*ಗೋಣಿಕೊಪ್ಪಲು, ಮೇ 2 : ನಾಗರಹೊಳೆ ವನ್ಯಜೀವಿ ವಿಭಾಗದ ಮತ್ತಿಗೋಡು ಸಾಕಾನೆ ಶಿಬಿರದಿಂದ ಎರಡು ಆನೆಗಳು ಉತ್ತರ ಪ್ರದೇಶಕ್ಕೆ ಸೋಮವಾರ ತೆರಳಿದವು. ಕಬಿನಿ (6), ನಕುಲ (7) ಉತ್ತರಪ್ರದೇಶಕ್ಕೆ ತೆರಳಿದ ಆನೆಗಳು. ಉತ್ತರಪ್ರದೇಶದ ದುದ್ವಾ ಹುಲಿ ಸಂರಕ್ಷಣಾ ಪ್ರದೇಶಕ್ಕೆ ಆನೆಗಳನ್ನು ಕೊಂಡೊಯ್ಯಲಾಯಿತು. ಈ ಎರಡೂ ಆನೆಗಳು ಶಿಬಿರದಲ್ಲಿಯೇ ಜನಿಸಿದ್ದವು. ಕಬಿನಿ ಸರಳಾ ಆನೆಯ ಮರಿಯಾಗಿದ್ದು, ನುಕಲ ಗಂಗೆಯ ಮರಿಯಾಗಿತ್ತು, ನಕುಲ ಆನೆಯ ಜತೆ ಮಾವುತ ಜೆ.ಕೆ.ರಾಮು, ಕಬಿನಿ ಆನೆಯ ಜತೆ ಜೆ.ಕೆ.ರಾಜು ತೆರಳಿದರು.ಮತ್ತಿಗೋಡು ಶಿಬಿರದಿಂದ ಒಂದು ವರ್ಷದ ಅವಧಿಯಲ್ಲಿ ಒಟ್ಟು 10 ಆನೆಗಳು ಹೊರ ರಾಜ್ಯಕ್ಕೆ ತರಳಿದಂತಾಗಿದೆ. ಕಳೆದ 6 ತಿಂಗಳ ಹಿಂದೆ ಜಾರ್ಖಾಂಡ್‍ಗೆ 3 ಆನೆ ತೆರಳಿದ್ದರೆ, ಪಶ್ಚಿಮಬಂಗಾಳಕ್ಕೆ ಕಳೆದ ವಾರ 5 ಆನೆಗಳು ತೆರಳಿದ್ದವು. ಈ ರಾಜ್ಯಗಳಲ್ಲಿ ಹುಲಿ ಮತ್ತು ಕಾಡಾನೆ ಸೇರಿದಂತೆ ವನ್ಯಜೀವಿಗಳ ಕಾಟ ಅತಿಯಾಗಿದೆ. (ಮೊದಲ ಪುಟದಿಂದ) ಇವುಗಳ ನಿಯಂತ್ರಣಕ್ಕೆ ನಾಗರಹೊಳೆ ವನ್ಯಜೀವಿ ವಿಭಾಗದಲ್ಲಿ ಹುಟ್ಟಿಬೆಳೆದ ಆನೆಗಳು ಪ್ರಬಲವಾಗಿವೆ ಎಂಬ ಕಾರಣದಿಂದ ರಾಜ್ಯದ ಆನೆಗಳಿಗೆ ಹೊರರಾಜ್ಯಗಳಿಂದ ಬಹಳ ಬೇಡಿಕೆ ಇದೆ. ರಾಷ್ಟ್ರೀಯ ವನ್ಯಜೀವಿ ಕಾಯ್ದೆ ಅನ್ವಯ ಎರಡು ರಾಜ್ಯಗಳ ಒಡಂಬಡಿಕೆ ಮೂಲಕ ಆನೆಗಳನ್ನು ಕಳುಹಿಸಿಕೊಡಲಾಗುತ್ತಿದೆ ಎಂದು ಮತ್ತಿಗೋಡು ಶಿಬಿರದ ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ತಿಳಿಸಿದರು.
ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಸೆರೆ ಹಿಡಿದಿದ್ದ ಆನೆಗಳು ಸೇರಿದಂತೆ ಮತ್ತಿಗೋಡು ಶಿಬಿರದಲ್ಲಿ ಒಟ್ಟು 37 ಆನೆಗಳಿದ್ದವು. ಇದೀಗ ಇವುಗಳ ಸಂಖ್ಯೆ 27ಕ್ಕೆ ಇಳಿದಿದೆ. ದಸರಾ ಆನೆಗಳಾದ ಬಲರಾಮ ಮತ್ತು ಅಭಿಮನ್ಯು ಇದೇ ಶಿಬಿರದಲ್ಲಿವೆ. -ಚಿತ್ರ ವರದಿ: ಎನ್.ಎನ್ ದಿನೇಶ್