ರಾಜಸ್ಥಾನ, ಯುಪಿಯಲ್ಲಿ ಮಳೆ : 100 ಸಾವು

ನವದೆಹಲಿ, ಮೇ 3: ರಾಜಸ್ಥಾನ ಹಾಗೂ ಉತ್ತರಪ್ರದೇಶದಲ್ಲಿ ಭಾರೀ ಗಾಳಿ, ಮಳೆ, ಧೂಳಿನ ಚಂಡಮಾರುತಕ್ಕೆ 100ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಭಾರೀ ಮಳೆ ಹಾಗೂ ಚಂಡಮಾರುತಕ್ಕೆ ಎರಡೂ ರಾಜ್ಯಗಳಲ್ಲಿ ಹಲವು ಮನೆಗಳು ಕುಸಿದಿವೆ. ಅಲ್ಲದೆ ಎರಡು ರಾಜ್ಯಗಳ ಜನತೆಗೆ ಸಾಕಷ್ಟು ತೊಂದರೆಯಾಗಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಉತ್ತರಪ್ರದೇಶದಲ್ಲಿ ಧೂಳಿನ ಚಂಡಮಾರುತಕ್ಕೆ 64 ಮಂದಿ ಬಲಿಯಾಗಿದ್ದರೆ, 160ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಈ ಪೈಕಿ ಆಗ್ರಾದಲ್ಲಿ ಅತೀ ಹೆಚ್ಚು ಅಂದರೆ ಮಕ್ಕಳು ಸೇರಿ 43 ಮಂದಿ ಮೃತಪಟ್ಟಿದ್ದಾರೆ. ರಾಜಸ್ಥಾನದ ಆಳ್ವಾರ್, ಭರತ್‍ಪುರ್ ಮತ್ತು ದೋಲ್ಪುರ್ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, ಮಳೆಯ ಆರ್ಭಟಕ್ಕೆ ಈ ವರೆಗೂ ವಿವಿಧ ಪ್ರಕರಣಗಳಲ್ಲಿ 31 ಮಂದಿ ಸಾವನ್ನಪ್ಪಿದ್ದಾರೆ. ಅಂತೆಯೇ ಧಾರಾಕಾರ ಮಳೆಯಿಂದಾಗಿ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಭಾರೀ ಗಾತ್ರದ ಮರಗಳೂ ಕೂಡ ನೆಲಕ್ಕುರುಳಿವೆ. ಮಳೆಯಿಂದಾಗಿ ರಾಜಸ್ಥಾನದಾದ್ಯಂತ ಬಹುತೇಕ ಜಿಲ್ಲೆಗಳಲ್ಲಿ ವಿದ್ಯುತ್ ಕಡಿತವಾಗಿದೆ. ರಾಜಧಾನಿ ದೆಹಲಿಯಿಂದ 164 ಕಿ.ಮೀ. ದೂರದಲ್ಲಿರುವ ಆಳ್ವಾರ್‍ನಲ್ಲೂ ಸಂಪೂರ್ಣ ವಿದ್ಯುತ್ ಕಡಿತವಾಗಿದೆ.

ಬಸ್‍ನಲ್ಲಿದ್ದ 27 ಪ್ರಯಾಣಿಕರ ಸಜೀವ ದಹನ

ಮೊತಿಹರಿ, ಮೇ 3: ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಮೊತಿಹರಿ ಪಟ್ಟಣದಲ್ಲಿ ಖಾಸಗಿ ಬಸ್ಸೊಂದು ರಸ್ತೆಯಿಂದ ಕೆಳಗೆ ಉರಿಳಿ ಬಿದ್ದು, ಬಳಿಕ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಟ 27 ಪ್ರಯಾಣಿಕರು ಸಜೀವ ದಹನವಾಗಿರುವ ದಾರುಣ ಘಟನೆ ಗುರುವಾರ ನಡೆದಿದೆ. ಇಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ 27 ಮಂದಿ ಮೃತಪಟ್ಟಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಸಚಿವ ದಿನೇಶ್ ಚಂದ್ರ ಯಾದವ್ ಅವರು ತಿಳಿಸಿದ್ದಾರೆ. ಬಸ್‍ನಲ್ಲಿ ಒಟ್ಟು 32 ಪ್ರಯಾಣಿಕರಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಮತ್ತು ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ. ಬೈಕ್ ಅನ್ನು ರಕ್ಷಿಸಲು ಹೋಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿರುವದಾಗಿ ಕೊಟ್ವಾ ಪೆÇಲೀಸ್ ಠಾಣಾ ಅಧಿಕಾರಿ ವಿಜಯ್ ಸಿನ್ಹಾ ಅವರು ತಿಳಿಸಿದ್ದಾರೆ.

