ಮಡಿಕೇರಿ, ಮೇ 2: ದ್ವಿತೀಯ ಪಿಯುಸಿ ಫಲಿತಾಂಶ ಕಳೆದ ಏ.30ರಂದು ಪ್ರಕಟಗೊಂಡಿದ್ದು, ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಶೇಖಡಾವಾರು ಫಲಿತಾಂಶದಲ್ಲೂ ಏರಿಕೆ ಕಂಡಿದ್ದು, ಕಳೆದ ಸಾಲಿನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ ಮೂರನೇ ಸ್ಥಾನಕ್ಕೇರಿದೆ. ಈ ಪೈಕಿ ವಿಜ್ಞಾನ ವಿಭಾಗದಲ್ಲಿ ಜಿಲ್ಲೆಯ ವಿದ್ಯಾರ್ಥಿ ಸ್ವರೂಪ್ ರಾಜ್ಯದಲ್ಲಿ 7ನೇ ರ್ಯಾಂಕ್ ಗಳಿಸಿ ಸಾಧನೆ ಮಾಡಿದ್ದಾನೆ. ವಿಜ್ಞಾನ ವಿಭಾಗ ವಿಜ್ಞಾನ ವಿಭಾಗದಲ್ಲಿ ಗೋಣಿಕೊಪ್ಪಲು ವಿದ್ಯಾನಿಕೇತನ ಪ.ಪೂ. ಕಾಲೇಜಿನ ಆರ್. ಸ್ವರೂಪ್ 590 ಅಂಕ ಗಳಿಸಿ ಶೇ. 98ರಷ್ಟು ಫಲಿತಾಂಶದೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದರೆ, ಅದೇ ಕಾಲೇಜಿನ ಎಸ್.ಎಂ. ರಿಶಿರ 583 ಅಂಕ ಗಳಿಸಿ ಶೇ.97.17 ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನ ಹಾಗೂ ಗೋಣಿಕೊಪ್ಪಲು ಕೂರ್ಗ್ ಪಬ್ಲಿಕ್ ಶಾಲೆಯ ವಿಜೇತಾ ಕೆ. ತಂತ್ರಿ 583 ಅಂಕ ಗಳಿಸಿ ಶೇ. 97.17 ಫಲಿತಾಂಶ ದೊಂದಿಗೆ ತೃತೀಯ ಸ್ಥಾನ ಗಳಿಸಿದ್ದಾಳೆ.

ವಾಣಿಜ್ಯ ವಿಭಾಗ

ವಾಣಿಜ್ಯ ವಿಭಾಗದಲ್ಲಿ ಮಡಿಕೇರಿಯ ಸಂತ ಮೈಕಲರ ಪ.ಪೂ. ಕಾಲೇಜಿನ ಸಿ. ಗಗನ್ 587 ಅಂಕಗಳೊಂದಿಗೆ ಶೇ. 97.83 ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ಗಳಿಸಿದರೆ, ಕುಶಾಲನಗರ ಐಶ್ವರ್ಯ ಪ.ಪೂ. ಕಾಲೇಜಿನ ಸೋನಿಕಾ ಎಸ್.ಟಿ. 583 ಅಂಕ ಗಳಿಸಿ ಶೇ. 97.17 ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನ ಗಳಿಸಿದ್ದಾಳೆ. ಕಳತ್ಮಾಡು ಲಯನ್ಸ್ ಪ.ಪೂ. ಕಾಲೇಜಿನ ಅನ್ವಿತ್ ಗಣಪತಿ 581 ಅಂಕ ಗಳಿಸಿ ಶೇ. 96.83 ಫಲಿತಾಂಶದೊಂದಿಗೆ ಮೂರನೇ ಸ್ಥಾನ ಗಳಿಸಿದ್ದಾಳೆ.

ಕಲಾ ವಿಭಾಗ

ಕಲಾವಿಭಾಗದಲ್ಲಿ ಮಡಿಕೇರಿಯ ಸಂತ ಜೋಸೆಫರ ಪ.ಪೂ. ಕಾಲೇಜಿನ ಭಾವನಾ ಎಸ್.ರಾವ್ 557 ಅಂಕ ಗಳಿಸಿ ಶೇ. 92.83 ಫಲಿತಾಂಶ ದೊಂದಿಗೆ ಪ್ರಥಮ ಸ್ಥಾನ ಗಳಿಸಿದರೆ, ಮದೆ ಮಹೇಶ್ವರ ಪ.ಪೂ. ಕಾಲೇಜಿನ ಹೆಚ್.ಎಸ್. ಸತೀಶ್ 544 ಅಂಕ ಗಳಿಸಿ ಶೇ. 90.67 ಫಲಿತಾಂಶ ದೊಂದಿಗೆ ದ್ವಿತೀಯ ಸ್ಥಾನ ಗಳಿಸಿದ್ದಾನೆ. ಮೂರ್ನಾಡು ಮಾರುತಿ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಶೃತಿ ಬಿ.ಎ. 542 ಅಂಕ ಗಳಿಸಿ ಶೇ. 90.33 ಫಲಿತಾಂಶದೊಂದಿಗೆ ಮೂರನೇ ಸ್ಥಾನ ಗಳಿಸಿದ್ದಾಳೆ.

ಮಡಿಕೇರಿ ಪ್ರಥಮ

ಜಿಲ್ಲೆಯಲ್ಲಿ ತಾಲೂಕುವಾರು ಫಲಿತಾಂಶ ಗಮನಿಸಿದರೆ, ಮಡಿಕೇರಿ ತಾಲೂಕು ಪ್ರಥಮ ಸ್ಥಾನದಲ್ಲಿದೆ. ಮಡಿಕೇರಿ ತಾಲೂಕು ಶೇ. 89.25ರಷ್ಟು ಫಲಿತಾಂಶದೊಂದಿಗೆ ಪ್ರಥಮ ಸ್ಥಾನದಲ್ಲಿದ್ದರೆ, ಸೋಮವಾರಪೇಟೆ ತಾಲೂಕು ಶೇ. 86.96 ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನ, ವೀರಾಜಪೇಟೆ ತಾಲೂಕು ಶೇ. 83.18 ಫಲಿತಾಂಶದೊಂದಿಗೆ ತೃತೀಯ ಸ್ಥಾನ ಗಳಿಸಿಕೊಂಡಿದೆ.