ಗೋಣಿಕೊಪ್ಪಲು, ಮೇ.3 : ಬೇಗೂರು ಗ್ರಾಮದ ಚೀನಿವಾಡ ದಾದು ಪೂವಯ್ಯ ಮನೆಯ ಮೇಲೆ ಗುಂಡಿನ ಧಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯ ಕಾರ್ಯವೈಖರಿಯನ್ನು ಖಂಡಿಸಿ ಪೊನ್ನಂಪೇಟೆ ಗಾಂಧಿ ಪ್ರತಿಮೆಯ ಮುಂದೆ ಬೇಗೂರು, ಚೀನಿವಾಡ ಗಾಮಸ್ಥರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಮುಂಜಾನೆ ಗಾಂಧಿ ಪ್ರತಿಮೆಯ ಮುಂದೆ ಜಮಾವಣೆಗೊಂಡ ಗ್ರಾಮಸ್ಥರು ನಡೆದ ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಗುಂಡಿನ ಧಾಳಿ ನಡೆಸಿರುವ ಆರೋಪಿಯು ಈಗಾಗಲೇ ಹಲವು ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿದ್ದು, ಕೆಲವು ಸಂಶಯಗಳು ಗ್ರಾಮಸ್ಥರಲ್ಲಿ ಆತಂಕ ಮತ್ತು ಭಯವನ್ನು ಮೂಡಿಸಿದೆ. ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಕಾರರು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಅಧ್ಯಕ್ಷರಾದ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ ಎಲ್ಲಾ ಜಾತಿ, ಧರ್ಮದವರೊಂದಿಗೆ ಅನ್ಯೋನ್ಯವಾಗಿದ್ದ ದಾದೂ ಪೂವಯ್ಯ ಅವರ ಮನೆಯ ಮೇಲಿನ ಗುಂಡಿನ ಧಾಳಿಯನ್ನು ಯಾರು ಸಹಿಸಲಾರರು. ಕೊಡಗಿನಲ್ಲಿ ಇಂತಹ ಘಟನೆಗಳಿಗೆ ಅವಕಾಶ ನೀಡಬಾರದು. ಆರೋಪಿ ಮಾಡಿರುವ ಗುಂಡಿನ ಧಾಳಿಯಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಪೊಲೀಸ್ ಇಲಾಖೆಯ ಕೆಲವು ಅಧಿಕಾರಿಗಳು ಆರೋಪಿಯನ್ನು ಬಚಾವ್ ಮಾಡಿರುವ ಸಂಶಯ ಗ್ರಾಮಸ್ಥರಲ್ಲಿ ಮನೆ ಮಾಡಿದೆ. (ಮೊದಲ ಪುಟದಿಂದ) ಯಾವದೇ ಕಾರಣಕ್ಕೂ ಆರೋಪಿ ಯನ್ನು ಇಲಾಖೆಯು ರಕ್ಷಿಸುವ ಪ್ರಯತ್ನ ಮಾಡಬಾರದು. ಕೂಡಲೇ ತನಿಖೆ ಚುರುಕುಗೊಳಿಸಿ ಆರೋಪಿ ಯನ್ನು ಮತ್ತೆ ವಶಕ್ಕೆ ಪಡೆಯುವಂತೆ ಆಗ್ರಹಿಸಿದರು. ಮೂರು ದಿನದ ಒಳಗೆ ಆರೋಪಿಯನ್ನು ವಶಕ್ಕೆ ಪಡೆಯದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸುವದಾಗಿ ಎಚ್ಚರಿಸಿದರು.

