ಮಡಿಕೇರಿ, ಏ. 30: ಕರ್ನಾಟಕ ವಿಧಾನ ಸಭೆಗೆ ಮೇ 12 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಸಲುವಾಗಿ, ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮ ಹಕ್ಕುದಾರಿಕೆ ಸಲ್ಲಿಸಲು ನಾಲ್ಕು ಲಕ್ಷದ ಮೂವತ್ತು ಮೂರು ಸಾವಿರದ ಎಂಟುನೂರ ನಲವತ್ತ ಆರು ಮಂದಿ ಅರ್ಹತೆ ಪಡೆದಿದ್ದಾರೆ. ಈ ಪೈಕಿ ಕರ್ನಾಟಕ ವಿಧಾನಸಭೆಯ 208ನೇ ಮಡಿಕೇರಿ ಕ್ಷೇತ್ರದಲ್ಲಿ 2,16,937 ಮಂದಿ ಮತದಾನದ ಹಕ್ಕು ಹೊಂದಿದ್ದಾರೆ. ಇವರ ಪೈಕಿ ಒಂದು ಲಕ್ಷ ಏಳು ಸಾವಿರದ ಐದುನೂರ ಮೂವತ್ತೆರಡು ಪುರುಷರು ಹಾಗೂ ಒಂದು ಲಕ್ಷದ ಒಂಭತ್ತು ಸಾವಿರದ ಮುನ್ನೂರ ತೊಂಭತ್ತೊಂಬತ್ತು ಮಂದಿ ಮಹಿಳಾ ಮತದಾರರಿದ್ದಾರೆ.

ಅಂತೆಯೇ ಕರ್ನಾಟಕ ವಿಧಾನಸಭೆಯ 209ನೇ ವೀರಾಜಪೇಟೆ ಕ್ಷೇತ್ರದಲ್ಲಿ ಎರಡು ಲಕ್ಷದ ಹದಿನಾರು ಸಾವಿರದ ಒಂಬೈನೂರು ಒಂಭತ್ತು ಮಂದಿ ಚುನಾವಣೆಯಲ್ಲಿ ಮತ ಚಲಾಯಿಸುವ ಅವಕಾಶ ಪಡೆದಿದ್ದಾರೆ. ಈ ಪೈಕಿ ಒಂದು ಲಕ್ಷದ ಎಂಟು ಸಾವಿರದ ಐದು ನೂರ ಎಂಬತ್ತು ಮಂದಿ ಪುರುಷರು ಹಾಗೂ ಒಂದು ಲಕ್ಷದ ಎಂಟು ಸಾವಿರದ ಮುನ್ನೂರ ಹದಿನೆಂಟು ಮಂದಿ ಮಹಿಳಾ ಮತದಾರರು ಮೇ 12 ರಂದು ತಮ್ಮ ಹಕ್ಕುದಾರಿಕೆ ಚಲಾಯಿಸಲು ಅರ್ಹತೆ ಪಡೆದಿದ್ದಾರೆ. ಇವರುಗಳೊಂದಿಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಆರು ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 11 ಮಂದಿ ಇತರ ಮತದಾರರು ಚುನಾವಣೆ ಸಂದರ್ಭ ತಮ್ಮ ಮತ ಚಲಾಯಿಸಲು ಅಧಿಕಾರ ಹೊಂದಿದ್ದಾರೆ.

ಜಿಲ್ಲಾಧಿಕಾರಿ ಮಾಹಿತಿ : ಜಿಲ್ಲಾ ಚುನಾವಣಾಧಿಕಾರಿ ಹಾಗೂ ದಂಡಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಇಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಪ್ರಸಕ್ತ ಚುನಾವಣೆ ಸಂಬಂಧ ಮಾಹಿತಿ ನೀಡಿದರು. ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 14 ಮಂದಿ ಉಮೇದುವಾರಿಕೆ ಸಲ್ಲಿಸಿದ್ದು, ಒಂದು ನಾಮಪತ್ರ ತಿರಸ್ಕøತಗೊಂಡು, ಇಬ್ಬರು ಉಮೇದುವಾರಿಕೆ ಹಿಂಪಡೆದಿದ್ದಾರೆ ಎಂದರಲ್ಲದೆ, ಅಂತಿಮವಾಗಿ ಇಬ್ಬರು ಮಹಿಳಾ ಅಭ್ಯರ್ಥಿಗಳ ಸಹಿತ ಒಟ್ಟು ಹನ್ನೊಂದು ಮಂದಿ ಕಣದಲ್ಲಿ ಉಳಿದಿದ್ದಾರೆ ಎಂದು ಮಾಹಿತಿ ನೀಡಿದರು.

