ಸೋಮವಾರಪೇಟೆ, ಮೇ 3: ಅಮೇರಿಕಾದಲ್ಲಿ ಉದ್ಯೋಗದಲ್ಲಿರುವ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಈರ್ವರು ಪುತ್ರರು ಸೋಮವಾರಪೇಟೆಗೆ ಆಗಮಿಸಿದ್ದು, ತಮ್ಮ ತಂದೆ, ಬಿಜೆಪಿ ಅಭ್ಯರ್ಥಿಯಾಗಿರುವ ಎಂ.ಪಿ. ಅಪ್ಪಚ್ಚು ರಂಜನ್ ಅವರ ಪರ ಪ್ರಚಾರ ಕಾರ್ಯಕ್ಕೆ ಇಳಿದಿದ್ದಾರೆ.
ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ಇಂಜಿನಿಯರ್ ಆಗಿರುವ ರಂಜನ್ ಅವರ ಪ್ರಥಮ ಪುತ್ರ ಪೂವಯ್ಯ, ಕಿಡ್ನಿ ತಜ್ಞರಾಗಿರುವ ಡಾ. ಕಾರ್ಯಪ್ಪ ಅವರುಗಳು ಸೋಮವಾರಪೇಟೆ ಪಟ್ಟಣದಲ್ಲಿ ಶಾಸಕ ರಂಜನ್ರೊಂದಿಗೆ ಸಂಚರಿಸಿ ಬಿಜೆಪಿ ಪರ ಮತಯಾಚನೆ ಮಾಡಿದರು.
ಕಳೆದ ನಾಲ್ಕು ತಿಂಗಳ ಹಿಂದೆ ಸೋಮವಾರಪೇಟೆಯ ಸರ್ಕಾರಿ ಆಸ್ಪತ್ರೆ ಹಾಗೂ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಕಿಡ್ನಿ ಸಂಬಂಧಿತ ಖಾಯಿಲೆಗಳಿಂದ ಬಳಲುತ್ತಿರುವ ರೋಗಿಗಳನ್ನು ಉಚಿತ ತಪಾಸಣೆ ನಡೆಸುವ ಮೂಲಕ ಗಮನ ಸೆಳೆದಿದ್ದ ಡಾ. ಕಾರ್ಯಪ್ಪ ಅವರು ತನ್ನ ಸಹೋದರನೊಂದಿಗೆ ಪ್ರಚಾರ ಕಾರ್ಯಕ್ಕೆ ಧುಮುಕಿದ್ದು, ಚುನಾವಣೆ ಮುಗಿಯುವವರೆಗೂ ಇಲ್ಲೇ ಇರುವದಾಗಿ ತಿಳಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲೂ ತಂದೆಯ ಪರ ಪ್ರಚಾರ ಕಾರ್ಯ ಮಾಡಿದ್ದೇನೆ. ಕ್ಷೇತ್ರದಾದ್ಯಂತ ಸಂಚರಿಸಿ ಬಿಜೆಪಿ ಪರ ಮತಯಾಚನೆ ಮಾಡುತ್ತೇನೆ. ನರೇಂದ್ರ ಮೋದಿ ಅವರಿಂದಾಗಿ ಭಾರತಕ್ಕೆ ವಿಶ್ವದಲ್ಲೇ ವಿಶೇಷ ಗೌರವ ಲಭಿಸುತ್ತಿದ್ದು, ವಿದೇಶದಲ್ಲಿ ನೆಲೆಸಿರುವ ಮಂದಿಯೂ ಹೆಚ್ಚು ಗೌರವಾದರಗಳಿಗೆ ಪಾತ್ರರಾಗುತ್ತಿದ್ದಾರೆ ಎಂದು ಡಾ. ಕಾರ್ಯಪ್ಪ ನುಡಿದರು.