ಚೆಟ್ಟಳ್ಳಿ, ಮೇ 3: ಕೊಡಗಿನಲ್ಲಿ ಕೊಡವ ಕುಟುಂಬಗಳ ನಡುವೆ ನಡೆಯುವ ಹಾಕಿ ನಮ್ಮೆಯು ದೇಶವಲ್ಲದೆ ವಿದೇಶದಲ್ಲಿಯೂ ಪ್ರಖ್ಯಾತಿ ಪಡೆದಿರುವ ಸಂಗತಿ ಎಲ್ಲರಿಗೂ ತಿಳಿದ ವಿಷಯವೇ ಸರಿ. ಆದರೆ ಅಂತಹ ಬೃಹತ್ ಪಂದ್ಯಾಟವನ್ನು ಆಯೋಜಿಸಲು ಕೇವಲ ಒಂದಿಬ್ಬರಿಂದ ಸಾಧ್ಯವಿಲ್ಲ ಎನ್ನುವದು ಹಲವು ಜನರಿಗೆ ತಿಳಿದಿರುವದಿಲ್ಲ. ಕೊಡವ ಕುಟುಂಬದ ಹಾಕಿ ನಮ್ಮೆಯನ್ನು ಈ ಬಾರಿ ಕುಲ್ಲೇಟಿರ ಕುಟುಂಬ ಆಯೋಜಿಸಿದ್ದು, ಬರೋಬ್ಬರಿ ಮುನ್ನೂರ ಮೂವತ್ತ ಮೂರು ಕುಟುಂಬ ತಂಡಗಳು ಭಾಗವಹಿಸಿ ದಾಖಲೆಯತ್ತ ಸಾಗಿದೆ.

ಒಂದು ಹಾಕಿ ನಮ್ಮೆಯು ಸರಾಗವಾಗಿ ನಡೆಯಬೇಕಾದರೆ ಮುಖ್ಯವಾಗಿ ಮೈದಾನವು ಒಂದು ಪ್ರಮುಖ ಪಾತ್ರ ವಹಿಸುತ್ತದೆ, ಅದನ್ನು ಒಂದು ಬಾರಿ ನಿರ್ಮಿಸಿದರೆ ಸಾಲದು. ಅದನ್ನು ಪ್ರತಿ ದಿವಸವೂ ಸ್ವಚ್ಛಗೊಳಿಸಿ ನೀರು ಹಾಯಿಸಿ ರೋಲರ್‍ನಿಂದ ರೋಲ್ ಮಾಡಿ ರೇಖೆಗಳನ್ನು ಗುರುತಿಸಬೇಕು ಮತ್ತು ಪ್ರತಿ ಪಂದ್ಯಾಟಕೊಮ್ಮೆ ಮೈದಾನವನ್ನೊಮ್ಮೆ ಪರಿಶೀಲಿಸಿ ರೇಖೆಗಳನ್ನು ಸ್ವಚ್ಛಗೊಳಿಸಬೇಕಾಗುತ್ತದೆ. ಅಂತಹ ಕಾರ್ಯವನ್ನು ಕಳೆದ ಇಪ್ಪತ್ತು ವರ್ಷದಿಂದ ತೆರೆಮರೆಯಲ್ಲಿ ಸದ್ದಿಲ್ಲದೇ ನಿರ್ವಹಿಸುತ್ತಿರುವವರು ಕೊಡಗಿನ ಪಾಲಿಬೆಟ್ಟದ ಟಾಟಾ ಕಾಫಿ ಸಂಸ್ಥೆಯ ಮೆಕ್ಯಾನಿಕ್ ಹುದ್ದೆಯಲ್ಲಿರುವ ಹೆಚ್.ಎ. ರಾಜುರವರು ಎಂದರೆ ತಪ್ಪಾಗಲಾರದು.