ಅಂತೆಯೇ ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಹನ್ನೊಂದು ಮಂದಿ ಉಮೇದುವಾರಿಕೆ ಸಲ್ಲಿಸುವದರೊಂದಿಗೆ ಐವರು ನಾಮಪತ್ರ ಹಿಂಪಡೆದುಕೊಳ್ಳುವ ಮೂಲಕ ಆರು ಮಂದಿ ಕಣದಲ್ಲಿ ಉಳಿದಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ವಿವರಿಸಿದರು. ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಸಂಬಂಧ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ನೀತಿ ಸಂಹಿತೆ ಕಾಪಾಡಲು ನಿಗಾ ವಹಿಸಲಾಗಿದೆ ಎಂದರು.

ಮತಗಟ್ಟೆ ಸ್ಥಾಪನೆ : ಜಿಲ್ಲೆಯ ಒಟ್ಟು 538 ಮತಗಟ್ಟೆಗಳಲ್ಲಿ ಸಾರ್ವಜನಿಕರು, ಮಹಿಳೆಯರು, ಅಲ್ಪಸಂಖ್ಯಾತರು, ದುರ್ಬಲ ವರ್ಗಗಳ ಮಂದಿ ಮುಕ್ತ ವಾತಾವರಣದಲ್ಲಿ ಮೇ 12 ರಂದು ತಮ್ಮ ಅಮೂಲ್ಯ ಮತಗಳನ್ನು ಚಲಾಯಿಸಲು ವ್ಯವಸ್ಥೆಯೊಂದಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಸಖಿ ಮತಗಟ್ಟೆ : ವಿಶೇಷವಾಗಿ ಮಹಿಳಾ ಮತದಾರರು ಅಧಿಕ ಸಂಖ್ಯೆಯಲ್ಲಿರುವ ಕಡೆಗಳಲ್ಲಿ ಚುನಾವಣಾ ಆಯೋಗದ ನಿರ್ದೇಶನ ದಂತೆ ಈ ಬಾರಿ ಪ್ರಯೋಗಾತ್ಮಕವಾಗಿ ಪ್ರತ್ಯೇಕ ಹತ್ತು ಮತಗಟ್ಟೆ ಸ್ಥಾಪಿಸಲಾಗಿದೆ.

(ಮೊದಲ ಪುಟದಿಂದ) ಪಿಂಕ್ ಅಥವಾ ಸಖಿ ಮತಗಟ್ಟೆ ಹೆಸರಿನಲ್ಲಿ ಮಹಿಳೆಯರಿಗೆ ಈ ಮತಗಟ್ಟೆಗಳಲ್ಲಿ ಮುಕ್ತ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಲ್ಲಿನ ರಕ್ಷಣಾ ಸಿಬ್ಬಂದಿ ಸಹಿತ ಎಲ್ಲಾ ಮತಗಟ್ಟೆ ಅಧಿಕಾರಿ, ಸಿಬ್ಬಂದಿ ಕೂಡ ಮಹಿಳೆಯರಿರುತ್ತಾರೆ ಎಂದು ಶ್ರೀವಿದ್ಯಾ ವಿವರಿಸಿದರು.

ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಡಗದಾಳು ಸರಕಾರಿ ಪ್ರೌಢ ಶಾಲೆಯ ಒಂದು ಗ್ರಾಮೀಣ ಮತಗಟ್ಟೆಯೊಂದಿಗೆ, ಕರ್ನಾಟಕ ಸಹಕಾರ ತರಬೇತಿ ಕೇಂದ್ರ, ಕುಶಾಲನಗರ ಸರಕಾರಿ ಮಾದರಿ ಶಾಲೆ, ಬ್ಲಾಸಂ ಆಂಗ್ಲ ಶಾಲಾ ಕಟ್ಟಡ, ಸಂತ ಮೈಕಲರ ಶಾಲೆ (ಎಡಪಾಶ್ರ್ವ) ಸಮುದಾಯ ಭವನ ಸುಂಕದಕಟ್ಟೆ, ವೀರಾಜಪೇಟೆ ಹಾಗೂ ತೆಲುಗರ ಬೀದಿ ಸಮುದಾಯ ಭವನ ವೀರಾಜಪೇಟೆ, ಸಂತ ಅನ್ನಮ್ಮ ಶಾಲೆ, ವೀರಾಜಪೇಟೆ, ಸರಕಾರಿ ಉರ್ದು ಶಾಲೆ ವೀರಾಜಪೇಟೆ ಮತ್ತು ಬಿಟ್ಟಂಗಾಲ ಗ್ರಾ.ಪಂ. ಕಚೇರಿ ಮತಗಟ್ಟೆಗಳನ್ನು ಈ ವ್ಯವಸ್ಥೆಯಲ್ಲಿ ಸ್ಥಾಪಿಸಲಾಗಿದೆ ಎಂದರು.

