ಮಡಿಕೇರಿ, ಏ. 30 : ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶ ಮಾಡದೇ ಸುಗಮವಾಗಿ ಚುನಾವಣೆ ನಡೆಸುವಂತೆ ಭಾರತ ಚುನಾವಣಾ ಆಯೋಗದ ಹಿರಿಯ ಉಪ ಚುನಾವಣಾ ಆಯುಕ್ತರಾದ ಉಮೇಶ್ ಸಿನ್ಹಾ ಅವರು ಸಲಹೆ ಮಾಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಧಾನಸಭಾ ಚುನಾವಣೆ ಸಿದ್ಧತೆಗೆ ಸಂಬಂಧಿಸಿ ದಂತೆ ಜಿಲ್ಲಾಧಿಕಾರಿಯವರಿಂದ ಮಾಹಿತಿ ಪಡೆದು ಅವರು ಮಾತನಾಡಿದರು. ವಿಧಾನಸಭಾ ಚುನಾವಣೆ ಸಂಬಂಧ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿಪ್ಯಾಟ್ ಬಗ್ಗೆ ಮತಗಟ್ಟೆ ಅಧಿಕಾರಿಗಳಿಗೆ ಸಮರ್ಪಕ ತರಬೇತಿ ನೀಡುವಂತೆ ಉಮೇಶ್ ಸಿನ್ಹ ಅವರು ಹೇಳಿದರು. ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳಿಗೆ ಇವಿಎಂ ಮತ್ತು ವಿವಿಪ್ಯಾಟ್ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು ಹಾಗೂ ಯಾವುದೇ ರೀತಿಯ ಚುನಾವಣಾ ಅಕ್ರಮಗಳಿಗೆ ಆಸ್ಪದ ನೀಡದೆ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸುವಂತೆ ಹಿರಿಯ ಉಪ ಚುನಾವಣಾ ಆಯುಕ್ತರು ತಿಳಿಸಿದರು.
ಮತದಾನದಂದು ಅಣುಕು ಮತದಾನ ಸಂದರ್ಭದಲ್ಲಿ ಚುನಾವಣಾ ಏಜೆಂಟ್ಗಳು ನಿಗಧಿತ ಸಮಯಕ್ಕೆ ಹಾಜರಿರುವಂತೆ ಮಾಹಿತಿ ನೀಡಿ ಸಂಪೂರ್ಣ ಪಾರದರ್ಶಕತೆ ಹಾಗೂ ವಿಶ್ವಾಸಾರ್ಹತೆಯಿಂದ ಚುನಾವಣೆ ನಡೆಸುವಂತೆ ವಿವರಿಸಿದರು.
ಜಿಲ್ಲೆಯು ಬೆಟ್ಟಗುಡ್ಡಗಳಿಂದ ಕೂಡಿರುವುದರಿಂದ ಕುಗ್ರಾಮಗಳಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆಗಳಲ್ಲಿ ಸುಧಾರಿತ ದೂರಸಂಪರ್ಕ, ತಂತ್ರ ಜ್ಞಾನದ ಮುಖಾಂತರ ಸಂವಹನಕ್ಕೆ ಅನುಕೂಲವಾಗುವಂತೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸಿನ್ಹಾ ಅವರು ಹೇಳಿದರು.
ಚುನಾವಣೆ ಸಂಬಂಧಿಸಿದಂತೆ ಮತದಾನದ ಮಹತ್ವ ಬಗ್ಗೆ ಜಾಗೃತಿ ಮೂಡಿಸಲು ಸಾಮಾಜಿಕ ಜಾಲ ತಾಣಗಳಾದ ವಾಟ್ಸಪ್, ಫೇಸ್ಬುಕ್, ಟ್ವೀಟರ್ ಮುಖಾಂತರ ಚುನಾವಣಾ ಜಾಗೃತಿ ಅಭಿಯಾನ ನಡೆಸಬೇಕು. ಚುನಾವಣಾ ಸಂಬಂಧ ದೂರು ಹಾಗೂ ಸಲಹೆಗಳಿಗೆ ಜಿಲ್ಲೆಯಲ್ಲಿ ಏಕೀಕೃತ ದೂರವಾಣಿ ಸಂಖ್ಯೆ ಒಳಗೊಂಡಂತೆ, ಜನಸ್ನೇಹಿ ಮತದಾನ ಅಭಿಯಾನ ಕೈಗೊಳ್ಳಬೇಕೆಂದು ಅವರು ಸಲಹೆ ಮಾಡಿದರು. ಅರ್ಹ ಮತದಾರರಿಗೆ ಮತದಾನ ಗುರುತಿನ ಚೀಟಿ ನೀಡಲಾಗಿದೆಯೇ ಎಂಬದನ್ನು ಖಾತರಿ ಪಡಿಸಿಕೊಳ್ಳಬೇಕು. ಶೇಕಡವಾರು ಮತದಾನ ಹೆಚ್ಚಳಕ್ಕೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು, ಮಿಂಚಿನ ನೋಂದಣಿಯಡಿ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಿರುವವರಿಗೆ ಮತದಾನದ ಗುರುತಿನ ಚೀಟಿ ನೀಡಬೇಕು ಎಂದು ಅವರು ಸೂಚಿಸಿದರು.
ಅಬಕಾರಿ ಅಕ್ರಮಗಳಿಗೆ ಸಂಬಂಧಿಸಿದಂತೆ ಗಮನ ಹರಿಸ ಬೇಕು. ಸುವಿದ ಸಮಾಧಾನಯಡಿ ದೂರಗಳಿಗೆ ಕೂಡಲೇ ಸ್ಪಂಧಿಸಬೇಕು. ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಕಾರ್ಯಕ್ಕೆ ಅಗತ್ಯ ಸಿದ್ಧತೆ ಮಾಡಿ ಕೊಳ್ಳುವಂತೆ ಚುನಾವಣಾ ಆಯೋಗದ ಹಿರಿಯ ಅಧಿಕಾರಿ ಹೇಳಿದರು.
