ಮಡಿಕೇರಿ, ಮೇ 3 : ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜನತೆಗೆ ಕೇಂದ್ರ ಸರಕಾರದಿಂದ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಯೋಜನೆಗಳು ಮತ್ತು ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರಕಾರದ ಸಾಧನೆಗಳು ತನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಹಾಲಿ ಶಾಸಕ ಹಾಗೂ ಬಿ.ಜೆ.ಪಿ. ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಎಂ.ಪಿ. ಅಪ್ಪಚ್ಚು ರಂಜನ್ ಮುಕ್ತ ನುಡಿಯಾಡಿದರು.ಶಕ್ತಿ’ಯೊಂದಿಗೆ ಸಂದರ್ಶನದಲ್ಲಿ ಮಾತನಾಡಿದ ಅವರು, ಈಗಿನ ಕಾಂಗ್ರೆಸ್ ಸರಕಾರ ಕೊಡಗಿನ ಬಗ್ಗೆ ಮಲತಾಯಿ ಧೋರಣೆ ಅನುಸರಿಸಿದ್ದು, ಇಲ್ಲಿ ಗ್ರಾ.ಪಂ.ನಿಂದ ಸಂಸತ್ ತನಕ ಬಿ.ಜೆ.ಪಿ. ಪ್ರತಿನಿಧಿಸುತ್ತಾ ಸಹಕಾರ ಕ್ಷೇತ್ರ, ಎ.ಪಿ.ಎಂ.ಸಿ. ಮುಂತಾದೆಡೆ ಪಕ್ಷದ ಬಾಹುಳ್ಯವಿರುವದು ಕೊಡಗಿನ ನಿರ್ಲಕ್ಷ್ಯಕ್ಕೆ ಕಾರಣವೆಂದು ಬೊಟ್ಟು ಮಾಡಿದರು.

ಹೀಗಾಗಿ ಜಿಲ್ಲೆಯ ಜನತೆ ಐದು ವರ್ಷದ ಕಾಂಗ್ರೆಸ್ ಸರಕಾರದಿಂದ ಆಕ್ರೋಶಗೊಂಡಿದ್ದು, ಹಿಂದಿನ ಬಿ.ಜೆ.ಪಿ. ಸರಕಾರದ ಅಭಿವೃದ್ಧಿಯನ್ನು ಸದಾ ನೆನಪಿಸಿಕೊಳ್ಳುತ್ತಿದ್ದಾರೆ ಎಂದ ಅವರು, ಕಳೆದ ಎರಡು ದಶಕಗಳಿಂದ ಕೊಡಗಿನಲ್ಲಿ ಬಿ.ಜೆ.ಪಿ. ಅಲೆಯಿದ್ದು, ಪ್ರಸಕ್ತ ಪ್ರಧಾನಿ ನರೇಂದ್ರ ಮೋದಿ ಸರಕಾರದ ಜನಪರ ಯೋಜನೆಗಳು ಇನ್ನಷ್ಟು ಬಲ ತಂದುಕೊಟ್ಟಿದೆ ಎಂದು ವಿಶ್ವಾಸದ ನುಡಿಯಾಡಿದರು.

ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸೌಲಭ್ಯ, ವಿದ್ಯುತ್ ಮಿತ ಬಳಕೆಗೆ ಪೂರಕವಾಗಿ ಸಿ.ಎಫ್.ಎಲ್. ಬಲ್ಬುಗಳು, ಮಹಿಳೆಯರ ಕಣ್ಣೀರು ಒರೆಸಲು ಅಡುಗೆ ಅನಿಲ ಯೋಜನೆ, ಜನೌಷಧಿ, ಆರೋಗ್ಯ ರಕ್ಷಾ ವಿಮೆಯಂಥ ಅನೇಕ ಯೋಜನೆಗಳು ಜನತೆಯ ಬದುಕಿನಲ್ಲಿ ನೆಮ್ಮದಿ ತಂದುಕೊಟ್ಟಿದೆ ಎಂದು ತನಗೆ ಪ್ರಚಾರದ ವೇಳೆ ಅರಿವಿಗೆ ಬರುವಂತಾಯಿತು ಎಂದು ಉದಾಹರಿಸಿದರು.

ಈ ಹಿಂದಿನ ಚುನಾವಣೆಗಳಿಗಿಂತಲೂ ಅಧಿಕ ಬಹುಮತದಿಂದ ತಾವು ಹಾಗೂ ಕೆ.ಜಿ. ಬೋಪಯ್ಯ ಗೆಲವು ಸಾಧಿಸುವದಾಗಿ ಆಶಯ ಹೊರಗೆಡವಿದ ರಂಜನ್, ಕಾರ್ಯಕರ್ತರೊಂದಿಗೆ ಪಕ್ಷದ ಪ್ರಮುಖರು ಉತ್ಸಾಹದಿಂದ ದೇಶದಲ್ಲಿ ಮೋದಿ ಆಶಯ ಸಾಕಾರಗೊಳಿಸಲು ಶ್ರಮಿಸುತ್ತಿರುವದಾಗಿ ನುಡಿದರು.

ಅಭಿವೃದ್ಧಿಗೆ ಅನುದಾನ: ಬಿ.ಜೆ.ಪಿ. ನೇತೃತ್ವದ ರಾಜ್ಯ ಸರಕಾರವಿದ್ದಾಗ ಜಿಲ್ಲೆಯ ಅಭಿವೃದ್ಧಿಗೆ ರೂ. 2,800 ಕೋಟಿ ಅನುದಾನ, ಜಿಲ್ಲಾಡಳಿತ ಭವನ, ಇಂಜಿನಿಯರಿಂಗ್ ಕಾಲೇಜು, ವೈದ್ಯಕೀಯ ಕಾಲೇಜು, ಹಲವೆಡೆ ಪದವಿಪೂರ್ವ ಕಾಲೇಜುಗಳು, ಮಹಿಳಾ ಕಾಲೇಜು, ಪದವಿ ಕಾಲೇಜು ಸಹಿತ ಶಿಕ್ಷಣ, ಆರೋಗ್ಯ, ಅಭಿವೃದ್ಧಿಗೆ ವಿಶೇಷ ಗಮನಹರಿಸಿದ್ದಾಗಿ ರಂಜನ್ ವಿವರಿಸಿದರು.

(ಮೊದಲ ಪುಟದಿಂದ) ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಮತ್ತೆ ಬಿ.ಜೆ.ಪಿ. ಆಡಳಿತದೊಂದಿಗೆ, ಕೇಂದ್ರದಲ್ಲಿ ಪ್ರಧಾನಿ ಮೋದಿ ಅವರ ಕನಸನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ರಾಜ್ಯದಲ್ಲಿ ಯಡಿಯೂರಪ್ಪ ಕೈ ಬಲಪಡಿಸಲು ಬಿ.ಜೆ.ಪಿ.ಗೆ ಜಿಲ್ಲೆಯ ಜನತೆ ಆಶೀರ್ವದಿಸುವಂತೆ ಅವರು ಕಳಕಳಿಯ ನುಡಿಯಾಡಿದರು.

ಜಿಲ್ಲೆಯಲ್ಲಿ ಬಿ.ಜೆ.ಪಿ. ಗೊಂದಲಗಳು ಬಗೆಹರಿದಿದ್ದು, ಎಲ್ಲರೂ ಒಗ್ಗೂಡಿ ವರಿಷ್ಠರ ಮಾರ್ಗದರ್ಶನದೊಂದಿಗೆ ಎರಡು ಕ್ಷೇತ್ರಗಳ ಗೆಲುವಿಗೆ ಶ್ರಮಿಸುವದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.