ಈಗಾಗಲೇ ಪೊಲೀಸ್ ಇಲಾಖೆ ಕೈಗೊಂಡಿರುವ ತನಿಖೆಯು ಸಾರ್ವಜನಿಕರಿಗೆ ಹಾಗೂ ಗ್ರಾಮಸ್ಥರಿಗೆ, ತೃಪ್ತಿ ತಂದಿಲ್ಲ. ಈತನ ಬಳಿ ಪರವಾನಿಗೆ ಇಲ್ಲದ ಕೋವಿ ಇರುವದು ಗ್ರಾಮಸ್ಥರ ಅರಿವಿಗೆ ಬಂದಿದೆ. ಈತನ ಕೋವಿಯನ್ನು ಶೀಘ್ರವೇ ಇಲಾಖೆ ವಶಪಡಿಸಿಕೊಳ್ಳಬೇಕು. ಗುಂಡು ಹಾರಿಸಿದ ಆರೋಪಿಯು ಮಧ್ಯರಾತ್ರಿಯಲ್ಲಿ ಕಾರಿನಲ್ಲಿ ಬಂದು ಗುಂಡು ಹೊಡೆದ ಕೋವಿ ಯಾರಿಗೆ ಸಂಬಂಧಿಸಿದ ಕೋವಿ ಯಾಗಿದೆ. ಈ ಬಗ್ಗೆ ತನಿಖೆ ಕೈಗೊಳ್ಳಬೇಕು.ತಡ ರಾತ್ರಿಯಲ್ಲಿ ಈತನು ತನ್ನ ಲೈನ್ ಮನೆಯಲ್ಲಿರುವ ಕಾರ್ಮಿಕನನ್ನು ಕರೆದುಕೊಂಡು ಹೋಗುತ್ತಿರುವದಿಂದ ಕಾರ್ಮಿಕನ ವಿಚಾರಣೆ ನಡೆಯಬೇಕು. ದಾದು ಪೂವಯ್ಯ ಅವರ ಮನೆಗೆ ಪೊಲೀಸ್ ಬಂದೋಬಸ್ತ್ ಕಲ್ಪಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸುಜಯ್ ಬೋಪಯ್ಯ,, ಕಾರ್ಯದರ್ಶಿ ಕಳ್ಳಿಚಂಡ ಧನು,ಸಂಚಾಲಕ ಚಿಮ್ಮಂಗಡ ಗಣೇಶ್, ಮುಖಂಡರಾದ ಚೋನಿರ ಸತ್ಯ, ತೀತರಮಾಡ ಸುನೀಲ್, ಆದೇಂಗಡ ಅಶೋಕ್, ಕೆ.ಎನ್. ಚಂಗಪ್ಪ, ರಾಜಮುತ್ತಪ್ಪ,ಎಂ. ಎಸ್.ತಿಮ್ಮಯ್ಯ, ಮಧುಕರುಂಬಯ್ಯ, ಎಂ.ಎಂ. ಜೋಯಪ್ಪ, ಸಿ. ಡಿ.ತಿಮ್ಮಯ್ಯ,ಎಂ.ಎನ್. ಸುಬ್ರಮಣಿ, ಎಂ.ಎಸ್. ಮಾಚಯ್ಯ ದಿನೇಶ್ ಚಿಟ್ಟಿಯಪ್ಪ ,ಕೆ.ಎಸ್.ತಮ್ಮಯ್ಯ, ಎಂ.ಕೆ.ನರೇಂದ್ರ, ಎಂ.ಎನ್. ಸುಬ್ರಮಣಿ, ಬಿ.ಪಿ.ಕುಟ್ಟಪ್ಪ, ಬಿ.ಪಿ.ತಮ್ಮಯ್ಯ, ಬಿ.ಜಿ. ಬಿದ್ದಪ್ಪ, ಬಿ.ಎಂ.ಮನು, ಎಂ.ಎ.ಕಾವೇರಪ್ಪ, ಸುಮಾದಾದು, ಸರ್ಕಲ್ ಇನ್ಸ್‍ಪೆಕ್ಟರ್ ಹರಿಶ್ಚಂದ್ರ ಠಾಣಾಧಿಕಾರಿ ಮಹೇಶ್, ಮುಂತಾದವರು ಹಾಜರಿದ್ದರು.

- ಹೆಚ್.ಕೆ.ಜಗದೀಶ್