ವಿಶೇಷ ಮತಗಟ್ಟೆಗಳು : ಅಂತೆಯೇ ಸಾರ್ವಜನಿಕ ರಂಗದಲ್ಲಿರುವ ಅಂಗವಿಕಲ ಅಧಿಕಾರಿ, ಸಿಬ್ಬಂದಿ ಸಹಿತ ಕಾರ್ಯನಿರ್ವಹಿಸುವ ವಿಶೇಷ ಎರಡು ಮತಗಟ್ಟೆಗಳು ಅಂತಹ ಮತದಾರರಿಗೆ ಅನುಕೂಲದೊಂದಿಗೆ ಕಾರ್ಯ ನಿರ್ವಹಿಸಲಿದ್ದು, ಮಡಿಕೇರಿಯ ತಾಲೂಕು ಪಂಚಾಯತ್ ಕಚೇರಿ ಮತಗಟ್ಟೆ ಹಾಗೂ ವೀರಾಜಪೇಟೆ ಜಯಪ್ರಕಾಶ್ ನಾರಾಯಣ ಹೆಣ್ಣು ಮಕ್ಕಳ ಪ್ರೌಢಶಾಲಾ ಮತಗಟ್ಟೆ ಸ್ಥಾಪಿಸಿರುವದಾಗಿ ವಿವರಿಸಿದರು.

ಪಾರಂಪರಿಕ ಮತಗಟ್ಟೆ : ಇನ್ನೊಂದೆಡೆ ಜಿಲ್ಲೆಯಲ್ಲಿ ಆದಿವಾಸಿಗಳಿಗೆ ಮುಕ್ತ ವಾತಾವರಣದಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಿದ್ದು, ಪಾರಂಪರಿಕ ವಾತಾವರಣದಡಿ ಗುಡ್ಡೆಹೊಸೂರು ಸರಕಾರಿ ಮಾದರಿ ಶಾಲಾ ಮತಗಟ್ಟೆ, ವೀರಾಜಪೇಟೆ ತಾಲೂಕಿನ ಬೊಮ್ಮಾಡು ಸರಕಾರಿ ಆಶ್ರಮ ಶಾಲೆ ಹಾಗೂ ನಾಗರಹೊಳೆ ಸರಕಾರಿ ಆಶ್ರಮ ಶಾಲೆಯ ಮತಗಟ್ಟೆಗಳನ್ನು ರೂಪಿಸಿರುವದಾಗಿ ಶ್ರೀವಿದ್ಯಾ ವಿವರಣೆಯಿತ್ತರು. ಆದಿವಾಸಿಗಳು ಮನೆಯಲ್ಲೇ ಹಕ್ಕು ಚಲಾಯಿಸುವ ಭಾವನೆ ಉಂಟು ಮಾಡುವದು ಈ ಪಾರಂಪರಿಕ ಮತಗಟ್ಟೆ ಸ್ಥಾಪನೆಯ ಆಶಯವೆಂದು ಅವರು ಮಾರ್ನುಡಿದರು.

