ಚೆಟ್ಟಳ್ಳಿ, ಮೇ.2: ಮಾಲ್ದಾರೆಯ ಮೀಸಲು ಅರಣ್ಯದೊಳಗೆ ಸುಮಾರು 6ರಿಂದ7ತಿಂಗಳ ಪುಟ್ಟ ಗಂಡಾನೆ ಮರಿಯೊಂದು ತಾಯಿಯ ಅಪ್ಪುಗೆಯಿಂದ ಬೇರ್ಪಟ್ಟು ಅಮ್ಮನಿಗಾಗಿ ಅರಚುತ್ತಾ ಕಾಡಿನೊಳಗೆಲ್ಲ ಓಡಾಡುತಿತ್ತು. ಅರಣ್ಯ ಇಲಾಖೆಯತಂಡ ಅನಾಥ ಆನೆಮರಿಯನ್ನು ಕಂಡು ತಾಯಿಯೊಂದಿಗೆ ಸೇರಿಸಲು ಎರಡುದಿನಗಳಿಂದ ಕಾದರು ತಾಯಿ ಮಗುವನ್ನು ಅರಸಿ ಬರಲೇ ಇಲ್ಲ. ಆಹಾರವಿಲ್ಲದೆ ನಿತ್ರಾಣ ಹೊಂದಿದ ಕಾಡಾನೆಮರಿ ಅನಾಥವಾಗಿ ಸಾಯುವುದೆಂದುಕೊಂಡು ಮೇಲಧಿಕಾರಿಗಳ ಮಾರ್ಗದರ್ಶನದಂತೆ ಅರಣ್ಯ ಸಿಬ್ಬಂದಿಗಳ ಜೀಪಿನಲ್ಲೇ ದುಬಾರೆಯ ಆನೆ ಶಿಬಿರಕ್ಕೆ ಕರೆತರಲಾಯಿತು.

ಶಿಬಿರಕ್ಕೆ ಬಂದಿಳಿದ ಕಾಡಾನೆ ಮರಿಗೆ ವೈದ್ಯಾಧಿಕಾರಿ ಡಾ.ಮಜೀಬ್ ಅವರ ಮಾರ್ಗದರ್ಶನದಂತೆ ಆಹಾರ,ಚಿಕಿತ್ಸೆಯನ್ನು ನೀಡತೊಡಗಿದರು. ಆದರೆ ಮೊದಲೆರಡು ದಿನ ಅಮ್ಮನ ಆಶ್ರಯಕ್ಕಾಗಿ ಪರಿತಪಿಸಿ ದು:ಖಿಸುತ್ತಾ ಊಟವನ್ನು ತಿನ್ನದೇ ಕಾಡಿಸಿತು.ತದನಂತರ ಹಸಿವು ತಾಳಲಾರದೆ ಸ್ವಲ್ಪ ಸ್ಪಲ್ಪ ಆಹಾರ ತಿನ್ನತೊಡಗಿತು. ಅನ್ನವನ್ನು ಬೇಯಿಸಿ ಸಣ್ಣಮುದ್ದೆಮಾಡಿ ತಿನ್ನಿಸಲಾಗುತಿದ್ದು, ಹಸಿಸೊಪ್ಪು, ಹುಲ್ಲು,ನೀರನ್ನೆಲ್ಲ ಸೇವಿಸ ತೊಡಗಿತೆಂದು ಉಪ ಅರಣ್ಯ ಸಂರಕ್ಷಾಣಾಧಿಕಾರಿ ಮಂಜುನಾಥ್ ತಿಳಿಸಿದರು.

ದುಬಾರೆಯ ಆನೆ ಶಿಬಿರಕ್ಕೆ ಗಂಡಾನೆಮರಿ ಒಗ್ಗಿಕೊಳ್ಳುತಿದ್ದು ಶಿಬಿರದ ಮಾವುತ ಜಯಣ್ಣಗೆ ಗಂಡಾನೆಮರಿಯ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ವಹಿಸಲಾಗಿದೆಯೆಂದು ಉಪವಲಯ ಅರಣ್ಯಾಧಿಕಾರಿ ಕನ್ನಂಡ ರಂಜನ್ ತಿಳಿಸದರು.

ಮರಿಯಾನೆ ಅರಣ್ಯ ಸಿಬ್ಬಂದಿಗಳೊಂದಿಗೆ ಒಗ್ಗಿಕೊಳ್ಳುತಿದ್ದು ಆನೆ ಪಾಠವನ್ನು ಒಂದೊಂದಾಗಿ ಕಲಿಯುತ್ತಾ ಆನೆ ಶಿಬಿರದೊಳಗೆ ಓಡಾಡುತ್ತಾ ಎಲ್ಲರ ಪ್ರೀತಿಗೆ ಪಾತ್ರನಾಗಿದ್ದಾನೆ.ಅರಣ್ಯ ಸಂರಕ್ಷಾಣಾಧಿಕಾರಿ ಮಂಜುನಾಥ್, ಕುಶಾಲನಗರ ಉಪವಲಯ ಅರಣ್ಯಾಧಿಕಾರಿ ಕನ್ನಂಡ ರಂಜನ್ ಅವರ ತಂಡ ಕಾಡಾನೆ ಮರಿಯ ಹೆಚ್ಚಿನ ಜವಾಬ್ದಾರಿಯನ್ನು ವಹಿಸುತ್ತಿದ್ದು, ದುಬಾರೆಯ ಪರಿಸರಕ್ಕೆ ಒಗ್ಗಿದ ನಂತರ ಆನೆಶಿಬಿರದ ನಿಯಮದಂತೆ ಎಲ್ಲಾ ಆನೆಗಳಿಗೂ ನಾಮಕರಣ ಮಾಡುವರು. ಈ ಅನಾಥ ಕಾಡಾನೆಮರಿಗೊಂದು ನಾಮಕರಣ ಮಾಡಲಾಗಿ ಶಿಬರದಲ್ಲೊಬ್ಬ ಸದಸ್ಯನಾಗಿ ಇತರೆ ಆನೆಗಳೊಂದಿಗೆ ಬೆಳೆಯುತ್ತಾನೆ.

-ಪುತ್ತರಿರ ಕರುಣ್ ಕಾಳಯ್ಯ