ಮಡಿಕೇರಿ, ಮೇ 2 : ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ಗೌಡ ಜನಾಂಗ ಬಾಂಧವರಿಗಾಗಿ ಆಯೋಜಿಸಲಾಗುತ್ತಿರುವ ಮೂರನೇ ವರ್ಷದ ‘ಗೌಡ ಫುಟ್ಬಾಲ್ ಟ್ರೋಫಿ-2018’ ಪಂದ್ಯಾವಳಿ ತಾ.19ರಿಂದ ಮರಗೋಡು ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅಕಾಡೆಮಿಯ ಪದಾಧಿಕಾರಿಗಳು, ಕಳೆದ ಎರಡು ವರ್ಷಗಳಲ್ಲಿ ಫುಟ್ಬಾಲ್ ಪಂದ್ಯಾವಳಿಗೆ ಜನಾಂಗ ಬಾಂಧವರಿಂದ ಉತ್ತಮ ಸ್ಪಂದನ ದೊರಕಿದ್ದು, ಕಳೆದ ಬಾರಿ 90 ಕುಟುಂಬ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿವೆ. ಈ ಬಾರಿ 100ಕ್ಕೂ ಅಧಿಕ ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.

19 ರಿಂದ 27 ರವರೆಗೆ ಪ್ರತಿದಿನ 12 ಪಂದ್ಯಗಳು ನಡೆಯಲಿದ್ದು, ಪಂದ್ಯಾವಳಿಗೆ ಸಂಬಂಧಿಸಿದ ಟೈಸ್‍ಅನ್ನು ತಾ. 3 ರಂದು(ಇಂದು) ಮರಗೋಡುವಿನ ವಿವೇಕಾನಂದ ಯೂತ್‍ಕ್ಲಬ್ ಸಭಾಂಗಣದಲ್ಲಿ ನಿಗದಿಪಡಿಸಲಾಗುವದು ಎಂದ ಅವರು, ಹೆಸರು ನೋಂದಾಯಿಸಿದ ಎಲ್ಲಾ ತಂಡಗಳ ನಾಯಕರು ಪೂರ್ವಾಹ್ನ 10.30ಕ್ಕೆ ಹಾಜರಿರಬೇಕು ಎಂದು ಮನವಿ ಮಾಡಿದರು.

ಪಂದ್ಯಾಟವು 7+2 ಆಟಗಾರರ 15+15 ನಿಮಿಷಗಳ ಪಂದ್ಯವಾಗಿದ್ದು, ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳು ಸಮವಸ್ತ್ರ ಧರಿಸುವದು ಹಾಗೂ ಕುಟುಂಬದ ಗುರುತಿನ ಚೀಟಿ ತರುವದು ಕಡ್ಡಾಯವಾಗಿದೆ ಎಂದು ಹೇಳಿದ ಅವರು, ಪಂದ್ಯಾವಳಿಯಲ್ಲಿ ಜಯಗಳಿಸುವ ತಂಡಗಳಿಗೆ 30ಸಾವಿರ ನಗದು(ಪ್ರಥಮ) 20ಸಾವಿರ ನಗದು(ದ್ವಿತೀಯ) 10 ಸಾವಿರ ನಗದು(ತೃತೀಯ) ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವದಲ್ಲದೆ, 3 ಮತ್ತು ನಾಲ್ಕನೇ ಸ್ಥಾನಕ್ಕಾಗಿ ಪಂದ್ಯಾವಳಿ ನಡೆಸಿ ನಾಲ್ಕನೇ ಸ್ಥಾನ ಪಡೆಯುವ ತಂಡಕ್ಕೆ 5 ಸಾವಿರ ರೂ. ನಗದು ಹಾಗೂ ಟ್ರೋಫಿ ನೀಡಲಾಗುವದು. ಇದರೊಂದಿಗೆ ಉತ್ತಮ ಆಟಗಾರರಿಗೆ ವೈಯಕ್ತಿಕ ಪ್ರಶಸ್ತಿ ಮತ್ತು ಉತ್ತಮ ತಂಡಕ್ಕೆ ತಂಡ ಪ್ರಶಸ್ತಿ ನೀಡಲಾಗುವದು ಎಂದು ನುಡಿದರು.

ಪಂದ್ಯಾವಳಿಯ ಉದ್ಘಾಟನಾ ದಿನದಂದು ಗೌಡ ಆರ್ಮಿ ಇಲೆವೆನ್ ಹಾಗೂ ಗೌಡ ಅಕಾಡೆಮಿ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಲಿದ್ದು, ಸಮಾರೋಪದಂದು ಗೌಡ ಸಮುದಾಯದ ಕೋಲಾಟ ಹಾಗೂ ಹೀಲಿಯಾಟ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗೆ ಪಾಣತ್ತಲೆ ಜಗದೀಶ್ ಮಂದಪ್ಪ (9448976421) ಬಡುವಂಡ್ರ ಸುಜಯ್ (9482631474) ರಾಕೇಶ್ ಕಟ್ಟೆಮನೆ(9481058358)ನ್ನು ಸಂಪರ್ಕಿಸಬಹುದೆಂದರು.

ಗೋಷ್ಠಿಯಲ್ಲಿ ಅಕಾಡೆಮಿ ಅಧ್ಯಕ್ಷ ಕಟ್ಟೆಮನೆ ರಾಕೇಶ್, ಉಪಾಧ್ಯಕ್ಷ ಬಡುವಂಡ್ರ ದುಶ್ಯಂತ್, ಕಾರ್ಯದರ್ಶಿ ಇಟ್ಟನಿಕೆ ನವನೀತ್, ಸಹಕಾರ್ಯದರ್ಶಿ ಕೊಂಪುಳಿರ ಪುನೀತ್, ಖಜಾಂಚಿ ಚೆರಿಯಮನೆ ರಕ್ಷವ್, ಸದಸ್ಯ ಚೋಂಡಿರ ಲಿಖಿತ್ ಹಾಜರಿದ್ದರು.