ಶೇ. 100 ರಷ್ಟು ದಲಿತರ ಹಕ್ಕು ರಕ್ಷಣೆ

ನವದೆಹಲಿ, ಮೇ 3: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಎಸ್‍ಸಿ-ಎಸ್‍ಟಿ) ದೌರ್ಜನ್ಯ ತಡೆ ಕಾಯ್ದೆಯ ಕೆಲವು ನಿಯಮಗಳನ್ನು ಬದಲಿಸಿ ಈ ಹಿಂದೆ ತಾನು ನೀಡಿದ್ದ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ. ಎಸ್‍ಸಿ-ಎಸ್‍ಟಿ ಕಾಯ್ದೆ ಕುರಿತ ಆದೇಶವನ್ನು ಮರು ಪರಿಶೀಲಿಸಬೇಕು ಮತ್ತು ಈ ಕೂಡಲೇ ಆದೇಶಕ್ಕೆ ತಡೆ ನೀಡಬೇಕು ಎಂದು ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಕೆ. ಗೋಯಲ್ ಮತ್ತು ನ್ಯಾಯಮೂರ್ತಿ ಯು.ಯು. ಲಲಿತ್ ಅವರನ್ನೊಳಗೊಂಡ ಸುಪ್ರೀಂ ಪೀಠ, ಕೋರ್ಟ್ ನೀಡಿದ ಆದೇಶ ಶೇ. 100 ರಷ್ಟು ದಲಿತರ ಹಕ್ಕು ರಕ್ಷಣೆ ಮತ್ತು ಅಪರಾಧಿಗಳಿಗೆ ಶಿಕ್ಷೆ ನೀಡುವ ಪರವಾಗಿದೆ ಎಂದು ಹೇಳಿದೆ. ಸರ್ಕಾರದ ಪರವಾಗಿ ವಾದ ಮಂಡಿಸಿದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು, ಶಾಸಕಾಂಗ ಜಾರಿಗೆ ತಂದ ನಿಯಮಗಳಿಗೆ ವಿರುದ್ಧ ಸುಪ್ರೀಂ ಕೋರ್ಟ್ ನಿಯಮ ಅಥವಾ ಮಾರ್ಗದರ್ಶಿಗಳನ್ನು ರೂಪಿಸುವಂತಿಲ್ಲ ಎಂದು ವಾದಿಸಿದರು. ಕೋರ್ಟ್ ತೀರ್ಪಿನಿಂದಾಗಿ ದೇಶದಲ್ಲಿ ಜೀವ ಹಾನಿಯಾಗಿದೆ, ಗಲಭೆ, ಕೋಪ, ಅಸಮಾಧಾನ ಮತ್ತು ಸಾಮರಸ್ಯಕ್ಕೆ ಧಕ್ಕೆಯಾಗಿದೆ ಎಂದು ವೇಣುಗೋಪಾಲ್ ಅವರು ಕೋರ್ಟ್‍ಗೆ ತಿಳಿಸಿದರು. ಆದರೆ ಸರ್ಕಾರದ ವಾದವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಕೋರ್ಟ್, ಮಾ. 20 ರ ತನ್ನ ಆದೇಶವನ್ನು ಬಲವಾಗಿ ಸಮರ್ಥಿಸಿಕೊಂಡಿದೆ.

