ಸೋಮವಾರಪೇಟೆ,ಮೇ.2: ಸಮೀಪದ ಹೊಸಬೀಡು-ಬಳಗುಂದ ಗ್ರಾಮದಲ್ಲಿ ಜೀರ್ಣೋದ್ಧಾರದೊಂದಿಗೆ ರು. 25 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಮಹಾಲಕ್ಷ್ಮೀ ಅಮ್ಮನವರ ದೇವಾಲಯದ ಲೋಕಾರ್ಪಣಾ ಸಮಾರಂಭ ತಾ. 3 ಮತ್ತು 4 ರಂದು ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಹೊಸಬೀಡು ಹೂವಯ್ಯ ತಿಳಿಸಿದರು.
ಪತ್ರಿಕಾ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಾಲಯದಲ್ಲಿ ಈ ಹಿಂದೆ ನೆಲ್ಯಾಡಿಯ ಶ್ರೀಧರ್ ಘೋರೆಯವರು ನಡೆಸಿಕೊಟ್ಟ ಅಷ್ಠಮಂಗಲ ಪ್ರಶ್ನೆಯಲ್ಲಿ ತಿಳಿದು ಬಂದಂತೆ ದೇವಾಲಯಕ್ಕೆ ಸುಮಾರು 650 ವರ್ಷಗಳ ಇತಿಹಾಸವಿದ್ದು, ದೇವಾಲಯ ಅಭಿವೃದ್ಧಿ ಪಡಿಸಿದಲ್ಲಿ ನಾಡು ಸುಭೀಕ್ಷೆ ಕಾಣಲಿದೆ ಎಂದು ಹೇಳಿದ್ದರು. ಆ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಂತೆ ಗ್ರಾಮಸ್ಥರೊಡಗೂಡಿ, ದಾನಿಗಳ ಸಹಕಾರದೊಂದಿಗೆ ದೇವಾಲಯ ಜೀರ್ಣೋದ್ದಾರ ಕಾಮಗಾರಿ ಮಾಡಲಾಗಿದ್ದು, ತಾ. 3 ಮತ್ತು 4 ರಂದು ಪುನರ್ಪ್ರತಿಷ್ಠಾಪನಾ ಕಾರ್ಯ ನಡೆಯಲಿದೆ ಎಂದರು.
ತಾ. 3ರ ಬೆಳಿಗ್ಗೆ 9 ಗಂಟೆಯಿಂದ ಹಾಸನದ ದಸ ಗ್ರಂಥಿ, ಋಗ್ವೇದಿ ಘನಪಾಟಿಗಳಾದ ಎಂ.ವಿ. ಕೃಷ್ಣಮೂರ್ತಿಯವರ ಪೌರೋಹಿತ್ಯದಲ್ಲಿ ದೇವತಾ ಪ್ರಾರ್ಥನೆಯೊಂದಿಗೆ ಪೂಜೆ ಆರಂಭವಾಗಲಿದೆ. ನಂತರ ಯಾಗಶಾಲಾ ಪ್ರವೇಶ, ಸಂಕಲ್ಪ, ಮಹಾಗಣಪತಿ ಪೂಜೆ, ಪುಣ್ಯಾಹ ವಾಚನ, ಮಹಾಸಂಕಲ್ಪ, ದೇವನಾಂದಿ, ಪಂಚಗವ್ಯ ಮೇಲನ ಕಾತುಕ ಬಂಧನ, ಸರ್ಪದವಿಕಿರಣ, ಅಂಕುರಾರ್ಪಣ, ಬಿಂಬಶುದ್ಧಿ, ಆಗ್ಬುತ್ತಾರಣ, ಜಲಾಧಿವಾಸ, ಕ್ಷೀರಾಧಿವಾಸ, ಧಾನ್ಯಾಧಿವಾಸ, ವಸ್ತ್ರಾಧಿವಾಸ, ಪ್ರಾಯಶ್ಚಿತ್ತ ಹೋಮ, ಮಹಾಗಣಪತಿ ಹೋಮ, ಮಹಾ ಮಂಗಳಾರತಿ ನಡೆಯಲಿದೆ.
ಸಂಜೆ 5.30ಕ್ಕೆ ಮಂಡಲ ರಚನೆ, ರತ್ನಾಧಿವಾಸ, ಪುಷ್ಪಾಧಿವಾಸ, ನವಗ್ರಹ, ರಾಕ್ಷೋಘ್ನಹೋಮ, ಆಘೋಶಾಸ್ತ್ರ ಹೋಮ, ವಾಸ್ತು ಹೋಮ, ಪ್ರತಿಷ್ಠಾಂಗ ಹರ್ಯಾಯತ್ರಯ ಹೋಮ, ಮಹಾಮಂಗಳಾರತಿ ನಡೆಯಲಿದೆ ಎಂದರು.
ತಾ.4ರಂದು ಬೆಳಿಗ್ಗೆ 5.30ಕ್ಕೆ ಸುಪ್ರಭಾತ ಸೇವೆಯೊಂದಿಗೆ ಪೂಜೆಗಳು ಆರಂಭವಾಗಿ ಪೂಜಾಂಗ ಹೋಮ, ಪ್ರತಿಷ್ಠಾಂಗ ಹೋಮ, ಮಹಾಮಂಗಳಾರತಿ ನಡೆಯಲಿದೆ. ಅಂದು ಮಧ್ಯಾಹ್ನ 12.45ರ ಕಟಕ ಲಗ್ನ ಶುಭಾಂಶದಲ್ಲಿ ಮಹಾಲಕ್ಷ್ಮಿ ಅಮ್ಮನವರ ವಿಗ್ರಹದ ಅಷ್ಟಬಂಧ ಪ್ರತಿಷ್ಠಾಪನೆ, ಕುಂಭಾಭಿಷೇಕದೊಂದಿಗೆ ದೇವಾಲಯ ಉದ್ಘಾಟನೆಗೊಳ್ಳಲಿದೆ ಎಂದು ಮಾಹಿತಿಯಿತ್ತರು.
ಶನಿವಾರಸಂತೆ ಮುದ್ದಿನಕಟ್ಟೆ ಮಠದ ಮಠಾಧೀಶರಾದ ಸಿದ್ದಲಿಂಗ ಶಿವಾಚಾರ್ಯಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ನಾಪಂಡ ಮುದ್ದಪ್ಪ, ಹರಪಳ್ಳಿ ರವೀಂದ್ರ, ಕಾಫಿ ಬೆಳೆಗಾರರಾದ ಹೆಚ್.ಸಿ. ಮಾದಪ್ಪ, ವಿನಯ್, ರಾಮಚಂದ್ರ. ಮಧುಸೌಂದರ್ಯ, ಗುತ್ತಿಗೆದಾರ ಕೆ.ಟಿ. ಸತೀಶ್, ಜಿಲ್ಲಾ ಪಂಚಾಯಿತಿ ಕಿರಿಯ ಅಭಿಯಂತರ ಟಿ.ಪಿ. ವೀರೇಂದ್ರರವರುಗಳು ಪಾಲ್ಗೊಳ್ಳಲಿದ್ದಾರೆ ಎಂದರು. ಗೋಷ್ಠಿಯಲ್ಲಿ ಸಮಿತಿ ಸದಸ್ಯರುಗಳಾದ ಎಚ್.ಎಸ್. ರಾಜೇಶ್, ಎಚ್.ಎಲ್. ವಿಜಯೇಂದ್ರ, ಎಚ್.ಎಂ. ಅರುಣಾ, ಎಚ್.ಈ. ಗಣೇಶ್ ಉಪಸ್ಥಿತರಿದ್ದರು.