ವೀರಾಜಪೇಟೆ, ಮೇ 3: ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳ 269ಮತಗಟ್ಟೆಗಳ ಮತಯಂತ್ರಗಳು ಹಾಗೂ ನಿಗಧಿತ ಸಂಖ್ಯೆಗಳು ಮಹತ್ವದಿಂದ ಕೂಡಿದ್ದು ಆಯಾ ಮತಗಟ್ಟೆಗಳ ಸಂಖ್ಯೆಯಂತೆ(ಕೋಡ್) ಮತಯಂತ್ರ, ವಿವಿಪ್ಯಾಟ್, ಹಾಗೂ ಕಂಟ್ರೋಲ್ ಯೂನಿಟ್‍ಗಳನ್ನು ಮತಗಟ್ಟೆ ಅಧಿಕಾರಿಗಳಿಗೆ ವಿತರಿಸಲಾಗುತ್ತದೆ ಇವುಗಳ ಸಂಖ್ಯೆಯನ್ನು ರಾಜಕೀಯ ಪಕ್ಷಗಳ ಬೂತ್ ಏಜೆಂಟರಾಗುವವರು ಖಾತರಿಪಡಿಸಿಕೊಳ್ಳಬಹುದು. ಮತ ಎಣಿಕೆಯಂದು ಮತ ಯಂತ್ರಗಳನ್ನು ಪರಿಶೀಲಿಸಿ ಖಾತರಿಪಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಚುನಾವಣೆ ಯಲ್ಲಿ ಪಾರದರ್ಶ ಕತೆಯನ್ನು ಕಾಯ್ದುಕೊಳ್ಳಬಹುದಾಗಿದೆ ಎಂದು ಚುನಾವಣಾ ಆಯೋಗದ ವೀಕ್ಷಕ ಶ್ರೀಕಾಂತ್ ಹೇಳಿದರು.ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ 6ಮಂದಿ ಅಭ್ಯರ್ಥಿಗಳು, ಏಜೆಂಟರುಗಳು, ಹಾಗೂ ಪ್ರತಿನಿಧಿಗಳ ಸಭೆಯಲ್ಲಿ ಮತಯಂತ್ರ, ಅಂತಿಮವಾಗಿ ಅಳವಡಿಸಿರುವ ಸಂಖ್ಯೆ ಕುರಿತು ಶ್ರೀಕಾಂತ್ ವಿವರವಾದ ಮಾಹಿತಿ ನೀಡಿದರು.
ಇಲ್ಲಿನ ಚುನಾವಣಾಧಿಕಾರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಮತಯಂತ್ರಗಳಿಗೆ ನಿಗಧಿತ ಸಂಖ್ಯೆಗಳನ್ನು ನೀಡಿದ್ದು ಆಯಾ ಮತಗಟ್ಟೆಗಳಿಗೆ ಇದು ಚುನಾವಣಾ ದಿನದಂದು ತಲಪಲಿದೆ. ಮತಗಟ್ಟೆಗಳಲ್ಲಿ ಮತದಾನದ ಸಂದರ್ಭದಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡುಬಂದರೆ ತಕ್ಷಣ ಬದಲಾವಣೆಗೆ ಅವಕಾಶವಿದೆ. ಇದಕ್ಕಾಗಿ 269 ಮತಗಟ್ಟೆಗಳಿಗೆ 330 ಮತಯಂತ್ರಗಳನ್ನು ಒದಗಿಸಲಾಗಿದೆ. ಪ್ರತಿ ಕ್ಷೇತ್ರಕ್ಕೂ ಶೇಕಡ 20ರಷ್ಟು ಮತಯಂತ್ರಗಳನ್ನು ಹೆಚ್ಚುವರಿಯಾಗಿ ನೀಡಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಆರ್.ಗೋವಿಂದ ರಾಜ್ ಹೇಳಿದರು.
ಸಭೆಯಲ್ಲಿ ತಾಲೂಕು ಚುನಾವಣಾಧಿಕಾರಿ ಕೆ.ರಾಜು, ಸಹಾಯಕ ವಸಂತ ಕುಮಾರ್, ಅಭ್ಯರ್ಥಿಗಳಾದ ಎಂ.ಕೆ. ನಂಜಪ್ಪ, ಎಚ್.ಡಿ. ದೊಡ್ಡಯ್ಯ, ಇತರ ನಾಲ್ಕು ಅಭ್ಯರ್ಥಿಗಳ ಪರವಾಗಿ ಪ್ರತಿನಿಧಿಗಳು ಭಾಗವಹಿಸಿದ್ದರು.