ಮಡಿಕೇರಿ, ಮೇ 2 : ಜಿಲ್ಲೆಯಲ್ಲಿ ಕಳೆದ ನಾಲ್ಕು ಅವಧಿಯಿಂದ ಶಾಸಕರಾಗಿ ಆಯ್ಕೆಯಾಗುತ್ತಿರುವ ಬಿಜೆಪಿ ಶಾಸಕರುಗಳು ಎಲ್ಲೂ ಜಾತಿ ರಾಜಕೀಯ ಮಾಡಿಲ್ಲ. ಎಲ್ಲ ಜಾತಿ, ಧರ್ಮದವರನ್ನು ಸಮಾನವಾಗಿ ಕಾಣುವ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಆದರೂ ಈ ಬಾರಿಯ ಚುನಾವಣೆಯಲ್ಲಿ ಕೆಲವು ಕಿಡಿಗೇಡಿಗಳು ಜಾತಿ ಆಧಾರದಲ್ಲಿ ಅವರುಗಳಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ ಎಂದು ಸಿದ್ದಾಪುರದ ಬಿಜೆಪಿ ಸ್ಥಾನೀಯ ಸಮಿತಿ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಸಮಿತಿ ಸದಸ್ಯ ಪಾಲಚಂಡ ಸಿ.ಅಚ್ಚಯ್ಯ ಹಾಗೂ ಸಿದ್ದಾಪುರ ಸ್ಥಾನೀಯ ಸಮಿತಿ ಅಧ್ಯಕ್ಷ ಕುಕ್ಕನೂರು ಬಿ.ನಾಣಯ್ಯ,ವೀರಾಜಪೇಟೆ ಕ್ಷೇತ್ರದಿಂದ ಕಳೆದ ಮೂರು ಅವಧಿಯಲ್ಲಿ ಶಾಸಕರಾಗಿರುವ ಕೆ.ಜಿ.ಬೋಪಯ್ಯ ಅವರು ಕ್ಷೇತ್ರದ ಅಭಿವೃದ್ಧಿಯಲ್ಲಾಗಲಿ, ಸವಲತ್ತುಗಳನ್ನು ನೀಡುವಲ್ಲಾಗಲಿ ಎಂದೂ ಜಾತಿ ಲೆಕ್ಕಾಚಾರ ಹಾಕಿಲ್ಲ. ಆದರೆ ಬಿಜೆಪಿಯಲ್ಲೇ ಇರುವ ಕೆಲವು ಕಿಡಿಗೇಡಿಗಳು ಬೋಪಯ್ಯ ಅವರ ವಿರುದ್ಧ ಅಪಪ್ರಚಾರದಲ್ಲಿ ತೊಡಗಿರುವುದು ಕಂಡು ಬಂದಿದ್ದು, ಕ್ಷೇತ್ರದ ಮತದಾರರು ಇದಕ್ಕೆ ಕಿವಿಗೊಡಬಾರದು ಎಂದು ಮನವಿ ಮಾಡಿದರು.

ಮಡಿಕೇರಿ ಕ್ಷೇತ್ರದ ಶಾಸಕರಾಗಲಿ, ವೀರಾಜಪೇಟೆ ಕ್ಷೇತ್ರದ ಶಾಸಕರಾಗಲಿ ಎಂದೂ ಜಾತಿ ರಾಜಕಾರಣ ಮಾಡಿಲ್ಲ. ಮಾಡುವುದೂ ಇಲ್ಲ. ಆದುದರಿಂದ ಇಂತಹ ಅಪಪ್ರಚಾರಗಳಿಗೆ ಮತದಾರರು ಬಲಿಯಾಗಬಾರದು ಎಂದು ಮನವಿ ಮಾಡಿದ ಅವರು, ಈ ಬಾರಿ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ನೆಲ್ಲಮಕ್ಕಡ ಅಶೋಕ್, ದೇವಣಿರ ಸುಜಯ್ ಹಾಗೂ ಬಲ್ಲಾರಂಡ ಅಭಿನ್ ಉಪಸ್ಥಿತರಿದ್ದರು.