ಸುಂಟಿಕೊಪ್ಪ, ಮೇ 2 : ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಬೇಟೆ ತೀವ್ರಗೊಂಡಿದ್ದು ಕೊಡಗು ಜಿಲ್ಲೆಯ 2 ವಿಧಾನಸಭಾ ಕ್ಷೇತ್ರಗಳಲ್ಲಿ ತಲೆಬಿಸಿ ಮಾಡಿಕೊಳ್ಳದೆ ತನ್ನದೆ ಕಾಯಕದಲ್ಲಿ ಮಗ್ನರಾಗಿದ್ದಾರೆ.
ಸೋಮವಾರಪೇಟೆ, ಸುಂಟಿಕೊಪ್ಪ, ಶನಿವಾರಸಂತೆ, ಕುಶಾಲನಗರ, ಕೊಡ್ಲಿಪೇಟೆ, ಮೂರ್ನಾಡು, ಮಾದಾಪುರದಲ್ಲಿ ವಿವಿಧ ಪಕ್ಷದವರು ನಡೆಸಿದ ಬಹಿರಂಗ ಸಾರ್ವಜನಿಕ ಸಭೆಯಲ್ಲಿ ಕನಿಷ್ಟ ಸಂಖ್ಯೆಯ ಜನರು ಭಾಗವಹಿಸಿದ್ದು ಅಭ್ಯರ್ಥಿಗಳಿಗೆ ತೀರಾ ನಿರಾಶೆಯಾಗಿದೆ. 2018 ರ ಸಾರ್ವತ್ರಿಕ ವಿಧಾನಸಭಾ ಚುನಾವಣೆ ರಾಷ್ಟ್ರೀಯ ಪಕ್ಷದ, ಪ್ರಾದೇಶಿಕ ಪಕ್ಷದ ಅಭ್ಯರ್ಥಿಗಳಿಗೆ ಕಬ್ಬಿಣದ ಕಡಲೆಯಾಗಿದೆ. ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಬಹಿರಂಗ ಸಭೆಯಲ್ಲಿ ಭಾರೀ ಸಂಖ್ಯೆಯ ಜನರು ಸೇರುತ್ತಿದ್ದರು. ರಾಜಕಾರಣಿಗಳ ಭಾಷಣದ ಶೈಲಿಗೆ ಚಪ್ಪಾಳೆ ಮೂಲಕ ಹರ್ಷ ವ್ಯಕ್ತಪಡಿಸುತ್ತಿದ್ದು, ಜನರ ಸಂಖ್ಯೆ ನೋಡಿಯೇ ರಾಜಕಾರಣಿಗಳ ಭಾಷಣದ ಪೌರುಷದ ವೇಗ ಹೆಚ್ಚಾಗುತ್ತಿತ್ತು.ಆದರೆ ಈಗ ಜನರಿಗೆ ರಾಜಕಾರಣಿಗಳ ಭಾಷಣ ಕೇಳಲು ಅಹಿತವಾಗುತ್ತಿದೆ. ಎಲ್ಲಾ ಪಕ್ಷದವರು ಒಂದೇ. ಗೆದ್ದ ನಂತರ ತಿರುಗಿ ನೋಡುವುದಿಲ್ಲ ನಾವು ದುಡಿದರೆ ಹೊಟ್ಟೆಗೆ ಅನ್ನ... ಇಲ್ಲದಿದ್ದರೆ ತಣ್ಣೀರ ಬಟ್ಟೆಯೇ ಗತಿ ಮತದಾನದ ದಿನ ನಮಗೆ ಇಷ್ಟವಾದವರಿಗೆ 1 ಮತ ಚಲಾಯಿಸಿ ಬರುತ್ತೇವೆ ಎಂದು ಯಾವ ಪಕ್ಷಕ್ಕೆ ನಿಮ್ಮ ಮತ ಎಂದು ಪ್ರಶ್ನಿಸಿದಾಗ ಬಹಳಷ್ಟು ಮತದಾರರು ನಕಾರಾತ್ಮಕ ಉತ್ತರ ನೀಡಿದರು.
ಕಾರ್ಯಕರ್ತರಲ್ಲಿ ಕುಗ್ಗಿದ ಉತ್ಸಾಹ: ಚುನಾವಣಾ ಆಯೋಗದ ಕಟ್ಟುನಿಟ್ಟಿನ ನಿಯಮ ಒಂದೆಡೆಯಾದರೆ ರಾಜಕೀಯ ಪಕ್ಷದ ಕಾರ್ಯಕರ್ತರು ಮೊದಲಿನಂತೆ ಮನೆ ಮನೆಗೆ ತೆರಳಿ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಮತಯಾಚಿಸಲು ಆಸಕ್ತಿ ತೋರದೆ ಇರುವದು ಕಂಡು ಬಂದಿದೆ.
ಟೈಲರ್ ಅಂಗಡಿ, ಬಾರ್, ಸೆಲೂನ್ಗಳಲ್ಲಿ ಮಾತ್ರ ಸಾರ್ವಜನಿಕರು ರಾಜಕೀಯದ ಬಗ್ಗೆ ಚರ್ಚಿಸುತ್ತಿರುವದನ್ನು ಕಾಣಬಹುದಾಗಿದೆ. ಎಲ್ಲಾ ಪಕ್ಷದವರಿಗೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಅಭ್ಯರ್ಥಿಗಳು ನಾವು ಹಲವು ಬಾರಿ ಚುನಾವಣೆ ಎದುರಿಸಿದ್ದೇವೆ. ಈಗ ಮಾತ್ರ ಮತದಾರರ ಮನಸ್ಸಿನಲ್ಲಿನ ಅಭಿಪ್ರಾಯ ನಿಗೂಢವಾಗಿದೆ ಎಂದು ಪಕ್ಷದ ನಿಷ್ಠಾವಂತರಲ್ಲಿ ಮಾತನಾಡಿಕೊಂಡಿದ್ದಾರೆ. ವೀರಾಜಪೇಟೆ ವಿಧಾನಸಭಾ ಕ್ಷೇತ್ರದ 2,16,909 ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ 2,16,937 ಮತದಾರಲ್ಲಿ ಶೇಕಡ 65 ರಿಂದ 70 ರಷ್ಟು ಮತ ಚಲಾವಣೆ ಆಗಲಿದೆ ಎಂಬದು ರಾಜಕೀಯ ಪಕ್ಷದವರ ಲೆಕ್ಕಾಚಾರವಾಗಿದೆ.2018 ರ ವಿಧಾನಸಭಾ ಚುನಾವಣೆಯಲ್ಲಿ 2 ಕ್ಷೇತ್ರದಲ್ಲೂ ಯಾವದೇ ಪಕ್ಷದ ಅಭ್ಯರ್ಥಿಯಾದರೂ ಅಂದಾಜು 2000 ಮತಗಳ ಅಂತರದಿಂದ ಮಾತ್ರ ಗೆಲ್ಲುವ ಸಾಧ್ಯತೆಯಿದ್ದು ತ್ರಿಕೋಣ ಸ್ಪರ್ಧೆ 2 ಕ್ಷೇತ್ರದಲ್ಲೂ ಏರ್ಪಟ್ಟಿದೆ ವಿಜಯ ಮಾಲೆ ಯಾರ ಕೊರಳಿಗೆ ಮೇ 15 ಕಾದು ನೋಡೋಣ ಎನ್ನುವ ಲೆಕ್ಕಾಚಾರವಿದೆ.