ಸೋಮವಾರಪೇಟೆ, ಮೇ 2: ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ.ಚಂದ್ರಕಲಾ ಅವರು ಪಟ್ಟಣದ ವಿವಿಧೆಡೆಗಳಲ್ಲಿ ಚುನಾವಣಾ ಪ್ರಚಾರ ನಡೆಸಿದರು.
ಈ ಸಂದರ್ಭ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ.ಲೋಕೇಶ್, ಚಲನಚಿತ್ರ ನಟ ಜೈಜಗದೀಶ್, ಡಿಸಿಸಿ ಉಪಾಧ್ಯಕ್ಷ ಕೆ.ಎ.ಆದಂ, ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಸಂಚಾಲಕ ಬಿ.ಈ.ಜಯೇಂದ್ರ, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ಹಾನಗಲ್, ತಾಪಂ ಸದಸ್ಯ ಬಿ.ಬಿ.ಸತೀಶ್, ಪಪಂ ಸದಸ್ಯೆ ಶೀಲಾ ಡಿಸೋಜಾ, ಬಿ.ಸಿ.ವೆಂಕಟೇಶ್, ಮೀನಾಕುಮಾರಿ ಮತ್ತಿತರರು ಇದ್ದರು.
ಸಿದ್ದಾಪುರ: ಬಾಡಗ-ಬಾಣಂಗಾಲ ಗ್ರಾಮದ ಹುಂಡಿಯಲ್ಲಿ ಕಾಂಗೆಸ್ ಪಕ್ಷದ ಚುನಾವಣಾ ಪ್ರಚಾರ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಮಾಜಿ ತಾ.ಪಂ ಸದಸ್ಯ ಸಿ.ಎ.ಹಂಸ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನ್ನ ಭಾಗ್ಯ ಸೇರಿದಂತೆ ಬಡವರಿಗೆ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದ ಹಿನ್ನೆಲೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷದ ಪರ ಒಲವು ವ್ಯಕ್ತಪಡಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಮತ್ತೊಮ್ಮೆ ಅಧಿಕಾರಕ್ಕೆ ಬರಲಿದ್ದಾರೆ ಎಂದರು.
ಜಿಲ್ಲಾ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ಉಸ್ಮಾನ್ ಹಾಜಿ, ರಾಜ್ಯ ಅಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷ ಪಿ.ಸಿ. ಹಸೈನಾರ್ ಹಾಜಿ ಹಾಗೂ ಜಿಲ್ಲಾ ಕಾರ್ಯದರ್ಶಿ ಎಂ.ಎಸ್ ವೆಂಕಟೇಶ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಕ್ಷದ ಪದಾಧಿಕಾರಿಗಳಾದ ಸಜೀ ಥೋಮಸ್, ಪೂಕುಟ್ಟಿ, ಸಣ್ಣಯ್ಯ, ಮಹಮ್ಮದಲಿ, ಅಬೂಬಕರ್,ಮಣಿ,ನಿಸಾರ್, ಮೂಸ ಇತರರು ಹಾಜರಿದ್ದರು. ಈ ಸಂದರ್ಭ ಮಾಲ್ದಾರೆ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ರಿಯಾಜ್, ಹಾಗೂ ಫಾತಿಮ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಕಾಂಗ್ರೆಸ್ ಪ್ರಚಾರ ಸಭೆ
ಮಡಿಕೇರಿ: ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಚುನಾವಣಾ ಪ್ರಚಾರ ಸಭೆ ತಾ. 3 ರಿಂದ (ಇಂದಿನಿಂದ) ಆರಂಭಗೊಳ್ಳಲಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಎಸ್. ರಮಾನಾಥ್ ತಿಳಿಸಿದ್ದಾರೆ.
ಬೆಳಿಗ್ಗೆ 9 ಗಂಟೆಗೆ ಹಾಕತ್ತೂರು, 10ಗಂಟೆಗೆ ಮೇಕೇರಿ, 11 ಗಂಟೆಗೆ ಮದೆ, ಮಧ್ಯಾಹ್ನ 12 ಗಂಟೆಗೆ ಸಂಪಾಜೆ, 1 ಗಂಟೆಗೆ ಚೆಂಬು, 3 ಗಂಟೆಗೆ ಪೆರಾಜೆ ಹಾಗೂ ಸಂಜೆ 4 ಗಂಟೆಗೆ ಕರಿಕೆಯಲ್ಲಿದೆ ಸಭೆಯಲ್ಲಿ ನಡೆಯಲಿದೆ.
