ವೀರಾಜಪೇಟೆ : ವೀರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಕುಂಜಿಲ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜಾತ್ಯತೀತ ಜನತಾದಳ ಪಕ್ಷದ ಚುನಾವಣಾ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಜೆ.ಡಿ.ಎಸ್. ಅಭ್ಯರ್ಥಿ ಸಂಕೇತ್ ಪೂವಯ್ಯ ಅವರು ಮಾತನಾಡಿ ಜನತಾದಳ ಜಾತ್ಯತೀತ ಮನೋಭಾವವನ್ನು ಹೊಂದಿರುವದರಿಂದ ಎಲ್ಲ ವರ್ಗಗಳಿಗೆ ರಕ್ಷಣೆ ಅಧಿಕಾರ ನೀಡಲಿದೆ. ಇಪ್ಪತ್ತನಾಲ್ಕು ಗಂಟೆಯೊಳಗೆ ರೈತರ, ಬೆಳೆಗಾರರ, ಸ್ತ್ರೀ ಶಕ್ತಿ ಗುಂಪುಗಳ, ಸಂಘಟನೆಗಳ ಸಾಲ ಮನ್ನಾ ಮಾಡಲಿದೆ ಎಂದರು.
ಪಕ್ಷದ ಅಲ್ಪ ಸಂಖ್ಯಾತರ ಜಿಲ್ಲಾ ಸಮಿತಿಯ ಇಸಾಕ್ ಮಾತನಾಡಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಕೋಮುವಾದಿ ಪಕ್ಷಗಳಾಗಿದ್ದು, ಅಲ್ಪಸಂಖ್ಯಾತರಿಗೆ ರಕ್ಷಣೆ ಹಾಗೂ ಅಧಿಕಾರ ಕೊಡುವ ಜೆಡಿಎಸ್ನ್ನು ಬೆಂಬಲಿಸುವಂತೆ ಹೇಳಿದರು. ಕ್ಷೇತ್ರದ ಅಧ್ಯಕ್ಷ ಎಸ್. ಹೆಚ್. ಮತೀನ್ ಮಾತನಾಡಿ ಕುಟ್ಟದಿಂದ ಸಂಪಾಜೆಯವರೆಗೆ ಪಕ್ಷದ ಕಾರ್ಯಕರ್ತರು ಬೂತ್ಮಟ್ಟದಲ್ಲಿ ಪ್ರಚಾರ ಕೈಗೊಂಡಿದ್ದು ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದರು.
ಇದೇ ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಮೂಸಾ ಅವರು ಪಕ್ಷಕ್ಕೆ ಸೇರ್ಪಡೆಗೊಂಡರು.ವೇದಿಕೆಯಲ್ಲಿ ಅಲ್ಪ ಸಂಖ್ಯಾತರ ಘಟಕದ ರಾಜ್ಯ ಸಮಿತಿಯ ಮನ್ಸೂರ್ಆಲಿ, ಜಿಲ್ಲಾ ಯುವಕ ಘಟಕದ ಜಂಶೀರ್, ಷಂಶುದ್ದೀನ್, ಸಾಧಿಕ್ ಮತ್ತಿತರರು ಉಪಸ್ಥಿತರಿದ್ದರು.
ಸಭೆಯ ನಂತರ ಅಭ್ಯರ್ಥಿ ಸಂಕೇತ್ ಪೂವಯ್ಯ ಅವರೊಂದಿಗೆ ಅಲ್ಪ ಸಂಖ್ಯಾತ ಕಾರ್ಯಕರ್ತರು ಕುಂಜಿಲ ಗ್ರಾಮ ಹಾಗೂ ಕುದುರೆ ಎಂಬಲ್ಲಿ ಮನೆ ಮನೆ ಪ್ರಚಾರ ಕೈಗೊಂಡರು.