ಮಡಿಕೇರಿ, ಮೇ 2: ಮಡಿಕೇರಿ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ವೇಳೆ ಇಲ್ಲಿನ ಮಹದೇವಪೇಟೆಯಲ್ಲಿ ಇಬ್ಬರು ನಗರಸಭಾ ಸದಸ್ಯರ ನಡುವೆ ಜಟಾಪಟಿಯೊಂದಿಗೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲಪಿದ ಪ್ರಸಂಗ ಘಟಿಸಿದೆ.
ಕಾಂಗ್ರೆಸ್ ಅಭ್ಯರ್ಥಿಯೊಂದಿಗೆ ಶನಿವಾರ ಬೆಳಿಗ್ಗೆ ಮಹದೇವಪೇಟೆಗೆ ನಗರಸಭಾ ಸದಸ್ಯ ಹೆಚ್.ಎಂ. ನಂದಕುಮಾರ್ ಹಾಗೂ ಇತರರು ತೆರಳುತ್ತಿದ್ದಂತೆಯೇ ಪಕ್ಷದ ನಾಮಕರಣ ಸದಸ್ಯ ಉದಯ ಕುಮಾರ್ ಎದುರಾಗಿ, ತನ್ನ ವಸತಿ ಪ್ರದೇಶಕ್ಕೆ ತನಗೇ ತಿಳಿಸದೆ ಮತ ಕೇಳಲು ಬಂದಿದ್ದೇಕೆ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಈ ವೇಳೆ ಏನೋ ಸಮಜಾಯಿಷಿಕೆ ನೀಡಲು ಮುಂದಾದ ನಂದಕುಮಾರ್ ವಿರುದ್ಧ ಹರಿಹಾಯ್ದಿರುವ ಉದಯಕುಮಾರ್, ನಗರದಲ್ಲಿ ಕಾಂಗ್ರೆಸ್ ಆಯೋಜಿಸುವ ಎಲ್ಲಾ ಕಾರ್ಯಕ್ರಮಗಳಲ್ಲಿ ತಪ್ಪಿಸಿಕೊಳ್ಳುತ್ತಿದ್ದ ನೀನೇಕೆ ಈಗ ಬಂದಿರುವೆ? ಎಂದು ಏರುದನಿಯಲ್ಲಿ ಮರು ವಾಗ್ದಾಳಿ ನಡೆಸಿದ್ದಾರೆ. ಈ ಸನ್ನಿವೇಶ ಬೀದಿ ರಂಪಾಟದೊಂದಿಗೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲಪುವದ್ದನ್ನು ಮನಗಂಡ ಕೆಲ ಕಾಂಗ್ರೆಸ್ ಪ್ರಮುಖರು ಕಸಿವಿಸಿಗೊಂಡು ಉಭಯ ಕಡೆ ಸಮಾಧಾನಗೊಳಿಸಿ, ಎಲ್ಲರೂ ಪಕ್ಷಕ್ಕಾಗಿ ಒಗ್ಗೂಡಿ ಕೆಲಸ ಮಾಡುವಂತೆ ಕಳಕಳಿ ವ್ಯಕ್ತಪಡಿಸಿದ್ದಾಗಿ ಗೊತ್ತಾಗಿದೆ.