ಸುಂಟಿಕೊಪ್ಪ, ಏ. 30 : ಮುಖ್ಯರಸ್ತೆಯ ಕನ್ನಡ ವೃತ್ತದ ಸಮೀಪವಿರುವ ಮಣಪ್ಪುರಂ ಫೈನಾನ್ಸ್ನಲ್ಲಿ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಪ್ರತಿನಿತ್ಯ ಎಚ್ಚರಿಕೆಯ ಸೈರನ್ ಮೊಳಗುತ್ತಿದ್ದು, ಇದರಿಂದ ಸಾರ್ವಜನಿಕರು ಅಸಮಾದಾನ ವ್ಯಕ್ತಪಡಿಸಿದ್ದಾರೆ. ಪಟ್ಟಣದಲ್ಲಿ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಈ ಖಾಸಗಿ ಫೈನಾನ್ಸಿನಲ್ಲಿ ಹಲವು ದಿನಗಳಿಂದ ರಾತ್ರಿ ಹಗಲೆನ್ನದೇ ಎಚ್ಚರಿಕೆಯ ಸೈರಾನ್ ಮೊಳಗುತ್ತಿದ್ದು, ಕಳ್ಳರು ನುಗ್ಗಿದ್ದರೆಂದು ಭಾವಿಸಿ ಇಲ್ಲಿನ ಸಾರ್ವಜನಿಕರು ಅನೇಕ ಬಾರಿ ಈ ಪೈನಾನ್ಸ್ ಬಳಿ ಬಂದು ಹಿಂತಿರುಗಿದ ಘಟನೆಯು ನಡೆದಿದೆ. ಆದರೆ ಈ ಸೈರಾನ್ ಪ್ರತಿನಿತ್ಯ ಮೊಳಗುತ್ತಿರುವುದರಿಂದ ಅಕ್ಕಪಕ್ಕದ ಮನೆ, ಅಂಗಡಿಯವರಿಗೆ ಕಿರಿ-ಕಿರಿ ಉಂಟಾಗಿ ಪೊಲೀಸ್ ಠಾಣೆಗೂ ಮಾಹಿತಿ ನೀಡಿ, ಅಲ್ಲಿನ ಸಿಬ್ಬಂದಿಗಳನ್ನು ಕರೆಯಿಸಿ ಎಚ್ಚರಿಕೆ ನೀಡಿದ್ದರೂ ತಲೆ ಕೆಡಿಸಿಕೊಳ್ಳದ ಮಣಪ್ಪುರಂ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಭಾನುವಾರವೂ ಸಹ ಎಡೆಬಿಡದೇ ಮೊಳಗಿ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಸರಿಪಡಿಸದಿದ್ದಲ್ಲಿ ಫೈನಾನ್ಸ್ಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವದು ಎಂದು ಸಾರ್ವಜನಿಕರು ತಿಳಿಸಿದ್ದಾರೆ.