ಇಂದು ಬಿಜೆಪಿ ಪ್ರಣಾಳಿಕೆ ಬಿಡುಗಡೆ

ಬೆಂಗಳೂರು, ಮೇ 3: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ರೈತರ ಓಲೈಕೆಗೆ ಮುಂದಾಗಿದ್ದು, ಆಚ್ಛೇ ದಿನ್ ಭರವಸೆ ನೀಡಿದ್ದಾರೆ. ತಾ. 12 ರಂದು ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್‍ಗಳಲ್ಲಿರುವ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಾಗುವದು ಎಂದು ಯಡಿಯೂರಪ್ಪ ಅವರು ಹೇಳಿದ್ದಾರೆ. ಮತ್ತೊಂದು ಕಡೆ 2022 ರ ವೇಳೆಗೆ ರೈತರ ಆದಾಯ ಡಬಲ್ ಮಾಡಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ಬಿಜೆಪಿ ಚುನಾವಣಾ ಪ್ರಣಾಳಿಕೆ ತಾ. 4 ರಂದು ಬಿಡುಗಡೆಯಾಗುತ್ತಿದ್ದು, ಇದರಲ್ಲಿ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ ರೈತರ ಸಾಲ ಮನ್ನಾ ಸೇರಿದಂತೆ ಹಲವು ಭರವಸೆಗಳನ್ನು ನೀಡುವ ಸಾಧ್ಯತೆ ಇದೆ. ನಿನ್ನೆ ಶಿವಮೊಗ್ಗದಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಬಿ.ಎಸ್.ವೈ., ರೈತರ ಸಾಲ ಮನ್ನಾ ಮಾಡುವದು ನನ್ನ ಮೊದಲ ಆದ್ಯತೆಯಾಗಿದ್ದು, ಅಧಿಕಾರಕ್ಕೆ ಬಂದ ತಕ್ಷಣ ಸಾಲ ಮನ್ನಾ ಮಾಡಲಾಗುವದು ಎಂದು ತಿಳಿಸಿದರು.

ಮಾನವೀಯ ದೃಷ್ಟಿಯಿಂದ ಖೈದಿ ಬಿಡುಗಡೆ

ಇಸ್ಲಾಮಾಬಾದ್, ಮೇ 3: ಪಾಕಿಸ್ತಾನದಲ್ಲಿ ತೀವ್ರ ಅನಾರೋಗ್ಯ ಪೀಡಿತನಾಗಿರುವ ಭಾರತೀಯ ಖೈದಿಯನ್ನು ಮಾನವೀಯತೆ ದೃಷ್ಟಿಯಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ಪಾಕ್ ವಿದೇಶಾಂಗ ಕಾರ್ಯಾಲಯ ಘೋಷಣೆ ಮಾಡಿದೆ. ಈ ಬಗ್ಗೆ ಪಾಕಿಸ್ತಾನ ವಿದೇಶಾಂಗ ಕಾರ್ಯಾಲಯ ಗುರುವಾರ ಹೇಳಿಕೆ ಬಿಡೆಗಡೆ ಮಾಡಿದ್ದು, ಪಾಕಿಸ್ತಾನ ಜೈಲಿನಲ್ಲಿರುವ ಭಾರತೀಯ ಖೈದಿ ಜತೀಂದ್ರ ಎಂಬಾತನನ್ನು ಮಾನವೀಯತೆ ಆಧಾರದ ಮೇರೆಗೆ ಬಿಡುಗಡೆ ಮಾಡಲಾಗುತ್ತದೆ. ಮೂಲಗಳ ಪ್ರಕಾರ ಜತೀಂದ್ರ ರಕ್ತ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಇದೇ ಕಾರಣಕ್ಕೆ ಮಾನವೀಯತೆ ಆಧಾರದ ಮೇಲೆ ಪಾಕಿಸ್ತಾನ ಜತೀಂದ್ರ ಅವರನ್ನು ಬಿಡುಗಡೆ ಮಾಡಲಾಗುತ್ತಿದೆ ಎನ್ನಲಾಗಿದೆ. ಅಂತೆಯೇ ಪಾಕಿಸ್ತಾನ ಸರ್ಕಾರಿ ಮೂಲಗಳು ತಿಳಿಸಿರುವಂತೆ 2014ರಲ್ಲಿ ಜತೀಂದ್ರನನ್ನು ಬಂಧಿಸಲಾಗಿತ್ತಂತೆ. ಅಕ್ರಮವಾಗಿ ಪಾಕಿಸ್ತಾನ ಗಡಿ ಪ್ರವೇಶ ಮಾಡಿದ್ದರಿಂದ ಆತನನ್ನು ಬಂಧಿಸಲಾಗಿತ್ತು.

