ಮಡಿಕೇರಿ, ಮೇ 2: ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿ.ಎ.ಜೀವಿಜಯ ಅವರು ತಾ. 4ರಂದು (ನಾಳೆ) ಮಡಿಕೇರಿ ನಗರದಲ್ಲಿ ರೋಡ್‍ಶೋ ನಡೆಸುವ ಮೂಲಕ ಮತ ಯಾಚಿಸಲಿದ್ದಾರೆ ಎಂದು ನಗರ ಜೆಡಿಎಸ್ ಅಧ್ಯಕ್ಷ ಬಿ.ವೈ.ರಾಜೇಶ್ ಯಲ್ಲಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ನಗರದ ಗಾಂಧಿ ಮೈದಾನದಿಂದ ರೋಡ್ ಶೋ ಆರಂಭವಾಗಲಿದ್ದು, ಜನರಲ್ ತಿಮ್ಮಯ್ಯ ವೃತ್ತ, ಖಾಸಗಿ ಬಸ್ ನಿಲ್ದಾಣ, ಇಂದಿರಾಗಾಂಧಿ ವೃತ್ತ, ಗಣಪತಿ ಬೀದಿ, ಎ.ವಿ.ಶಾಲೆ ಮೂಲಕ ಮಾರುಕಟ್ಟೆವರೆಗೆ ರೋಡ್ ಶೋ ನಡೆಯಲಿದೆ. ಬಳಿಕ ಮಾರುಕಟ್ಟೆ ಆವರಣ, ಖಾಸಗಿ ಬಸ್ ನಿಲ್ದಾಣ, ಇಂದಿರಾಗಾಂಧಿ ವೃತ್ತ, ಗೌಳಿಬೀದಿ, ಪತ್ರಿಕಾಭವನ ವೃತ್ತ, ಐಟಿಐ ಜಂಕ್ಷನ್‍ಗಳಲ್ಲಿ ಬಹಿರಂಗ ಸಭೆಗಳನ್ನುದ್ದೇಶಿಸಿ ಜೀವಿಜಯ ಮಾತನಾಡಲಿದ್ದಾರೆ ಎಂದರು.
ಕಾಂಗ್ರೆಸ್‍ನ ತೆನ್ನಿರ ಮೈನ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಜೇಶ್ ಯಲ್ಲಪ್ಪ ಅವರು, ಕಳೆದ ಚುನಾವಣೆಯ ಸಂದರ್ಭ ಮಡಿಕೇರಿಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸಲೇಬೇಕೆಂದು ಕಾಂಗ್ರೆಸ್ಸಿಗರು ಬಿಜೆಪಿಯನ್ನು ಬೆಂಬಲಿಸಿರುವುದನ್ನು ಜನತೆ ಮರೆತಿಲ್ಲ. ಅಲ್ಲದೆ ಈ ಬಾರಿ ಕೂಡ ತಾನು ಗೆಲ್ಲುವುದಿಲ್ಲ ಎಂಬ ಅರಿವಿದ್ದೇ ದುರ್ಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್ ಬಿಜೆಪಿಯ ‘ಮಿಷನ್ 150’ಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಜೆಡಿಎಸ್ ಜಂಟಿ ಕಾರ್ಯದರ್ಶಿ ಸುರೇಂದ್ರ ಶೆಟ್ಟಿ, ಉಪಾಧ್ಯಕ್ಷ ಅಶ್ರಫ್, ನಗರಸಭಾ ಸದಸ್ಯೆ ಲೀಲಾ ಶೇಷಮ್ಮ, ರವಿ ಕಿರಣ್ ರೈ ಹಾಗೂ ಧನಂಜಯ ಶೆಟ್ಟಿ ಉಪಸ್ಥಿತರಿದ್ದರು.