‘ವಿಧಾನಸಭಾ ಚುನಾವಣೆ ಸಂಬಂಧ ಇದುವರೆಗೆ ಜಿಲ್ಲಾ ಚುನಾವಣಾಧಿಕಾರಿಯವರು ಕೈಗೊಂಡಿರುವ ಸಿದ್ಧತೆ ಬಗ್ಗೆ ಇದೇ ಸಂದರ್ಭದಲ್ಲಿ ಉಮೇಶ್ ಸಿನ್ಹಾ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.’
ಭಾರತ ಚುನಾವಣಾ ಆಯೋಗದ ಉಪ ಚುನಾವಣಾ ಆಯುಕ್ತರಾದ ದಿರೇಂದ್ರ ಓಝಾ, ದಿಲೀಪ್ ಶರ್ಮ ಮತ್ತು ಮಮತಾ ಅವರು ಚುನಾವಣೆಯನ್ನು ಸುಗಮ ವಾಗಿ ಹಾಗೂ ಸುವ್ಯವಸ್ಥಿತವಾಗಿ ನಡೆಸುವ ನಿಟ್ಟಿನಲ್ಲಿ ಹಲವು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಜಿಲ್ಲೆಯಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಿದ್ದು, 538 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ 14 ಚೆಕ್ಪೋಸ್ಟ್ ಗಳನ್ನು ಸ್ಥಾಪಿಸಲಾಗಿದ್ದು, 42 ಸ್ಟ್ಯಾಟಿಕ್ ಸರ್ವೆಲೆನ್ಸ್ ತಂಡ 18 ಪ್ಲೇಯಿಂಗ್ ತಂಡ, 41 ಸೆಕ್ಟರ್ ಅಧಿಕಾರಿಗಳು, 4 ಮಂದಿ ವಿಡಿಯೋ ಸರ್ವೆಲೆನ್ಸ್ ತಂಡ 2 ವಿಡಿಯೋ ವಿವಿಂಗ್ ತಂಡಗಳನ್ನು ನಿಯೋಜಿಸ ಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಚುನಾವಣೆ ಸಂಬಂಧ 119 ದೂರಗಳು ಸಲ್ಲಿಕೆಯಾಗಿದ್ದು, 119 ದೂರು ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಮತಗಟ್ಟೆ ಅಧಿಕಾರಿಗಳಿಗೆ ಸಂಬಂಧಿಸಿದಂತೆ 3,365 ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಜಿ.ಪಂ.ಸಿಇಒ ಪ್ರಶಾಂತ್ಕುಮಾರ್ ಮಿಶ್ರ ಅವರು ಮತದಾರರ ವ್ಯವಸ್ಥಿತ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ವತಿಯಿಂದ ಮನೆ ಮನೆಗೆ ಭೇಟಿ ನೀಡಿ ಕಡ್ಡಾಯವಾಗಿ ಮತದಾನ ಮಾಡುವಂತಾಗಲು ಮನವಿ ಮಾಡಲಾಗಿದೆ. ಆ ನಿಟ್ಟಿನಲ್ಲಿ ಮಿಂಚಿನ ನೋಂದಣಿ, ವಿವಿ ಪ್ಯಾಟ್ ಬಗ್ಗೆ ಮಾಹಿತಿ, ಬೀದಿ ನಾಟಕ, ಸೈಕಲ್ ಜಾಥಾ, ಸಹಿ ಸಂಗ್ರಹ, ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಮೇಣದ ಬತ್ತಿ ಮೆರವಣಿಗೆ ಹೀಗೆ ನಾನಾ ಕಾರ್ಯಕ್ರಮಗಳನ್ನು ಆಯೋಜಿಸ ಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಅವರು ಚುನಾವಣೆ ಸಂಬಂಧ ಅಗತ್ಯ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ಅವರು ತಿಳಿಸಿದರು.
ಚುನಾವಣಾ ವೀಕ್ಷಕರಾದ ಟಿ. ಶ್ರೀಕಾಂತ್ ಮತ್ತು ಸತ್ಯಜಿತ್ ನಾಯ್ಕ್ ಅವರು ಮತಗಟ್ಟೆಗಳಿಗೆ ಭೇಟಿ, ಚುನಾವಣೆ ಸಂಬಂಧ ಹಲವು ಸಲಹೆ ನೀಡಿದರು. ಚುನಾವಣಾ ಅಧಿಕಾರಿ ಗಳಾದ ರಮೇಶ್ ಪಿ.ಕೋನಾ ರೆಡ್ಡಿ, ರಾಜು, ಡಿವೈಎಸ್.ಪಿ ಸುಂದರ್ ರಾಜ್ ಪ್ರೋಬೆಷನರಿ ಎಸ್ಪಿ, ಯತೀಶ್, ವೆಚ್ಚ ನೋಡಲ್ ಅಧಿಕಾರಿ ನಂದ, ಶ್ರೀಧರ್ ಮೂರ್ತಿ ಇತರರು ಇದ್ದರು. ಸಭೆಗೂ ಮೊದಲು ಚುನಾವಣೆ ಸಂಬಂಧ ತೆರೆಯಲಾಗಿ ರುವ ನಿಯಂತ್ರಣ, ವೆಚ್ಚ ನಿರ್ವಹಣಾ ಹಾಗೂ ಎಂಸಿಎಂಸಿ ಕೊಠಡಿಗಳಿಗೆ ತೆರಳಿ ಮಾಹಿತಿ ಪಡೆದರು.