ಲೈಂಗಿಕ ಕಿರುಕುಳ : ಮದರಸ ಶಿಕ್ಷಕನ ಬಂಧನ

ಹೈದರಾಬಾದ್, ಮೇ 3: ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮದರಸಾದ 35 ವರ್ಷದ ಶಿಕ್ಷಕರೊಬ್ಬರನ್ನು ಗುರುವಾರ ಹೈದರಾಬಾದ್ ಪೆÇಲೀಸರು ಬಂಧಿಸಿದ್ದಾರೆ. ಬಂಧಿತ ಮದರಸಾ ಶಿಕ್ಷಕ ರೆಹಮಾನ್ ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಪೆÇಲೀಸರು ಕೋರ್ಟ್‍ಗೆ ಹಾಜರುಪಡಿಸಿದ್ದಾರೆ. ವಿಚಾರಣೆ ನಡೆಸಿದ ಕೋರ್ಟ್ ರೆಹಮಾನ್‍ನನ್ನು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. ರೆಹಮಾನ್ ಅಪ್ರಾಪ್ತ ವಿದ್ಯಾರ್ಥಿಗಳಿಗೆ ನಿರಂತರ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದ್ದು, ಇತ್ತೀಚಿಗೆ ಕೆಲ ವಿದ್ಯಾರ್ಥಿಗಳು ಮದರಸಾಗೆ ತೆರಳು ನಿರಾಕರಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೆÇಲೀಸರು ತಿಳಿಸಿದ್ದಾರೆ. ಪೆÇೀಷಕರು ನೀಡಿದ ದೂರಿನ ಆಧಾರದ ಮೇಲೆ ಶಿಕ್ಷಕನ ವಿರುದ್ಧ ಪೆÇಸ್ಕೊ ಮತ್ತು ಇತರೆ ಐಪಿಸಿ ಸೆಕ್ಷನ್‍ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪತ್ರಕರ್ತರ ಹತ್ಯೆ ಶೇ. 57 ರಷ್ಟು ಏರಿಕೆ

ಜಿನೇವಾ, ಮೇ 3: ಜಾಗತಿಕವಾಗಿ ಪತ್ರಕರ್ತರ ಹತ್ಯೆ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಈ ವರ್ಷ ಒಟ್ಟು 18 ದೇಶದಲ್ಲಿ 44 ಪತ್ರಕರ್ತರು ಹತ್ಯೆಯಾಗಿದ್ದಾರೆ. ಕಳೆದ ವರ್ಷಾವಧಿಗೆ ಹೋಲಿಸಿದರೆ 2018 ರ ಮೊದಲ ನಾಲ್ಕು ತಿಂಗಳಲ್ಲಿ 28 ರಷ್ಟು ಹೆಚ್ಚು ಪತ್ರಕರ್ತರ ಹತ್ಯೆಯಾಗಿದೆ ಎಂದು ಜಿನೀವಾ ಮೂಲದ ಪ್ರೆಸ್ ಎಂಬ್ಲಮ್ ಕ್ಯಾಂಪೇನ್ (ಪಿಇಸಿ) ವರದಿ ಮಾಡಿದೆ. ಮೇ 3 ವಿಶ್ವ ಪತ್ರಿಕಾ ಸ್ವಾತಂತ್ರ ದಿನ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಪತ್ರಕರ್ತರ ಹತ್ಯೆ ಪ್ರಮಾಣ ಹೆಚ್ಚಳವಾಗಿರುವದನ್ನು ಕಂಡರೆ ಆತಂಕವಾಗುತ್ತದೆ. ಜನವರಿಯಿಂದ ಏಪ್ರಿಲ್‍ವರೆವಿಗೆ ಹತ್ಯೆಗೀಡಾದ ಪತ್ರಕರ್ತರ ಸಂಖ್ಯೆಯಲ್ಲಿ ಕಳೆದ ಸಾಲಿಗಿಂತ ಶೇ. 57 ರಷ್ಟು ಏರಿಕೆಯಾಗಿದೆ. ಏಪ್ರಿಲ್ 30 ರಂದು ಅಫ್ಘಾನಿಸ್ಥಾನ ಕಾಬೂಲ್ ಬಾಂಬ್ ಸ್ಫೋಟದಲ್ಲಿ ಒಂಭತ್ತು ಪತ್ರಕರ್ತರ ಸಾವು ನಿಜಕ್ಕೂ ಅಚ್ಚರಿ ತಂದಿದೆ. ಪಿಇಸಿನ ಅಧಿಕಾರಿಗಳು ಹೇಳಿದ್ದಾರೆ. ಪತ್ರಕರ್ತರನ್ನೇ ಗುರಿಯಾಗಿಸಿಕೊಂಡು ನಡೆಸುವ ಭಯೋತ್ಪಾದಕ ಧಾಳಿಯನ್ನು ಪಿಇಸಿ ಖಂಡಿಸುತ್ತದೆ ಅವರು ಹೇಳಿದರು.