ಮಡಿಕೇರಿ, ಮೇ. 2 : ಇಲ್ಲಿನ ಸಂತಮೈಕಲರ ಪ. ಪೂ. ಕಾಲೇಜಿನ ಪ್ರಥಮ ಪಿ.ಯು.ಸಿ.ಯ ಐವತ್ತು ವಿದ್ಯಾರ್ಥಿಗಳನ್ನು ದುರುದ್ದೇಶದಿಂದ ಅನುತ್ತೀರ್ಣಗೊಳಿಸಲಾಗಿದೆ ಎಂದು ಆರೋಪಿಸಿ; ಸಂಬಂಧಿಸಿದ ವಿದ್ಯಾರ್ಥಿಗಳು ಹಾಗೂ ಪೋಷಕರು ಇಂದು ದಿಢೀರ್ ಪ್ರತಿಭಟನೆ ನಡೆಸಿದರು.
ಕಳೆದ ಮಾರ್ಚ್ನಲ್ಲಿ ನಡೆದ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದ 64 ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಿದ್ದು, ಕೇವಲ ಒಂದು ವರ್ಗದ 14 ಮಂದಿಯನ್ನು ತೇರ್ಗಡೆಗೊಳಿಸಿ ಇತರ ಸಮುದಾಯದ 50 ವಿದ್ಯಾರ್ಥಿ ಗಳಿಗೆ ಅರ್ಹತೆಯಿದ್ದರೂ ಕಡಿಮೆ ಅಂಕ ನೀಡಿ ಅನುತ್ತೀರ್ಣ ಗೊಳಿಸಲಾಗಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು. ಈ ಬಗ್ಗೆ ಸಂತಮೈಕಲರ ಪ. ಪೂ. ಕಾಲೇಜು ಪ್ರಾಂಶುಪಾಲರು, ವಿದ್ಯಾರ್ಥಿಗಳು ಮತ್ತು ಪೋಷಕರು ಕೇಳಲು ಹೋದಾಗ ಅವಾಚ್ಯವಾಗಿ ನಿಂದಿಸಿದ್ದಲ್ಲದೆ, ವಿದ್ಯಾಲಯದಿಂದ ತಲೆಮರೆಸಿಕೊಂಡು ಪರಾರಿಯಾಗಿ ರುವ ಪ್ರಸಂಗವೂ ನಡೆಯಿತು. ಹೀಗಾಗಿ ಪ್ರತಿಭಟನಾಕಾರರು ಜಿಲ್ಲಾ ಆಡಳಿತ ಭವನದ ಪ. ಪೂ. ಕಾಲೇಜು ಉಪನಿರ್ದೇಶಕರ ಕಚೇರಿಗೆ ದೌಡಾಯಿಸಿ ಅಸಮಾಧಾನ ಹೊರ ಗೆಡವಿದರು. ಈ ವೇಳೆ ಸ್ಪಂದಿಸಿದ ಉಪ ನಿರ್ದೇಶಕ ಜಯ ದೇವಪ್ಪ ಖುದ್ದಾಗಿ ಸಂತ ಮೈಕಲರ ಪ. ಪೂ. ಕಾಲೇಜಿಗೆ ಧಾವಿಸಿದಾಗ ಪ್ರಾಂಶುಪಾಲ ರೋಹನ್ ನಾಪತ್ತೆಯಾಗಿದ್ದು, ಸಂಸ್ಥೆಯ ಮುಖ್ಯಸ್ಥರಾದ ಫಾದರ್ ಆಲ್ಬರ್ಡ್ ಆಗಮಿಸಿ ಸಮಜಾಯಿಷಿಕೆ ನೀಡಿದರು. ಪ್ರಾಂಶುಪಾಲರು ಎಲ್ಲಿ ಹೋಗಿದ್ದಾರೆ ತಿಳಿದಿಲ್ಲ; ಮೊಬೈಲ್ ಸ್ವಿಚ್ಆಫ್ ಆಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಈ ಸಂದರ್ಭ ಕೆಲವು ವಿದ್ಯಾರ್ಥಿ ನಿಯರು ಮತ್ತು ತಾಯಂದಿರು ಪ್ರಾಂಶುಪಾಲ ಹೆಣ್ಣು ಮಕ್ಕಳೊಂದಿಗೆ ಅಸಭ್ಯ ವರ್ತನೆಯೊಂದಿಗೆ ಕೆಟ್ಟ ಪದಗಳನ್ನು ಬಳಸಿ ಅಪಮಾನಿಸಿದ್ದಾಗಿ ದೂರಿಕೊಂಡರು. ಈ ಬಗ್ಗೆ ತಾವು ವಿಚಾರಿಸುವದಾಗಿ ಮುಖ್ಯಸ್ಥರು ನುಡಿದರು.
(ಮೊದಲ ಪುಟದಿಂದ)
ಮರು ಮೌಲ್ಯಮಾಪನ : ವಿದ್ಯಾರ್ಥಿಗಳ ಬೇಡಿಕೆಗೆ ಸ್ಪಂದಿಸಿದ ಅಧಿಕಾರಿ ಜಯದೇವಪ್ಪ; ಅನುತ್ತೀರ್ಣಗೊಂಡಿರುವ ಮಕ್ಕಳ ಉತ್ತರ ಪತ್ರಿಕೆಗಳನ್ನು; ಬೇರೆ ಶಿಕ್ಷಕರಿಂದ ಶೀಘ್ರ ಮರು ಮೌಲ್ಯಮಾಪನ ನಡೆಸಿ ನ್ಯಾಯ ಕಲ್ಪಿಸುವದಾಗಿ ಭರವಸೆ ನೀಡಿದರು. ಆ ಬಳಿಕ ಪ್ರತಿಭಟನೆಯಿಂದ ಹಿಂದೆ ಸರಿದ ವಿದ್ಯಾರ್ಥಿಗಳು, ಪೋಷಕರು ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧೀಕ್ಷಕರ ಕಚೇರಿಗಳಿಗೆ ತೆರಳಿ ಪ್ರತ್ಯೇಕ ದೂರು ಸಲ್ಲಿಸಿ ಅನ್ಯಾಯ ಸರಿಪಡಿಸಿ ನ್ಯಾಯ ಕಲ್ಪಿಸುವಂತೆ ಮನವಿ ಮಾಡಿದರು.