ಮಡಿಕೇರಿ, ಮೇ 2: ಸಯ್ಯದ್ ಯಾಕೂಬ್ ಅಲಿಷಾ ಮತ್ತು ಸಯ್ಯದ್ ಗಾಯಬ್ ಅಲೀಷಾ ಖಾದ್ರಿ ಅವರ ದರ್ಗಾ ಎದುರು ಟ್ರಾನ್ಸ್‍ಫಾರ್ಮರ್ ಅಳವಡಿಸದಂತೆ ಮನವಿ ಸಲ್ಲಿಸಿದ್ದರೂ ಕೂಡ ಲೆಕ್ಕಿಸದೆ ಅದೇ ಜಾಗದಲ್ಲಿ ವಿದ್ಯುತ್ ಟ್ರಾನ್ಸ್‍ಫಾರ್ಮರ್‍ನ್ನು ಅಳವಡಿಸಲಾಗಿದೆ ಎಂದು ಮಸೀದಿ ಆಡಳಿತ ಮಂಡಳಿ ಪ್ರತಿಭಟಿಸಿದ ಘಟನೆ ನಡೆಯಿತು.

ನಗರದ ಮಖಾನ್ ಗಲ್ಲಿಯಲ್ಲಿ ಜಾಮಿಯಾ ಮಸೀದಿಗೆ ಸೇರಿದ ವಕ್ಫ್ ಜಾಗದಲ್ಲಿರುವ ದರ್ಗಾದ ಎದುರು ಅಲ್ಪವೇ ಅಂತರದಲ್ಲಿ ವಿದ್ಯುತ್ ಇಲಾಖೆ ಬೃಹತ್ ಟ್ರಾನ್ಸ್‍ಫಾರ್ಮರ್‍ವೊಂದನ್ನು ಅಳವಡಿಸಿದೆ. ಈ ಸ್ಥಳ ಜನನಿಬಿಡ ಪ್ರದೇಶವಾಗಿದ್ದು, ಈ ವ್ಯಾಪ್ತಿಯಲ್ಲಿ ಹಲವು ಕುಟುಂಬಗಳು ವಾಸವಿದೆ. ಹೀಗಿರುವಾಗ ಇಲ್ಲಿ ಟ್ರಾನ್ಸ್‍ಫಾರ್ಮರ್ ಅನ್ನು ಅಳವಡಿಸಲಾಗಿದ್ದು, ಅನಾಹುತಕ್ಕೆ ಆಹ್ವಾನ ನೀಡುವಂತಿದೆ ಎಂದು ಜಾಮೀಯಾ ಮಸೀದಿ ಆಡಳಿತ ಮಂಡಳಿ ಆಕ್ರೋಷ ವ್ಯಕ್ತಪಡಿಸಿತು. ಇಲ್ಲಿ ಟ್ರಾನ್ಸ್‍ಫಾರ್ಮರ್ ಅನ್ನು ಅಳವಡಿಸದಂತೆ ಮನವಿ ಮಾಡಿದ್ದರೂ, ಅದನ್ನು ನಿರ್ಲಕ್ಷಿಸಿರುವ ವಿದ್ಯುತ್ ಇಲಾಖೆಯ ಕ್ರಮ ಖಂಡನೀಯ. ಆದ್ದರಿಂದ ಪ್ರಸ್ತುತ ಅಳವಡಿಸಿರುವ ಟ್ರಾನ್ಸ್‍ಫಾರ್ಮರ್ ಅನ್ನು ಅಲ್ಲಿಂದ ಸ್ಥಳಾಂತರಗೊಳಿಸಬೇಕು. ಇಲ್ಲದಿದ್ದರೆ ಮುಂದಾಗುವ ಅನಾಹುತಗಳಿಗೆ ವಿದ್ಯುತ್ ಇಲಾಖೆಯೆ ಹೊಣೆ ಹೊರಬೇಕಾಗುತ್ತದೆ ಎಂದು ಮಸೀದಿಯ ಪ್ರಮುಖರು ಎಚ್ಚರಿಕೆಯಿತ್ತರು. ಸ್ಥಳಕ್ಕೆ ಭೇಟಿ ನೀಡಿದ ವಿದ್ಯುತ್ ಇಲಾಖೆಯ ಸಹಾಯಕ ಇಂಜಿನಿಯರ್ ಸಂಪತ್ ಅವರು ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳುವದಾಗಿ ಲಿಖಿತ ಭರವಸೆಯಿತ್ತ ಬಳಿಕ ಪ್ರತಿಭಟನೆಯನ್ನು ಹಿಂಪಡೆದುಕೊಳ್ಳಲಾಯಿತು.