ವೀರಾಜಪೇಟೆ ಮೇ 1: ಪ್ರತಿಯೊಂದು ಸಮುದಾಯವು ಪ್ರತಿವರ್ಷ ಕ್ರೀಡಾಕೂಟವನ್ನು ಹಮ್ಮಿಕೊಳ್ಳುವದರಿಂದ ಸಮುದಾಯದ ಕುಟುಂಬಗಳ ನಡುವೆ ಪರಸ್ಪರ ಸಾಮರಸ್ಯ ಜೀವನಕ್ಕೆ ಅವಕಾಶವಾಗಲಿದೆ.
ಇದರಿಂದ ಸಮುದಾಯದಲ್ಲಿ ಒಗ್ಗಟ್ಟನ್ನು ಸಾಧಸಿ ಸಮುದಾಯದ ಸಂಘಟನೆ ಪ್ರಗತಿ ಹಾಗೂ ಅಭಿವೃದ್ಧಿಯತ್ತ ಸಾಗಲಿದೆ ಎಂದು ಬೆಂಗಳೂರಿನ ಕೃಷಿ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಡಾ:ಪಿ.ಜಿ.ಚಂಗಪ್ಪ ಹೇಳಿದರು.
ಕೊಡಗು ಹೆಗ್ಗಡೆ ವಿದ್ಯಾಭಿವೃದ್ಧಿ ಸಂಘ ಹಾಗೂ ಸಮಾಜದ ವತಿಯಿಂದ ಆಯೋಜಿಸಿದ್ದ ಕ್ರೀಡೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ:ಚಂಗಪ್ಪ ಅವರು ಸಮುದಾಯದ ಸಂಘಟನೆ ಆಯೋಜಿಸುವ ಕ್ರೀಡಾಕೂಟ ಸೇರಿದಂತೆ ಇತರ ಸಮಾರಂಭಗಳಲ್ಲಿ ಸಮುದಾಯ ತಪ್ಪದೆ ಭಾಗವಹಿಸಿ ಉತ್ತೇಜನ ನೀಡಬೇಕು ಎಂದರು.
ಹಂಪಿ ವಿಶ್ವ ವಿದ್ಯಾಲಯದ ನಿವೃತ್ತ ರಿಜಿಸ್ಟ್ರಾರ್ ಹಾಗೂ ಪ್ರೊಫೆಸರ್: ತಂಬಂಡ ವಿಜು ಪೂಣಚ್ಚ ಮಾತನಾಡಿ ಸಮುದಾಯ ಬಾಂಧವರು ಮೊದಲು ಶಿಕ್ಷಣಕ್ಕೆ ಆದ್ಯತೆ ನೀಡುವದರಿಂದ ಭವಿಷ್ಯದಲ್ಲಿ ಸಮುದಾಯ ಅಭಿವೃದ್ಧಿಯತ್ತ ಸಾಗಲಿದೆ. ಸಮುದಾಯದ ಕ್ರೀಡೆಯಲ್ಲಿಯೂ ಪುರುಷರು. ಮಹಿಳೆಯರು ಮಕ್ಕಳು ಎಂಬುದರಲ್ಲಿ ಸಮಾನತೆಯನ್ನು ಸಾಧಿಸಬೇಕು ಎಂದು ಹೇಳಿದರು.
ಇದೇ ಸಮಾರಂಭದಲ್ಲಿ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಬೈರಿ ಕುಂದೀರ ವಿಂದ್ಯಾ ಅಪ್ಪಚ್ಚು, ಪೊಕ್ಕಳಿಚಂಡ ಸಫನ್ ಅಯ್ಯಪ್ಪ, ಬೊಳ್ಳಿಯಪಂಡ ಪಾವನಾ ಕುಶಾಲಪ್ಪ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಎಸ್.ಎಸ್.ಎಲ್.ಸಿ. ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿ ಉತ್ತೇಜಿಸಲಾಯಿತು.
ಹೆಗ್ಗಡೆ ಸಮಾಜದ ಅಧ್ಯಕ್ಷ ಪಿ.ಜಿ.ಅಯ್ಯಪ್ಪ ಮಾತನಾಡಿ ಸಮುದಾಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಮುದಾಯದ ಪ್ರತಿಯೊಬ್ಬರ ಪರಸ್ಪರ ಸಹಕಾರ ಅಗತ್ಯ. ಇಂದಿನ ಪರಿಸ್ಥಿತಿಯಲ್ಲಿ
ಸಮುದಾಯದ ಬೆಳವಣಿಗೆ, ಪ್ರಗತಿಗೆ ಸಂಘಟನೆ ವಿಶೇಷ ಆದ್ಯತೆ ನೀಡಲಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಪೊಕ್ಕಳಚಂಡ ಹರೀಶ್, ಪಂದಿಕಂಡ ನಂದ ಕುಶಾಲಪ್ಪ, ಮಂಡೇಡ ಮಣಿ ಬೆಳ್ಳಿಯಪ್ಪ, ಪಿ.ದೇವಕಿ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜೂನಿಯರ್ ಕಾಲೇಜು ಮೈದಾನದ ವೇದಿಕೆಯಲ್ಲಿ ಆಯೋಜಿಸಿದ್ದ ಸಮಾರಂಭದ ಪ್ರಾರಂಭದಲ್ಲಿ ಸಂಘದ ನಿರ್ದೇಶಕ ತೊರೇರ ಬಿದ್ದಪ್ಪ ಸ್ವಾಗತಿಸಿದರು. ಪಿ.ಪ್ರಭು
ಕ್ರೀಡಾ ಕೂಟದ ವಿಜೇತರು
ಟೆನ್ನಿಸ್ ಬಾಲ್ ಕ್ರಿಕೇಟ್ ಪಂದ್ಯಾಟದ ಸೀನಿಯರ್ ವಿಭಾಗದಲ್ಲಿ ಹಾತೂರು ತಂಡ ಪ್ರಥಮ ಸ್ಥಾನ ಪಡೆದು ಟ್ರೋಫಿಯನ್ನು ತನ್ನದಾಗಿಸಿಕೊಂಡರೆ ಕಡಿಯತ್ತೂರು ತಂಡ ದ್ವಿತೀಯ ಸ್ಥಾನ ಪಡೆದು ತೃಪ್ತಿಪಟ್ಟುಕೊಂಡಿತು.
ಜೂನಿಯರ್ ವಿಭಾಗದಲ್ಲಿ ಬೆಟ್ಟಗೇರಿ ಪ್ರಥಮ, ಹಾಲುಗುಂದ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಮಹಿಳೆಯರ ಥ್ರೋ ಬಾಲ್ನಲ್ಲಿ ಬಿಟ್ಟಂಗಾಲ ಎ ತಂಡ ಪ್ರಥಮ, ಬೆಟ್ಟಗೇರಿ ದ್ವಿತೀಯ ಸ್ಥಾನ ಪಡೆಯಿತು. ಕ್ರೀಡಾಕೂಟದ ವಿಜೇತರಿಗೆ ಅತಿಥಿಗಳು ಬಹುಮಾನಗಳನ್ನು ವಿತರಿಸಿದರು.