ಕಾನೂನು ಕ್ರಮ : ಜಿಲ್ಲೆಯಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಪ್ರಕರಣಗಳನ್ನು ಅಬ್ಕಾರಿ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಚುನಾವಣಾ ಸೆಕ್ಟರ್ ಅಧಿಕಾರಿಗಳು ದಾಖಲಿಸಿದ್ದು, ನಗದು ಸೇರಿದಂತೆ ಅಕ್ರಮ ಮದ್ಯ ವಶಪಡೆಯಲಾಗಿದೆ ಎಂದ ಜಿಲ್ಲಾಧಿಕಾರಿ ಯಾವದೇ ಪಕ್ಷ ಅಥವಾ ಅಭ್ಯರ್ಥಿ ವಿರುದ್ಧ ನಿರ್ಧಿಷ್ಟ ಪ್ರಕರಣ ದಾಖಲಾಗಿಲ್ಲವೆಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

12 ರೀತಿ ಗುರುತು ಚೀಟಿ

ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ - 2018ರ ಸಂಬಂಧ ಭಾರತ ಚುನಾವಣಾ ಆಯೋಗವು ತಾ. 24.4.2018ರ ಆದೇಶದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದು, ಗುರುತಿನ ಚೀಟಿ ಇಲ್ಲದೇ ಇದ್ದರೆ ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಈ ಕೆಳಕಂಡ 12 ಬಗೆಯ ಗುರುತಿನ ಚೀಟಿಯನ್ನು ಹಾಜರು ಪಡಿಸಿ ಮತದಾನ ಮಾಡಬಹುದಾಗಿದೆ ಎಂದು ತಿಳಿಸಿರುವದಾಗಿ ಶ್ರೀವಿದ್ಯಾ ಮಾಹಿತಿ ನೀಡಿದರು. ಆ ಪ್ರಕಾರ ಪಾಸ್‍ಪೋರ್ಟ್, ಚಾಲನಾ ಪರವಾನಗಿ ಪತ್ರ, ಕೇಂದ್ರ, ರಾಜ್ಯ, ಅರೆ ಸರ್ಕಾರಿ ಮತ್ತು ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳು ತಮ್ಮ ಸಿಬ್ಬಂದಿಗಳಿಗೆ ನೀಡಿರುವ ಗುರುತಿನ ಚೀಟಿ, ಬ್ಯಾಂಕ್, ಅಂಚೆ ಕಚೇರಿಯು ವಿತರಿಸಿರುವ ಭಾವಚಿತ್ರವಿರುವ ಪಾಸ್‍ಬುಕ್, ಪಾನ್‍ಕಾರ್ಡ್, ನರೇಗಾ ಕಾರ್ಡ್, ಕಾರ್ಮಿಕ ಸಚಿವಾಲಯದ ಯೋಜನೆಯಡಿ ವಿತರಿಸಿರುವ ಹೆಲ್ತ್ ಇನ್ಸೂರೆನ್ಸ್ ಕಾರ್ಡ್, ಆರ್‍ಜಿಐ ವತಿಯಿಂದ ನೀಡಿರುವ ಕಾರ್ಡ್, ಭಾವಚಿತ್ರವಿರುವ ಪಿಂಚಣಿ ದಾಖಲೆಗಳು, ಚುನಾವಣಾ ಆಯೋಗ ನೀಡುವ ವೋಟರ್ ಸ್ಲಿಪ್, ಎಂಪಿಎಸ್, ಎಂಎಲ್‍ಎಎಸ್, ಎಂಎಲ್‍ಸಿಎಸ್ ರವರಿಗೆ ಅಧಿಕೃತವಾಗಿ ನೀಡಿರುವ ಕಾರ್ಡ್‍ಗಳು, ಆಧಾರ್ ಕಾರ್ಡ್ ಇವುಗಳಲ್ಲಿ ಯಾವದಾದರೂ ಒಂದು ಆಗಬಹುದು ಎಂದರು.

ಅಲ್ಲದೆ, ಅಂಚೆ ಮತ ಪತ್ರಗಳ ಮುದ್ರಣ ಸಂಬಂಧ, ಭಾರತ ಚುನಾವಣಾ ಆಯೋಗ ನಿರ್ದೇಶನದಂತೆ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸೇವಾ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಯಾಗಿರುವ ಮತದಾರರಿಗೆ ಮತದಾನಕ್ಕೆ ವ್ಯವಸ್ಥೆಯನ್ನು ಮಾಡಬೇಕಾಗಿದ್ದು, ಜಿಲ್ಲೆಯ 208- ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ - 449 ಹಾಗೂ 209- ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ - 548 ಮಂದಿ ಇದ್ದು, ಈ ಮತದಾರರಿಗೆ ಭಾರತ ಚುನಾವಣಾ ಆಯೋಗವು ಅಭಿವೃದ್ಧಿ ಪಡಿಸಿರುವ ಇಟಿಪಿಬಿಎಸ್ ತಂತ್ರಾಂಶದ ಮೂಲಕ ಮತಪತ್ರವನ್ನು ಈಗಾಗಲೇ ರವಾನೆ ಮಾಡಲಾಗಿರುತ್ತದೆ ಎಂದರು.