ತಾ. 4 ರಂದು 10 ಗಂಟೆಗೆ ಪಾರಾಣೆ, ಮಧ್ಯಾಹ್ನ 12 ಗಂಟೆಗೆ ನಾಪೋಕ್ಲು, ಸಂಜೆ 4 ಗಂಟೆಗೆ ಎಮ್ಮೆಮಾಡು, 5 ಗಂಟೆಗೆ ಎಡಪಾಲ, 7 ಗಂಟೆಗೆ ಕಡಂಗ, ತಾ. 5 ರಂದು ಬೆಳಿಗ್ಗೆ 10 ಗಂಟೆಗೆ ಬೆಟ್ಟಗೇರಿ, 11ಗಂಟೆಗೆ ಚೇರಂಬಾಣೆ, ಮಧ್ಯಾಹ್ನ 12 ಗಂಟೆಗೆ ಕುಂದಚೇರಿ, 1 ಗಂಟೆಗೆ ಭಾಗಮಂಡಲ, 3ಗಂಟೆಗೆ ಅಯ್ಯಂಗೇರಿ, ಮಧ್ಯಾಹ್ನ 4 ಗಂಟೆಗೆ ಬಲ್ಲಮಾವಟಿ, 5ಗಂಟೆಗೆ ಕಕ್ಕಬೆ, ತಾ. 7 ರಂದು ಬೆಳಿಗ್ಗೆ 10ಗಂಟೆಗೆ ನಾಪೋಕ್ಲುವಿನಲ್ಲಿ ಬಹಿರಂಗ ಸಭೆ ಮತ್ತು ರೋಡ್ ಶೋ ಹಾಗೂ ಮಧ್ಯಾಹ್ನ 12 ಗಂಟೆಗೆ ಭಾಗಮಂಡಲದಲ್ಲಿ ಬಹಿರಂಗ ಸಭೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವು ಮಾದಪ್ಪ, ರೇಷ್ಮೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಪಿ. ರಮೇಶ್, ಕೆಪಿಸಿಸಿ ಹಿರಿಯ ಉಪಾಧ್ಯಕ್ಷ ಮಿಟ್ಟು ಚಂಗಪ್ಪ ಹಾಗೂ ತಾವು ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುವದಾಗಿ ಅವರು ತಿಳಿಸಿದ್ದಾರೆ.
ಕುಶಾಲನಗರ: ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯ ಮೆರತು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಎಲ್ಲರೂ ಒಂದಾಗಿ ದುಡಿಯಬೇಕಾಗಿದೆ ಎಂದು ವಕೀಲ ಹಾಗೂ ಕಾಂಗ್ರೆಸ್ ಮುಖಂಡರಾದ ಚಂದ್ರಮೌಳಿ ಕರೆ ನೀಡಿದ್ದಾರೆ. ಅವರು ಕುಶಾಲನಗರದ ರೈತ ಸಹಕಾರ ಭವನ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಬ್ಲಾಕ್ ಕಾರ್ಯಕರ್ತರ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಜ್ಯದಲ್ಲಿ ಕಳೆದ 5 ವರ್ಷಗಳಿಂದ ಸರಕಾರ ಕೈಗೊಂಡ ಜನಾಭಿವೃದ್ಧಿ ಯೋಜನೆಗಳ ಬಗ್ಗೆ ತಳಮಟ್ಟದ ಜನತೆಗೆ ಅರಿವು ಮೂಡಿಸುವ ಮೂಲಕ ಮತ್ತೆ ರಾಜ್ಯದ ಆಡಳಿತ ಕಾಂಗ್ರೆಸ್ ಪಕ್ಷಕ್ಕೆ ಒಲಿಯುವಂತೆ ಶ್ರಮಿಸಬೇಕು. ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಗಳಿಸಬೇಕಾಗಿದೆ ಎಂದರು.
ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಕೆ.ಪಿ.ಚಂದ್ರಕಲಾ ಮಾತನಾಡಿ, ಕಳೆದ 4 ದಶಕಗಳಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ಪಕ್ಷದ ಬಲವರ್ಧನೆಗೆ ಎಲ್ಲಾ ರೀತಿಯ ಸಹಕಾರ ನೀಡಿದ್ದೇನೆ. ಜಿಲ್ಲೆಯಲ್ಲಿ ಹಾಗೂ ರಾಜ್ಯಮಟ್ಟದಲ್ಲಿ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದು ಈ ಬಾರಿ ತನ್ನ ಗೆಲುವಿಗೆ ಎಲ್ಲರೂ ಕೈಜೋಡಿಸಬೇಕೆಂದು ಕೋರಿದರು.
ಕೆಪಿಸಿಸಿ ಸದಸ್ಯರು ಹಾಗೂ ಕೊಡಗು ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ವೆಂಕಪ್ಪಗೌಡ ಮಾತನಾಡಿ, ಜಿಲ್ಲೆಯಲ್ಲಿ ಈ ಬಾರಿ ಬದಲಾವಣೆ ಖಚಿತ ಎಂದರಲ್ಲದೆ ರಾಜ್ಯ ಮುಂದಿನ 5 ವರ್ಷಗಳ ಆಡಳಿತವನ್ನು ಕಾಂಗ್ರೆಸ್ ಕೈಗೆತ್ತಿಕೊಳ್ಳಲಿದೆ ಎಂದರು. ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್, ಪ್ರಮುಖರಾದ ವಿರೂಪಾಕ್ಷಯ್ಯ, ಲೋಕೇಶ್, ಜೈಜಗದೀಶ್, ಕುಡಾ ಅಧ್ಯಕ್ಷ ಬಿ.ಜಿ.ಮಂಜುನಾಥ್ ಗುಂಡುರಾವ್, ಚಂಗಪ್ಪ, ಕುಮುದಾ ಧರ್ಮಪ್ಪ, ಪುಷ್ಪಲತಾ ಬಿ.ಕೆ.ಚಿಣ್ಣಪ್ಪ, ಕೆ.ಕೆ.ಮಂಜುನಾಥ್ಕುಮಾರ್, ಜೋಸೆಫ್ ವಿಕ್ಟರ್ ಸೋನ್ಸ್, ಎಸ್.ಎನ್.ನರಸಿಂಹಮೂರ್ತಿ, ಜಿಪಂ ಸದಸ್ಯರುಗಳು, ಸ್ಥಳೀಯ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಸಭೆಯ ನಂತರ ಕುಶಾಲನಗರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ತೆರಳಿ ಅಭ್ಯರ್ಥಿ ಪರ ಮತಯಾಚಿಸಲಾಯಿತು.