ರಾಜು ಅವರು ಮೂಲತ ಚಾಮರಾಜ ನಗರ ಜಿಲ್ಲೆಯಲ್ಲಿ ಸಿದ್ದಮ್ಮ ಹಾಗೂ ಮಾದ ದಂಪತಿಗಳ ಪುತ್ರನಾಗಿ ಜನಿಸಿ ಸಾವಿರದ ಒಂಬೈನೂರ ಎಪ್ಪತ್ತಾರರಲ್ಲಿ ಉದ್ಯೋಗ ಅರಸಿ ಕೊಡಗಿಗೆ ಬಂದು ಟಾಟಾ ಕಾಫಿ ಸಂಸ್ಥೆಯಲ್ಲಿ ನೆಲೆಯನ್ನು ಕಂಡುಕೊಂಡವರು. ಅವರು ಕೊಡಗಿಗೆ ಬಂದು ಕೊಡಗಿನ ಆಚಾರ-ವಿಚಾರಕ್ಕೆ ಮಾರುಹೋಗಿ ಅವರು ಹಾಗೂ ಅವರ ಪತ್ನಿಯಾದ ಸಿದ್ಧರಾಜಮ್ಮನವರು ಕೊಡವ ಭಾಷೆಯನ್ನು ಕಲಿತು ತಮ್ಮ ಮಕ್ಕಳಾದ ಮಮತಾ ಹಾಗೂ ಮೋಹನ್ ಕುಮಾರವರಿಗೂ ಭಾಷೆಯನ್ನು ಇವತ್ತು ಮನೆಯಲ್ಲಿ ಹಾಗೂ ಹೊರಗಡೆ ಕೊಡವ ಭಾಷೆಯನ್ನು ತಮ್ಮ ಆಡುಭಾಷೆಯನ್ನಾಗಿಸಿಕೊಂಡಿದ್ದಾರೆ.

ಮೂಲತಃ ಮೃದು ಸ್ವಭಾವದ ವ್ಯಕ್ತಿತ್ವ ಹೊಂದಿರುವ ರಾಜು ಮೈದಾನದ ಬಗ್ಗೆ ಪ್ರತಿ ಇಂಚನ್ನು ಬಲ್ಲವರಾಗಿದ್ದಾರೆ. ಪ್ರತಿದಿನ ಬೆಳಿಗ್ಗೆ ಆರು ಗಂಟೆಗೆ ಮೈದಾನಕ್ಕೆ ಹಾಜರಾಗಿ ಅಲ್ಲಿನ ಜನರ ಜೊತೆ ಬೆರೆತು, ಮೈದಾನದ ಏರುಪೇರುಗಳನ್ನು ಗುರುತಿಸಿ ತಮ್ಮ ರೋಲರ್‍ನಿಂದ ರೋಲ್ ಮಾಡಿ ನೀರನ್ನು ಹಾಯಿಸಿ ಸಮತಟ್ಟು ಮಾಡಿ ರೇಖೆಗಳನ್ನು ಎಳೆದು, ಮೂರು ಮೈದಾನವನ್ನು ಕೇವಲ ಎರಡು ಗಂಟೆಯ ಅವಧಿಯಲ್ಲಿ ಸಿದ್ಧಮಾಡಿಬಿಡುತ್ತಾರೆ. ಅಲ್ಲಿಂದ ಸುಮ್ಮನಿರದ ರಾಜು ಅವರು ಮೂರು ಮೈದಾನಕ್ಕೂ ಭೇಟಿಯನ್ನು ಕೊಟ್ಟು ದಿನದ ಪಂದ್ಯಾಟದ ಉದ್ದಕ್ಕೂ ಮೈದಾನದ ಮೇಲೆ ನಿಗಾವಿರಿಸುತ್ತಾರೆ. ಇದೆಲ್ಲದರ ಮಧ್ಯೆ ತಮ್ಮ ಗೆಳೆಯರನ್ನು ಮಾತನಾಡಿಸಿಕೊಂಡು, ಅವರ ಕ್ಷೇಮ ಲಾಭವನ್ನು ವಿಚಾರಿಸಿಕೊಂಡು ಒಂದು ನಿಮಿಷವೂ ಸುಮ್ಮನೆ ಕುಳಿತಿರದ ರಾಜುವನ್ನು ಮೈದಾನದಲ್ಲಿ ಒಂದು ದಿವಸದ ಮಟ್ಟಿಗೆ ಕಾಣದಿದ್ದರು ಏನೋ ಮೈದಾನದಲ್ಲಿ ಕಳೆದುಕೊಂಡಂತೆ ಅವರನ್ನು ತಿಳಿದಿರುವವರಿಗೆ ಭಾಸವಾಗುವದರಲ್ಲಿ ಎರಡು ಮಾತಿಲ್ಲ.