ನಗದು ವಶ

ಚುನಾವಣೆ ಘೋಷಣೆಯಾದ ನಂತರ ಇದುವರೆಗೆ 10.56 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಪ್ರಕರಣಗಳಿಗೆ ಸಂಬಂಧಿಸಿ ದಂತೆ 8,290 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ 28.24 ಲಕ್ಷ ರೂ. ಎಂದು ಅಂದಾಜು ಮಾಡಲಾಗಿದೆ. ಮಾಕುಟ್ಟ, ಆನೆಚೌಕೂರು, ಬಾಣವಾರ ಚೆಕ್ ಪೋಸ್ಟ್‍ಗಳಲ್ಲಿ ಪ್ರಕರಣಗಳು ಹೆಚ್ಚಾಗಿ ದಾಖಲಾಗಿವೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆ ಸಂಬಂಧಿಸಿದಂತೆ 217 ಅಬಕಾರಿ ಪ್ರಕರಣಗಳು ಹಾಗೂ 7 ಪೊಲೀಸ್ ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

8823 ಹೊಸ ಮತದಾರರು

ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದಲ್ಲಿ 4,33,846 ಮಂದಿ ಮತದಾರರು ಇದ್ದಾರೆ, ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 2,16,937 ಮತ್ತು ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 2,16,909 ಮಂದಿ ಮತದಾರರು ಇದ್ದಾರೆ. ಹೊಸ ಮತದಾರರು 8,823 ಮಂದಿ ಸೇರ್ಪಡೆಗೊಂಡಿದ್ದಾರೆ ಎಂದು ಅವರು ವಿವರಿಸಿದರು.

ಚುನಾವಣಾ ರಾಯಭಾರಿ: ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಗೆ ದೀಕ್ಷಾ, ಭಗೀರತಿ ಹುಲಿತಾಳ, ಎಸ್.ಕೆ.ಈಶ್ವರಿ ಅವರನ್ನು ಚುನಾವಣಾ ರಾಯಭಾರಿಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಎಂ.ಸತೀಶ್ ಕುಮಾರ್ ಅವರು ಇದ್ದರು.

ವೀಕ್ಷಕರ ಭೇಟಿ

ಸಾಮಾನ್ಯ ಚುನಾವಣಾ ವೀಕ್ಷಕರಾದ ಟಿ.ಶ್ರೀಕಾಂತ್ ಮತ್ತು ಪೊಲೀಸ್ ಚುನಾವಣಾ ವೀಕ್ಷಕರಾದ ಡಾ.ಸತ್ಯಜಿತ್ ನಾಯ್ಕ್ ಅವರು ಇದುವರೆಗೆ ನೂರಕ್ಕೂ ಹೆಚ್ಚು ಮತಗಟ್ಟೆಗಳಿಗೆ ಭೇಟಿ ನೀಡಿ, ಪರಿಶೀಲನೆ ಮಾಡಿದ್ದಾರೆ ಎಂದು ಚುನಾವಣಾ ವೀಕ್ಷಕರ ಉಸ್ತುವಾರಿ ಅಧಿಕಾರಿ ರಮೇಶ್ ಇಪ್ಪಿಕೊಪ್ಪ ತಿಳಿಸಿದ್ದಾರೆ.

ಮತಗಟ್ಟೆಗಳಲ್ಲಿ ರ್ಯಾಂಪ್ ವ್ಯವಸ್ಥೆ, ವಿದ್ಯುತ್ ಸಂಪರ್ಕ, ಕುಡಿಯುವ ನೀರು ಮತ್ತಿತರ ಮೂಲ ಸೌಲಭ್ಯಗಳು ಇವೆಯೇ ಎಂಬ ಬಗ್ಗೆ ಪರಿಶೀಲನೆ ಮಾಡಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಯವರಿಗೆ ಮಾಹಿತಿ ನೀಡಲಾಗಿದೆ ಎಂದು ರಮೇಶ್ ಅವರು ತಿಳಿಸಿದರು.