ಗೋಣಿಕೊಪ್ಪಲು, ಮೇ 2. ಆರ್.ಟಿ.ಇ. ಸೀಟ್ ಹಂಚಿಕೆಯಲ್ಲಿ ತಾರತಮ್ಯವಾಗಿದೆ ಸ್ಥಳೀಯರಲ್ಲದವರಿಗೆ ಸೀಟ್ ಲಭ್ಯವಾಗಿದೆ. ಇದರಿಂದ ನಮಗೆ ಆದ ಅನ್ಯಾಯವನ್ನು ಸರಿಪಡಿಸಿಕೊಡುವಂತೆ ಜಿಲ್ಲಾಧಿಕಾರಿ ಶ್ರೀವಿದ್ಯಾರವರನ್ನು ಕೈಕೇರಿ ಗ್ರಾಮದ ವಿದ್ಯಾರ್ಥಿಯ ಪೋಷಕರು ಮನವಿ ಸಲ್ಲಿಸಿದ್ದಾರೆ.
ದೂರಿನಲ್ಲಿ ಕೈಕೇರಿ ವ್ಯಾಪ್ತಿಯಲ್ಲಿ ಶಾಲೆಯಿದ್ದು ಈ ಭಾಗದವರಿಗೆ ಸೀಟ್ ಹಂಚಿಕೆಯಾಗದೆ ಗೋಣಿಕೊಪ್ಪ ನಗರದಲ್ಲಿರುವ ಹಾಗೂ ಅತ್ತೂರು ಪಂಚಾಯ್ತಿ ವ್ಯಾಪ್ತಿಯಲ್ಲಿ ವಾಸವಿರುವ ವಿದ್ಯಾರ್ಥಿಗಳಿಗೆ ಸೀಟ್ ಹಂಚಿಕೆಯಾಗಿದೆ. ಸ್ಥಳೀಯರಾದ ನಾವು ಪಡಿತರ ಚೀಟಿ ಮತದಾರ ಚೀಟಿಯೊಂದಿಗೆ ವಾಸವಿದ್ದರು ಪ್ರಯೋಜನವಾಗಿಲ್ಲ.
ಕೇವಲ ಆಧಾರ್ ಕಾರ್ಡ್ ಮಾನದಂಡವಾಗಿ ಆಯ್ಕೆ ಪ್ರಕ್ರಿಯೇ ನಡೆದಿದೆ. ಕೂಡಲೇ ಈ ಪ್ರಕ್ರಿಯೆಯನ್ನು ತಡೆ ಹಿಡಿಯಬೇಕೆಂದು ಕೈಕೇರಿ ನಿವಾಸಿಗಳಾದ ಲತಾಕುಮಾರಿ,ದಿನೇಶ್ ಎಂ.ಆರ್,ನವೀನ್, ಮಧು, ರಮೇಶ್, ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.ಆರ್.ಟಿ.ಇ.ನಲ್ಲಿ ಸೀಟ್ ಪಡೆದ ಕೆಲವು ಮಂದಿ ಸ್ಥಳೀಯರಲ್ಲದಿರುವದು ಮೇಲ್ನೋಟಕ್ಕೆ ಕಂಡು ಬಂದಿದೆ. ಸ್ಥಳೀಯರಲ್ಲದವರು ಸೀಟ್ ಪಡೆಯಲು ಆಧಾರ್ ಕಾರ್ಡ್ನಲ್ಲಿ ಕೈಕೇರಿ ಗ್ರಾಮ ಎಂದು ನಮೂದಿಸಿರುವದು ಕಂಡು ಬಂದಿದೆ.
ಸಾರ್ವಜನಿಕರು ನೀಡಿದ ದೂರನ್ನು ಪರಿಶೀಲಿಸಿದ್ದೇನೆ. ಮೂರು ದಿನದ ಒಳಗೆ ವರದಿ ನೀಡುವಂತೆ ಡಿಡಿಪಿಐ ಅವರಿಗೆ ನಿರ್ದೇಶನ ನೀಡಿದ್ದೇನೆ. ಸ್ಥಳೀಯರಲ್ಲದವರಿಗೆ ಸೀಟ್ ಹಂಚಿಕೆಯಾಗಿದ್ದಲ್ಲಿ ಈ ಬಗ್ಗೆ ಕ್ರಮ ವಹಿಸುತ್ತೇನೆ ಎಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ತಿಳಿಸಿದ್ದಾರೆ.