ಮಡಿಕೇರಿ, ಮೇ 2: ಸರಕಾರದ ಸುತ್ತೋಲೆಯಂತೆ ಇಂದಿನಿಂದಲೇ ದ್ವಿತೀಯ ಪಿಯುಸಿ ತರಗತಿಗಳು ಆರಂಭಗೊಂಡಿತ್ತಾದರೂ ವಿದ್ಯಾರ್ಥಿಗಳ ಕೊರತೆ ಹಾಗೂ ಉಪನ್ಯಾಸಕರ ಬಹಿಷ್ಕಾರದಿಂದಾಗಿ ತರಗತಿಗಳು ನಡೆಯದೆ ಮಧ್ಯಾಹ್ನದ ವೇಳೆಗೆ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದ ಪ್ರಸಂಗ ನಡೆದಿದೆ.
ಜೂನ್ 1 ರಿಂದ ಆರಂಭಗೊಳ್ಳುತ್ತಿದ್ದ ದ್ವಿತೀಯ ಪಿಯುಸಿ ತರಗತಿಗಳನ್ನು ಈ ಸಾಲಿನಿಂದ ಮೇ 2 ರಿಂದ ಆರಂಭಿಸುವಂತೆ ಸರಕಾರ ಸುತ್ತೋಲೆ ಹೊರಡಿಸಿತ್ತು. ಇದಕ್ಕೆ ಪೋಷಕರು, ಉಪನ್ಯಾಸಕರಿಂದಲೂ ತೀವ್ರ ವಿರೋಧ ವ್ಯಕ್ತಗೊಂಡಿತ್ತು. ವಿದ್ಯಾರ್ಥಿಗಳ ರಜಾ ದಿನಗಳನ್ನು ಮೊಟಕುಗೊಳಿಸಿದ್ದಲ್ಲದೆ, ಚುನಾವಣಾ ಸಮಯವಾಗಿದ್ದು, ಉಪನ್ಯಾಸಕರುಗಳನ್ನು ಚುನಾವಣಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವದರಿಂದ ಕಷ್ಟವಾಗುತ್ತದೆ. ಕನಿಷ್ಟ ಮೇ 15 ರಿಂದ ತರಗತಿಗಳನ್ನು ಆರಂಭಿಸುವಂತೆ ಒತ್ತಾಯ ಕೂಡ ಕೇಳಿ ಬರುತ್ತಿದೆ. ಆದರೂ ಅದಕ್ಕೆ ಮನ್ನಣೆ ಸಿಗದ ಹಿನ್ನೆಲೆಯಲ್ಲಿ ಉಪನ್ಯಾಸಕರು ತರಗತಿ ಬಹಿಷ್ಕರಿಸುವದಾಗಿ ಎಚ್ಚರಿಸಿದ್ದರು.
ಸರಕಾರಿ ಆದೇಶದಂತೆ ಇಂದು ತರಗತಿ ಆರಂಭವಾದರೂ ಗೊಂದಲದ ನಡುವೆ ಸಿಲುಕಿರುವ ವಿದ್ಯಾರ್ಥಿಗಳು ಅತಿ ವಿರಳ ಸಂಖ್ಯೆಯಲ್ಲಿ ಆಗಮಿಸಿದ್ದರು. ಪ್ರಾಚಾರ್ಯರು, ಉಪನ್ಯಾಸಕರು, ಸಿಬ್ಬಂದಿಗಳು ಆಗಮಿಸಿದ್ದರಾದರೂ ಸರಕಾರಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ಉಪನ್ಯಾಸಕರಾರು ತರಗತಿ ತೆಗೆದುಕೊಳ್ಳದೆ ಬಹಿಷ್ಕರಿಸಿದರು. ನಂತರದಲ್ಲಿ ಮಧ್ಯಾಹ್ನದ ಬಳಿಕ ಮಕ್ಕಳನ್ನು ವಾಪಸ್ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಖಾಸಗಿ ಶಾಲೆಗಳಲ್ಲಿ ಎಂದಿನಂತೆ ತರಗತಿಗಳು ನಡೆದಿರುವದಾಗಿ ತಿಳಿದು ಬಂದಿದೆ.