ಕುಶಾಲನಗರ, ಮೇ 2: ಮಡಿಕೇರಿ ಕ್ಷೇತ್ರದಲ್ಲಿ ಜನಪರ ಮತ್ತು ಜನೋಪಯೋಗಿ ಕಾರ್ಯಕ್ರಮಗಳನ್ನು ಕಳೆದ ಹಲವು ವರ್ಷಗಳಿಂದ ಕೈಗೊಂಡಿದ್ದು ಈ ಬಾರಿ ತನ್ನನ್ನು ಹೆಚ್ಚಿನ ಬಹುಮತದಿಂದ ಆರಿಸುವಂತೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಪಿ.ಅಪ್ಪಚ್ಚುರಂಜನ್ ಮನವಿ ಮಾಡಿದ್ದಾರೆ. ಅವರು ಮಂಗಳವಾರ ಕುಶಾಲನಗರ ಪಟ್ಟಣದಲ್ಲಿ ಮನೆಮನೆಗೆ ತೆರಳಿ ಮತಯಾಚನೆ ನಂತರ ಮಾತನಾಡಿದರು.

ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಸೋಮವಾರಪೇಟೆ, ಕುಶಾಲನಗರ ಹಾಗೂ ಎಲ್ಲಾ ಗ್ರಾಮಗಳಲ್ಲಿ ಶಾಸಕರ ಅನುದಾನದಡಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಈ ಬಾರಿ ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಮರು ಆಯ್ಕೆಯೊಂದಿಗೆ ರಾಜ್ಯದಲ್ಲಿ ಪಕ್ಷದ ಸರಕಾರ ರಚನೆಗೆ ಮತದಾರರು ಒಲವು ತೋರಿದ್ದಾರೆ ಎಂದರು.

ಕುಶಾಲನಗರ ಅರಣ್ಯ ತಪಾಸಣಾ ಗೇಟ್ ಬಳಿಯಿಂದ ಸ್ಥಳೀಯ ಪ್ರಮುಖರು ಹಾಗೂ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ತೆರಳಿ ರಂಜನ್ ಮತ ಯಾಚಿಸಿದರು. ರಂಜನ್ ಅವರ ಪುತ್ರ ಕೂಡ ಇದೇ ಸಂದರ್ಭ ತಮ್ಮ ತಂದೆಯ ಪರವಾಗಿ ಮತಯಾಚನೆಯಲ್ಲಿ ತೊಡಗಿಸಿಕೊಂಡಿದ್ದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಜಿಪಂ ಸದಸ್ಯೆ ಮಂಜುಳಾ, ತಾಪಂ ಸದಸ್ಯೆ ಪುಷ್ಪಾ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಯಮುನಾ ಚಂಗಪ್ಪ, ನಗರ ಘಟಕದ ಅಧ್ಯಕ್ಷ ಕೆ.ಜಿ.ಮನು, ಉಪಾಧ್ಯಕ್ಷ ಬೋಸ್ ಮೊಣ್ಣಪ್ಪ, ಪ್ರಮುಖರಾದ ಶಿವಾಜಿ, ಎಂ.ಡಿ.ಕೃಷ್ಣಪ್ಪ, ಕೆ.ಎನ್.ದೇವರಾಜ್, ಭಾಸ್ಕರ್ ನಾಯಕ್, ಪಪಂ ಸದಸ್ಯರಾದ ಮಧುಸೂದನ್, ಡಿ.ಕೆ.ತಿಮ್ಮಪ್ಪ ಮತ್ತಿತರರು ಇದ್ದರು.ಗೋಣಿಕೊಪ್ಪಲು: ತಿತಿಮತಿ ಸೋಮವಾರ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಜಿ.ಬೋಪಯ್ಯ ಮತಯಾಚನೆ ಮಾಡಿದರು.

ಸ್ಥಳೀಯ ಬಸ್ ನಿಲ್ದಾಣದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಬೋಪಯ್ಯ 5 ವರ್ಷದ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಬಹಳಷ್ಟು ಅನುದಾನ ಬಿಡುಗಡೆಯಾಗಿತ್ತು. ಈ ಹಣದಲ್ಲಿಯೇ ಇಂದು ಬಹುತೇಕ ಹಾಡಿಗಳಿಗೆ ರಸ್ತೆ ನಿರ್ಮಿಸಲಾಗಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಬಹಳಷ್ಟು ಅನುದಾನ ನೀಡಿದೆ.ಇದನ್ನು ರಾಜ್ಯ ಸರ್ಕಾರ ಸರಿಯಾಗಿ ಬಳಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ದೂರಿದರು.

ಅನ್ನದಾನಕ್ಕೆ ನೀಡುವ ಅಕ್ಕಿಯನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಇದನ್ನು ರಾಜ್ಯ ಸರ್ಕಾರ ತಮ್ಮದೆಂದು ಹೇಳಿಕೊಳ್ಳುತ್ತಿ. ಜನತೆ ಇದರ ಬಗ್ಗೆ ಎಚ್ಚರದಿಂದ ಇರಬೇಕು. ಅಭಿವೃದ್ಧಿ ಕಾರ್ಯಗಳಿಗೆ ಬಿಜೆಪಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.

ಪಕ್ಷದ ಮುಖಂಡರಾದ ಮೂಕೊಂಡ ಬೋಸ್ ದೇವಯ್ಯ, ಪಟ್ರಪಂಟ ನಾಣಯ್ಯ, ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಅರುಣ್ ಭೀಮಯ್ಯ, ಮುಖಂಡರಾದ ಕೆ.ಬಿ.ಗಿರೀಶ್ ಗಣಪತಿ, ಎನ್.ಎನ್.ಅನೂಪ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಶಿ ಸುಬ್ರಮಣಿ,ವಿಜು ಸುಬ್ರಮಣಿ, ಸಿ.ಕೆ.ಬೋಪಣ್ಣ, ತೆಲಚೇರಿ ಬಿಜೆಪಿ ಮುಖಂಡ ಶಿವಕುಮಾರ್ ಹಾಜರಿದ್ದರು.