ಮಡಿಕೇರಿ, ಮೇ. 2 :ವಿಧಾನಸಭಾ ಚುನಾವಣೆಯಲ್ಲಿ ಪ್ರಬಲ ಕಾಂಗ್ರೆಸ್ ಪಕ್ಷವನ್ನು ಏಕಾಂಗಿಯಾಗಿ ಎದುರಿಸಲಾಗದ ಬಿಜೆಪಿ ಹಾಗೂ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿರುವ ವಿಚಾರ ಈಗಾಗಲೇ ಬಹಿರಂಗಗೊಂಡಿದ್ದು, ಇದರಿಂದ ಜಾಗೃತಗೊಂಡಿರುವ ರಾಜ್ಯದ ಅಲ್ಪಸಂಖ್ಯಾತ ಮತದಾರರು ಕಾಂಗ್ರೆಸ್ಗೆ ಬಹುಮತ ನೀಡಲು ಮುಂದಾಗಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷÀ ಕೆ.ಎ.ಯಾಕುಬ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಾತ್ಯಾತೀತ ಹಣೆಪಟ್ಟಿಯ ಜೆಡಿಎಸ್ ಪಕ್ಷ ಗೋಸುಂಬೆ ರಾಜಕಾರಣವನ್ನು ಮಾಡುತ್ತಿದೆ. “ಸಬ್ ಕೆ ಸಾತ್ ಸಬ್ ಕೆ ವಿಕಾಸ್” ಎಂದು ಕೇವಲ ಘೋಷಣೆ ಮೂಲಕ ಪ್ರಚಾರವನ್ನಷ್ಟೇ ಪಡೆದುಕೊಳ್ಳುತ್ತಿರುವ ಬಿಜೆಪಿ ಅಲ್ಪಸಂಖ್ಯಾತರ ಭಾವನೆಗಳಿಗೆ ದಕ್ಕೆಯಾದಾಗ ಒಂದು ಬಾರಿಯೂ ಸಾಂತ್ವನ ಹೇಳುವ ದೊಡ್ಡಗುಣವನ್ನು ಪ್ರದರ್ಶಿಸಿಲ್ಲ. ಕೇಂದ್ರದ ಕೆಲವು ಸಚಿವರು ಅಲ್ಪಸಂಖ್ಯಾತರ ಹಾಗೂ ದಲಿತರ ಮನಸ್ಸಿಗೆ ನೋವಾಗುವ ರೀತಿಯಲ್ಲಿ ನಡೆದುಕೊಂಡಿದ್ದರೂ ಬಿಜೆಪಿ ನಾಯಕರು ಅವರ ಬಾಯಿ ಮುಚ್ಚಿಸುವ ಕೆಲಸವನ್ನು ಎಂದಿಗೂ ಮಾಡಿಲ್ಲ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ವೃದ್ಧಾಶ್ರಮಕ್ಕೆ ಕಳುಹಿಸಿ ಎಂದು ಕರೆ ನೀಡಿದ್ದ ಬಿಜೆಪಿ ಈಗ ಸೋಲಿನ ಭೀತಿಯಿಂದ ಮತ್ತು ಮೈತ್ರಿಯ ಕಾರಣದಿಂದ ದೇವೇಗೌಡರನ್ನು ಹಾಡಿಹೊಗಳುತ್ತಿದೆ. ಅಂದು ಹಿರಿಯ ರಾಜಕಾರಣಿಗೆ ಗೌರವ ನೀಡದ ಬಿಜೆಪಿ ಇಂದು ಗೌರವದ ಪಾಠ ಮಾಡುತ್ತಿದ್ದು, ಇದು ಹಾಸ್ಯಾಸ್ಪದವಾಗಿದೆ ಎಂದು ಯಾಕುಬ್ ಟೀಕಿಸಿದರು.
ಆದ್ದರಿಂದ ಸರ್ವ ಅಲ್ಪಸಂಖ್ಯಾತರು ಕಾಂಗ್ರೆಸ್ಗೆ ಮತ ನೀಡಲಿದ್ದಾರೆ . ಕಾಂಗ್ರೆಸ್ ಪಕ್ಷ 140 ರಿಂದ 150 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದರು. ಕೊಡಗು ಜಿಲ್ಲೆಯ ಮಡಿಕೇರಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಕೂಡ ಅಲ್ಪಸಂಖ್ಯಾತರ ಹಾದಿ ತಪ್ಪಿಸುವ ಕುತಂತ್ರ ರಾಜಕಾರಣವನ್ನು ಬಿಜೆಪಿ ಹಾಗೂ ಜೆಡಿಎಸ್ ಮಾಡುತ್ತಿವೆ. ಆದರೆ ಜಿಲ್ಲೆಯ ಅಲ್ಪಸಂಖ್ಯಾತರಿಗೆ ಕೂಡ ಈ ಎರಡು ಪಕ್ಷಗಳ ಒಳ ಒಪ್ಪಂದದ ಬಗ್ಗೆ ಮಾಹಿತಿ ಇದ್ದು, ಅಲ್ಟಸಂಖ್ಯಾತರೆಲ್ಲರೂ ಕಾಂಗ್ರೆಸ್ ಪರವಾಗಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಸಮಿತಿಯ ಸುರಯ್ಯ ಅಬ್ರಾರ್, ಜಿಲ್ಲಾ ಕಾಂಗ್ರೆಸ್ ಮುಖಂಡ ಎಂ.ಎ. ಉಸ್ಮಾನ್ ಹಾಗೂ ಜಿಲ್ಲಾ ಅಲ್ಪ ಸಂಖ್ಯಾತರ ಘಟಕದ ಕಾರ್ಯದರ್ಶಿ ಖಾಲಿದ್ ಉಪಸ್ಥಿತರಿದ್ದರು.