ವೀರಾಜಪೇಟೆ, ಮೇ 2: ವೀರಾಜಪೇಟೆಯ ಗೋಣಿಕೊಪ್ಪ ರಸ್ತೆಯಲ್ಲಿ ಒಂದು ತಿಂಗಳ ಹಿಂದೆ ಉದ್ಘಾಟನೆಗೊಂಡು ಕಾರ್ಯ ನಿರ್ವಹಿಸುತ್ತಿರುವ ಕಾಂಗ್ರೆಸ್ ಪಕ್ಷದ ಚುನಾವಣಾ ಕಚೇರಿ ಅಧಿಕೃತವಾಗಿದ್ದು ಪಕ್ಷದ ಕಾರ್ಯಕರ್ತರು ಒಮ್ಮತದಿಂದ ಪಕ್ಷದ ಅಭ್ಯರ್ಥಿ ಅರುಣ್ ಮಾಚಯ್ಯ ಅವರನ್ನು ಗೆಲ್ಲಿಸಲು ಪ್ರಚಾರ ಮಾಡುತ್ತಿದ್ದಾರೆ. ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವ ಸಲುವಾಗಿ ದೊಡ್ಡಟ್ಟಿ ಚೌಕಿ ಬಳಿಯಲ್ಲಿ ದುರುದ್ದೇಶ ಪೂರ್ವಕವಾಗಿ ಅನಧಿಕೃತ ಕಾಂಗ್ರೆಸ್ ಪಕ್ಷದ ಚುನಾವಣಾ ಕಚೇರಿಯನ್ನು ಆರಂಭಿಸಲಾಗಿದೆ ಎಂದು ಅನೇಕ ಕಾಂಗ್ರೆಸ್ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಈ ಅನಧಿಕೃತ ಚುನಾವಣಾ ಕಾಂಗ್ರೆಸ್ ಪಕ್ಷದ ಕಚೇರಿಯ ಕುರಿತು ಪಕ್ಷದ ಬ್ಲಾಕ್ ಅಧ್ಯಕ್ಷ ಆರ್.ಕೆ. ಅಬ್ದುಲ್ ಸಲಾಂ ಅವರನ್ನು ಪ್ರತಿಕ್ರಿಯೆ ಬಯಸಿದಾಗ ಗೋಣಿಕೊಪ್ಪ ರಸ್ತೆಯ ಮಾಂಸ ಮಾರುಕಟ್ಟೆಯ ಬಳಿ ಏ. 1 ರಂದು ಪಕ್ಷದ ಅಭ್ಯರ್ಥಿ ಸಿ.ಎಸ್. ಅರುಣ್ ಮಾಚಯ್ಯ ಉದ್ಘಾಟಿಸಿದ್ದು ಅಂದಿನಿಂದಲೇ ಪಕ್ಷದ ಚುನಾವಣಾ ಪ್ರಚಾರ ಕಾರ್ಯ ಈ ಕಚೇರಿಯಿಂದ ನಡೆಯುತ್ತಿದೆ ಎಂದು ತಿಳಿಸಿದರು.

ಕಾರ್ಯಕರ್ತರು ಒಗ್ಗಟ್ಟಿನಿಂದ ಅರುಣ್ ಮಾಚಯ್ಯ ಅವರ ಗೆಲುವಿಗೆ ಶ್ರಮಿಸುತ್ತಿದ್ದಾರೆ ಎಂದರು. ಪಕ್ಷದ ಅನಧಿಕೃತ ಕಚೇರಿ ಆರಂಭದ ವಿರುದ್ದ ಕೆ.ಪಿ.ಸಿ.ಸಿ. ಅಧ್ಯಕ್ಷರು. ಜಿಲ್ಲಾಧ್ಯಕ್ಷ ಶಿವುಮಾದಪ್ಪ, ಪಕ್ಷದ ಇತರ ಮುಖಂಡರುಗಳಿಗೆ ತುರ್ತು ದೂರು ನೀಡಲಾಗಿದೆ, ಮುಂದಿನ ಕ್ರಮದ ಬಗ್ಗೆ ಮುಖಂಡರುಗಳು ಭರವಸೆ ನೀಡಿದ್ದು ಅನಧಿಕೃತ ಚುನಾವಣಾ ಕಚೇರಿ ಆರಂಭಿಸಿರುವ ಕೆಲವು ಕಾರ್ಯಕರ್ತರುಗಳ ವಿರುದ್ಧ ಪಕ್ಷದ ವರಿಷ್ಠರು ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ಈ ಬೆಳವಣಿಗೆಯಿಂದ ವೀರಾಜಪೇಟೆಯ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ.