ಮಡಿಕೇರಿ, ಮೇ 3: ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಕುಟುಂಬಗಳ ನಡುವೆ ಕೊಡಗು ಗೌಡ ಯುವ ವೇದಿಕೆಯಿಂದ ಇಲ್ಲಿನ ಜ. ತಿಮ್ಮಯ್ಯ ಅವರ ಬಾಣೆಯಲ್ಲಿ ನಡೆಯುತ್ತಿರುವ ಚೆರಿಯಮನೆ ಕ್ರಿಕೆಟ್ ಹಬ್ಬದ ಕ್ವಾರ್ಟರ್ ಫೈನಲ್ ಹಾಗೂ ಸೆಮಿಫೈನಲ್ ಹಂತದ ಪಂದ್ಯಾವಳಿಗಳು ತಾ. 4 ರಂದು (ಇಂದು) ನಡೆಯಲಿವೆ. ಈಗಾಗಲೇ ಉಳುವಾರನ ತಂಡ ಸೆಮಿಫೈನಲ್‍ಗೇರಿದ್ದು, ದಂಬೆಕೋಡಿ, ತೆಕ್ಕಡೆ, ಅಯ್ಯಂಡ್ರ, ತಳೂರು ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ.

ಇಂದು ನಡೆದ ಪಂದ್ಯಾವಳಿಯಲ್ಲಿ ಉಳುವಾರನ ತಂಡ 5 ವಿಕೆಟ್‍ಗೆ 106 ರನ್ ಗಳಿಸಿದರೆ, ಮುದಿಯಾರು ತಂಡ 9 ವಿಕೆಟ್ ಕಳೆದುಕೊಂಡು 47 ರನ್ ಗಳಿಸಿ 59 ರನ್‍ಗಳ ಅಂತರದಿಂದ ಸೋಲನುಭವಿಸಿತು. ಉಳುವಾರನ ಮುರಳಿ 40 ರನ್ ಗಳಿಸಿ ಗಮನ ಸೆಳೆದರು. ಮುದಿಯಾರು ಮಿಥುನ್ ಉತ್ತಮ ಆಟಗಾರ ಪ್ರಶಸ್ತಿ ಪಡೆದರು. ಸೆಟ್ಟೆಜನ ತಂಡ 4 ವಿಕೆಟ್‍ಗೆ 61 ರನ್ ಗಳಿಸಿದರೆ, ಪೊನ್ನಚನ ತಂಡ 9 ವಿಕೆಟ್‍ಗೆ 50 ರನ್ ಗಳಿಸಿ 11 ರನ್‍ಗಳ ಅಂತರದಿಂದ ಸೋಲನುಭವಿಸಿತು. ಕುದುಪಜೆ ತಂಡ 5 ವಿಕೆಟ್‍ಗೆ 78 ರನ್ ಗಳಿಸಿದರೆ, ಕೂಡಕಂಡಿ ತಂಡ 9 ವಿಕೆಟ್ ಕಳೆದುಕೊಂಡು 33 ರನ್ ಗಳಿಸಿ 45 ರನ್‍ಗಳ ಅಂತರದಿಂದ ಸೋಲನುಭವಿಸಿತು. ಕೂಡಕಂಡಿ ರಾಜೇಶ್ ಉತ್ತಮ ಆಟಗಾರ ಪ್ರಶಸ್ತಿ ಪಡೆದರು.

ನೆರಿಯನ ತಂಡ 6 ವಿಕೆಟ್‍ಗೆ 63 ರನ್ ಗಳಿಸಿದರೆ, ಬೈಮನ ಬಿ ತಂಡ 3 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ಉಳುವಾರನ ತಂಡ 10 ವಿಕೆಟ್ ಕಳೆದುಕೊಂಡು 87 ರನ್ ಗಳಿಸಿದರೆ, ಬೊಳ್ಳುಮಾನಿ ತಂಡ 5 ವಿಕೆಟ್‍ಗೆ 70 ರನ್ ಗಳಿಸಿ, 17 ರನ್‍ಗಳ ಅಂತರದಿಂದ ಸೋಲನುಭವಿಸಿತು. ಬೊಳ್ಳುಮಾನಿ ದರ್ಶನ್ ಉತ್ತಮ ಆಟಗಾರ ಪ್ರಶಸ್ತಿ ಪಡೆದರು. ದಂಬೆಕೋಡಿ ತಂಡ 3 ವಿಕೆಟ್‍ಗೆ 110 ರನ್‍ಗಳನ್ನು ಕಲೆ ಹಾಕಿದರೆ, ಬೊಳ್ತಜ್ಜಿ ತಂಡ 3 ವಿಕೆಟ್‍ಗೆ 45 ರನ್ ಗಳಿಸಿ 65 ರನ್‍ಗಳ ಅಂತರದಿಂದ ಸೋಲನುಭವಿಸಿತು. ದಂಬೆಕೋಡಿ ಜಗನ್ 7 ಸಿಕ್ಸರ್ ನೆರವಿನೊಂದಿಗೆ 55 ರನ್ ಗಳಿಸಿ ಗಮನ ಸೆಳೆದರು.

ಕೊಂಬಾರನ ತಂಡ 7 ವಿಕೆಟ್‍ಗೆ 42 ರನ್ ಗಳಿಸಿದರೆ, ಅಯ್ಯಂಡ್ರ ತಂಡ 2 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ಕೊಂಬಾರನ ಹರ್ಷ ಉತ್ತಮ ಆಟಗಾರ ಪ್ರಶಸ್ತಿ ಪಡೆದರು. ಕಳೆದ ಬಾರಿಯ ಚಾಂಪಿಯನ್ ತಳೂರು ತಂಡ 2 ವಿಕೆಟ್‍ಗೆ 102 ರನ್ ಗಳಿಸಿದರೆ, ಬಂಗಾರಕೋಡಿ ತಂಡ 6 ವಿಕೆಟ್‍ಗೆ 48 ರನ್ ಮಾತ್ರ ಗಳಿಸಿ 54 ರನ್‍ಗಳ ಅಂತರದಿಂದ ಸೋಲನುಭವಿಸಿತು. ತಳೂರು ವಿಕ್ಕಿ 8 ಸಿಕ್ಸರ್‍ಗಳ ನೆರವಿನೊಂದಿಗೆ 59 ರನ್ ಗಳಿಸಿ ಗಮನ ಸೆಳೆದರು. ಬಂಗಾರಕೋಡಿ ರಕ್ಷಿತ್ ಉತ್ತಮ ಆಟಗಾರ ಪ್ರಶಸ್ತಿ ಪಡೆದರು.

ತೆಕ್ಕಡೆ ತಂಡ 8 ವಿಕೆಟ್‍ಗೆ 67 ರನ್ ಗಳಿಸಿದರೆ, ಊರುಬೈಲು ತಂಡ 5 ವಿಕೆಟ್‍ಗೆ 52 ರನ್ ಗಳಿಸಿ 15 ರನ್‍ಗಳ ಅಂತರದಿಂದ ಸೋಲನುಭವಿಸಿತು. ಉಳುವಾರನ ಹಾಗೂ ಬೈಮನ ಬಿ ತಂಡಗಳ ನಡುವೆ ನಡೆದ ಮೊದಲ ಕ್ವಾರ್ಟರ್ ಫೈನಲ್ ಪಂದ್ಯಾವಳಿಯಲ್ಲಿ ಉಳುವಾರನ ತಂಡ 3 ವಿಕೆಟ್‍ಗೆ 64 ರನ್ ಗಳಿಸಿತು. ಉತ್ತರವಾಗಿ ಆಡಿದ ಬೈಮನ ಬಿ ತಂಡ 4 ವಿಕೆಟ್ ಕಳೆದುಕೊಂಡು 59 ರನ್ ಗಳಿಸಿ 5 ರನ್‍ಗಳ ಅಂತರದಿಂದ ಸೋಲನುಭವಿಸಿತು. ಬೈಮನ ನಿಖೇಶ್ ಉತ್ತಮ ಆಟಗಾರ ಪ್ರಶಸ್ತಿ ಪಡೆದರು.

ಎರಡನೇ ಕ್ವಾರ್ಟರ್‍ನಲ್ಲಿ ಕುದುಪಜೆ ತಂಡ 7 ವಿಕೆಟ್‍ಗೆ 65 ರನ್ ಗಳಿಸಿದರೆ, ಸೆಟ್ಟೇಜನ ತಂಡ 7 ವಿಕೆಟ್‍ಗೆ 53 ರನ್ ಗಳಿಸಿ 12 ರನ್‍ಗಳ ಅಂತರದಿಂದ ಸೋಲನುಭವಿಸಿತು. ಕುದುಪಜೆ ಸಚಿನ್ 4 ಸಿಕ್ಸರ್ ಬಾರಿಸಿ 41 ರನ್ ಗಳಿಸಿ ಗಮನ ಸೆಳೆದರು.