯರೇ ತಿರುಗಿಬಿದ್ದಿದ್ದಾರೆ. ಅಲ್ಪಸಂಖ್ಯಾತರು, ಜಾತ್ಯತೀತ ಮತದಾರರು ಈ ಬಾರಿ ಜೆಡಿಎಸ್ ಬೆಂಬಲಿಸಲಿದ್ದಾರೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪಕ್ಷದ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಡಿಸಿಲ್ವಾ, ಸೋಮವಾರಪೇಟೆ ತಾಲೂಕು ಹಿಂದುಳಿಯಲು ಶಾಸಕ ರಂಜನ್ ಕಾರಣ. 2004ರಲ್ಲಿ ಕುಡಿಯುವ ನೀರಿನ ಯೋಜನೆಗೆ ಜೀವಿಜಯ 6 ಕೋಟಿ ಅನುದಾನ ಒದಗಿಸಿದ್ದರು. ಸುಬ್ರಹ್ಮಣ್ಯ ರಸ್ತೆಗೂ ಯೋಜನೆ ಸಿದ್ದಪಡಿಸಿದ್ದರು. ಇದರೊಂದಿಗೆ ಗ್ರಾಮೀಣ ಭಾಗದ ರಸ್ತೆಗಳ ನಿರ್ಮಾಣ, ಹೈಟೆಕ್ ಮಾರ್ಕೆಟ್‍ಗೆ ಅನುದಾನ ತರುವಲ್ಲಿ ಶ್ರಮಿಸಿದ್ದರು. ಆದರೆ ಶಾಸಕ ರಂಜನ್ ಅವರು ಶತಮಾನೋತ್ಸವ ಭವನ, ಆಸ್ಟ್ರೋ ಟರ್ಫ್ ನಿರ್ಮಿಸಿಲ್ಲ. ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯನ್ನೂ ನೀಗಿಸಿಲ್ಲ ಎಂದು ದೂರಿದರು.

ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಕೆ.ಎಂ.ಬಿ. ಗಣೇಶ್ ಮಾತನಾಡಿ, ಈ ಬಾರಿ ಮಡಿಕೇರಿ ನಗರ ವ್ಯಾಪ್ತಿಯಲ್ಲೇ ಜೆಡಿಎಸ್‍ಗೆ 10 ಸಾವಿರಕ್ಕೂ ಅಧಿಕ ಮತ ಲಭಿಸಲಿದೆ ಎಂದರು. ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಸಾಕ್ ಖಾನ್ ಮಾತನಾಡಿ, 2 ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ಅಲ್ಪಸಂಖ್ಯಾತ ಘಟಕ ಶ್ರಮಿಸಲಿದೆ. ಕಾಂಗ್ರೆಸ್ ವಿರುದ್ಧ ಅಲ್ಪಸಂಖ್ಯಾತರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಆರ್. ಸುರೇಶ್ ಮಾತನಾಡಿ, ಬಿಜೆಪಿ ಹಾಗೂ ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಂತಿದ್ದು, ಜೆಡಿಎಸ್‍ನತ್ತ ಜನತೆಯ ಒಲವು ವ್ಯಕ್ತವಾಗಿದೆ ಎಂದರು.

ವೇದಿಕೆಯಲ್ಲಿ ತಾ.ಪಂ. ಅಧ್ಯಕ್ಷೆ ಪುಷ್ಪಾ ರಾಜೇಶ್, ರಾಜ್ಯ ಉಪಾಧ್ಯಕ್ಷ ಷರೀಫ್, ಪಕ್ಷದ ಮುಖಂಡರಾದ ಕೆ.ಟಿ. ಪರಮೇಶ್, ತಮ್ಮಯ್ಯ, ಕಮಲ್, ಜಾನಕಿ ವೆಂಕಟೇಶ್, ಕಾಟ್ನಮನೆ ವಿಠಲ್ ಗೌಡ, ಹೆಚ್.ಬಿ. ಜಯಮ್ಮ, ಪುಟ್ಟರಾಜು, ವಿಶ್ವ, ಮನ್ಸೂರ್ ಆಲಿ, ಕೃಷ್ಣಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.