ಸೋಮವಾರಪೇಟೆ, ಮೇ 3: ಕೊಡಗಿನ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಐಎನ್ಟಿಯುಸಿ ಶ್ರಮಿಸಲಿದ್ದು, ಜೆಡಿಎಸ್ ಹಾಗೂ ಬಿಜೆಪಿಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ ಎಂದು ಐಎನ್ಟಿಯುಸಿ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಅಭ್ಯರ್ಥಿಗಳ ಪರವಾಗಿ ಎರಡು ಕ್ಷೇತ್ರಗಳಲ್ಲಿ ಐಎನ್ಟಿಯುಸಿ ಕೆಲಸ ನಿರ್ವಹಿಸಲಿದೆ. ಪಕ್ಷದ ಕಾರ್ಯಕರ್ತರು ಯಾವದೆ ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದರು. ಟಿಕೆಟ್ ಕೈತಪ್ಪಿರುವದರಿಂದ ನಾಪಂಡ ಮುತ್ತಪ್ಪ ಅವರು ಜೆಡಿಎಸ್ ಬೆಂಬಲಿಸಲಿದ್ದಾರೆ ಎಂದು ಜೆಡಿಎಸ್ನ ಕೆಲ ಮುಖಂಡರು ಹೇಳಿಕೊಂಡು ತಿರುಗುತ್ತಿದ್ದಾರೆ. ಮಡಿಕೇರಿ ಭಾಗದಲ್ಲಿ ಬಿಜೆಪಿಗೆ ಬೆಂಬಲಿಸಲಿದ್ದಾರೆ ಎಂಬ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಇಂತಹ ಅಪಪ್ರಚಾರಗಳಿಗೆ ಕಾರ್ಯಕರ್ತರು ಮನ್ನಣೆ ನೀಡಬಾರದು. ಕಾಂಗ್ರೆಸ್ ಪಕ್ಷದ ಎಲ್ಲಾ ವಿಭಾಗಗಳ ಕಾರ್ಯಕರ್ತರು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಪಕ್ಷದೊಳಗೆ ಇದ್ದ ಸಣ್ಣ ಪುಟ್ಟ ಆಂತರಿಕ ಭಿನ್ನಾಭಿಪ್ರಾಯಗಳನ್ನು ಪಕ್ಷದ ಹೈಕಮಾಂಡ್ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದರು.
ಪಕ್ಷದ ವಲಯ, ಬೂತ್ ಸಮಿತಿ ಸಕ್ರಿಯವಾಗಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಕ್ಷೇತ್ರದಲ್ಲಿ ಐಎನ್ಟಿಯುಸಿಯ 13,000ಕ್ಕೂ ಹೆಚ್ಚಿನ ಕಾರ್ಯಕರ್ತರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಪ್ರತೀ ಮನೆಗೂ ತೆರಳಿ ಸಿದ್ದರಾಮಯ್ಯನವರ ಸರ್ಕಾರದ ಸಾಧನೆಗಳನ್ನು ತಿಳಿಸುತ್ತಿದ್ದಾರೆ ಎಂದು ತಿಳಿಸಿದರು.
ಮಡಿಕೇರಿ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಕೆ.ಪಿ. ಚಂದ್ರಕಲಾ ಹಾಗೂ ವೀರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಅರುಣ್ ಮಾಚಯ್ಯ ಅವರ ಪರ ಐಎನ್ಟಿಯುಸಿ ಮತಯಾಚನೆ ಮಾಡುತ್ತಿದೆ. ಪಕ್ಷದಲ್ಲಿ 7 ಆಕಾಂಕ್ಷಿಗಳು ಟಿಕೆಟ್ ಬಯಸಿದ್ದು ನಿಜ, ಆದರೆ ಒಬ್ಬರಿಗೆ ಮಾತ್ರ ಅವಕಾಶ ಸಿಗುತ್ತದೆ. ಈಗ ಕಾಂಗ್ರೆಸ್ ಪಕ್ಷದ ಎಲ್ಲಾ ಅಭ್ಯರ್ಥಿಗಳು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ ಎಂದರು. ಪಕ್ಷವು ಮುಂದಿನ ದಿನಗಳಲ್ಲಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಯ ಜವಾಬ್ದಾರಿ ನೀಡುವ ಭರವಸೆ ನೀಡಿದೆ ಎಂದು ಮುತ್ತಪ್ಪ ಹೇಳಿದರು.
ಗೋಷ್ಠಿಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಕೆ.ಎಸ್. ಗಿರೀಶ್, ಉಪಾಧ್ಯಕ್ಷ ಕೆ.ಬಿ. ಲಿಂಗರಾಜು, ಪಕ್ಷದ ಪ್ರಮುಖರಾದ ಡಿ.ಆರ್. ಅಭಿಷೇಕ್, ಯತೀಶ್ ಕೊಡ್ಲಿಪೇಟೆ, ಉದಯಕುಮಾರ್, ಮಂಜುನಾಥ್ ಉಪಸ್ಥಿತರಿದ್ದರು.