ಮಡಿಕೇರಿ, ಮೇ. 2 :ಕಳೆದ 15-20 ವರ್ಷಗಳಿಂದ ಕೊಡಗಿನ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳೇ ಆಯ್ಕೆಯಾಗುತ್ತಿದ್ದರೂ ಜನರು ನಿರೀಕ್ಷಿಸಿದ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲವೆಂದು ಜಾತ್ಯತೀತ ಜನತಾ ದಳದ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿ.ವಿ.ನಾಗೇಶ್ ಗೌಡ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ಇಲ್ಲಿಯವರೆಗೆ ಯಾವುದೇ ಆಸ್ಪತ್ರೆಗಳು ಮೇಲ್ದರ್ಜೆಗೇರಿಲ್ಲ. ಕುಡಿಯುವ ನೀರು ಸೇರಿದಂತೆ ಶಾಶ್ವತ ಮೂಲಭೂತ ಸೌಲಭ್ಯಗಳಿಗಾಗಿ ಶಾಸಕರುಗಳು ಯಾವುದೇ ಕಾಳಜಿಯನ್ನು ತೋರಿಲ್ಲ ಎಂದು ಆರೋಪಿಸಿದರು. ಈ ಹಿಂದೆ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರ ಇದ್ದಾಗ ಕುಶಾಲನಗರ-ಬಂಟ್ವಾಳ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಯಿತು ಎಂದು ತಿಳಿಸಿದ ನಾಗೇಶ್ ಗೌಡ, ಈ ಜಿಲ್ಲೆಗೆ ಬಿಜೆಪಿ ಮತ್ತು ಶಾಸಕರುಗಳ ಕೊಡುಗೆ ಏನಿದೆಯೆಂದು ಪ್ರಶ್ನಿಸಿದರು.

ಅಭಿವೃದ್ಧಿಯ ಚಿಂತನೆಯನ್ನು ಮರೆತ ಶಾಸಕರು, ಮತಬ್ಯಾಂಕ್ ರಾಜಕಾರಣಕ್ಕಾಗಿ ಗುಂಪು ಘರ್ಷಣೆಗೆ ಕುಮ್ಮಕ್ಕು ನೀಡಿದರೆಂದು ಆರೋಪಿಸಿದರು. ಶಾಸಕರು ಕಾರ್ಯಕರ್ತರ ಮೇಲೆಯೆ ಕೈ ಮಾಡುವ ಹಂತಕ್ಕೆ ತಲುಪಿದ್ದು, ಒಂದು ವೇಳೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಬಡಪಾಯಿ ಕಾರ್ಯಕರ್ತರ ಪಾಡೇನು ಎಂದು ಪ್ರಶ್ನಿಸಿದರು. ಬಿಜೆಪಿ ಪ್ರತಿನಿಧಿಗಳ ಅಭಿವೃದ್ಧಿ ಆಗಿದೆಯೇ ಹೊರತು, ಜಿಲ್ಲೆ ಯಾವುದೇ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಿಲ್ಲವೆಂದು ಸಿ.ವಿ.ನಾಗೇಶ್‍ಗೌಡ ಆರೋಪಿಸಿದರು.

ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಬಿ.ಎ.ಜೀವಿಜಯ ಅವರು, ಜೆಡಿಎಸ್‍ನ ಸಮರ್ಥ ಮತ್ತು ನುರಿತ ರಾಜಕಾರಣಿಯಾಗಿದ್ದು, ಈ ಬಾರಿ ಅವರ ಗೆಲುವು ಖಚಿತವೆಂದು ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯ ಪರಿಶಿಷ್ಟ ಘಟಕದ ಕಾರ್ಯದರ್ಶಿ ಹೆಚ್.ಎನ್.ಯೋಗೇಶ್ ಕುಮಾರ್, ಅಲ್ಪಸಂಖ್ಯಾತರ ಘಟಕದ ಮಡಿಕೇರಿ ಉಪಾಧ್ಯಕ್ಷ ಲತೀಫ್, ಪಕ್ಷದ ಜಿಲ್ಲಾ ಜಂಟಿ ಕಾರ್ಯದರ್ಶಿ ಸುರೇಂದ್ರ ಶೆಟ್ಟಿ, ಪ್ರಮುಖರಾದ ಷಂಶುದ್ದೀನ್ ಹಾಗೂ ಪುನಿತ್ ಗೌಡ ಉಪಸ್ಥಿತರಿದ್ದರು.